ಸೋರುತಿಹವು ಮಾನವೀಯ ಸಂಬಂಧಗಳು : ಬಸವಪ್ರಭು ಶ್ರೀ

ಸೋರುತಿಹವು ಮಾನವೀಯ ಸಂಬಂಧಗಳು : ಬಸವಪ್ರಭು ಶ್ರೀ

ದಾವಣಗೆರೆ, ಮೇ 5- ಹಿಂದೆ ಗುಡಿಸಲು, ಹಂಚಿನ ಹಾಗೂ ಮಾಳಿಗೆ ಮನೆಗಳಿದ್ದು, ಮಳೆ ಬಂದರೆ ಸೋರುತ್ತಿದ್ದವು. ಅಲ್ಲಿ ಸಂಬಂಧ ಕಲ್ಲಿನಂತೆ ಗಟ್ಟಿಯಾಗಿರುತ್ತಿದ್ದವು. ಆದರೀಗ ಸಿಮೆಂಟ್ ಮನೆಗಳು ನಿರ್ಮಾಣವಾಗಿವೆ. ಮನೆ ಸೋರುವ ಬದಲು ಸಂಬಂಧಗಳು ಸೋರುತ್ತಿವೆ ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

ನಗರದ ಶಿವಯೋಗಾಶ್ರಮದ ಆವರಣದಲ್ಲಿ ಬಸವ ಜಯಂತ್ಯೋತ್ಸವ ಸಮಿತಿ, ಲಿಂಗಾಯತ ತರುಣ ಸಂಘ, ಬಸವ ಕೇಂದ್ರ, ಶ್ರೀ ಮುರುಘರಾಜೇಂದ್ರ ವಿರಕ್ತಮಠ, ಶ್ರೀ ಜಗದ್ಗುರು ಮುರುಘರಾಜೇಂದ್ರ ಶ್ರೀ ಶಿವಯೋಗಾಶ್ರಮ ಟ್ರಸ್ಟ್ ವತಿಯಿಂದ ಬಸವ ಜಯಂತಿ ಅಂಗವಾಗಿ ಮೊನ್ನೆ ಆಯೋಜಿಸಿದ್ದ ಜಮುರಾ ನಾಟಕೋತ್ಸದ ಎರಡನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು. 

ಪ್ರಸ್ತುತ ಮಾನವೀಯ ಸಂಬಂಧಗಳು ನಾಟಕೀಯವಾಗಿವೆ. ಪ್ರೀತಿ, ವಿಶ್ವಾಸ, ನಂಬಿಕೆ ಗಳು ಮರೆಯಾಗಿ, ಎಲ್ಲೆಡೆ ಸ್ವಾರ್ಥ, ಹೊಟ್ಟೆಕಿಚ್ಚು, ಅಸೂಯೆ, ಅಹಂಕಾರ, ಸ್ವಪ್ರತಿಷ್ಠೆಗಳಿಂದ ಸಂಬಂಧಗಳು ಮುರಿಯುತ್ತಿವೆ ಎಂದರು.

ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ರಾಜ್ಯದಲ್ಲಿ ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿಯೇ ಬಸವ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಜಾರಿಗೆ ತರಲಾಯಿತು ಎಂದರು.

ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ ಮಾತನಾಡಿ, ದಾವಣಗೆರೆಯಲ್ಲಿ ಏಕಕಾಲಕ್ಕೆ ಮೂರ್ನಾಲ್ಕು ನಾಟಕ ಕಂಪನಿಗಳು ಉತ್ತಮ ನಾಟಕಗಳನ್ನು ಪ್ರದರ್ಶನ ಮಾಡುತ್ತಿದ್ದವು. ಆದರೀಗ ನಾಟಕಗಳು ಕಣ್ಮರೆಯಾಗುತ್ತಿದ್ದು, ಕಲಾವಿದರ ಬದುಕು ದುಸ್ತರವಾಗಿದೆ ಎಂದು ವ್ಯಾಕುಲತೆ ವ್ಯಕ್ತಪಡಿಸಿದರು.

 ಬಸವ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ  ಬಿ.ಜೆ. ಅಜಯ್ ಕುಮಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಿನಿಮಾ, ಮೊಬೈಲ್ ಹಾವಳಿಯಿಂದಾಗಿ ನಾಟಕಗಳು ಕಣ್ಮರೆಯಾಗುತ್ತಿವೆ ಎಂದರು. 

ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ ಮಾತನಾಡಿದರು. ನಿವೃತ್ತ ಜಿಲ್ಲಾ ಪರಿಸರ ಅಧಿಕಾರಿ ಕೆ.ಬಿ. ಕೊಟ್ರೇಶ್, ವೃತ್ತಿ ರಂಗಭೂಮಿ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಮಹೇಶ್ವರಪ್ಪ, ವಿಭೂತಿ ಬಸವಾನಂದ ಶರಣರು, ಯುಗಧರ್ಮ ರಾಮಣ್ಣ ಉಪಸ್ಥಿತರಿದ್ದರು. ಎನ್.ಜೆ. ಶಿವಕುಮಾರ್ ನಿರೂಪಿಸಿದರು.

ಕಾರ್ಯಕ್ರಮದ ನಂತರ ಮಹಾಂತೇಶ ರಾಮದುರ್ಗ ರಚನೆ, ನಿರ್ದೇಶನದ `ಸೋರುತಿ ಹುದು ಸಂಬಂಧ’ ನಾಟಕವನ್ನು ಜಮುರಾ ಸುತ್ತಾಟ ತಂಡದವರು ಅಭಿನಯಿಸಿದರು.