ಮಲೇಬೆನ್ನೂರು, ಏ.28- ಪುರೋಹಿತರು, ಅರ್ಚಕರು ಎಲ್ಲಿಯವರೆಗೆ ಸಂಘಟನೆ ಆಗುವುದಿಲ್ಲವೋ ಅಲ್ಲಿಯವರೆಗೆ ಸರ್ಕಾರದ ಸೌಲಭ್ಯಗಳು ಸಿಗುವುದಿಲ್ಲ ಎಂದು ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾದ ಖಜಾಂಚಿ ಕೆ.ಜಿ.ಮಹದೇವಸ್ವಾಮಿ (ಗಣೇಶ್ ಶಾಸ್ತ್ರಿ) ಅಭಿಪ್ರಾಯಪಟ್ಟರು.
ಮಲೇಬೆನ್ನೂರು – ಕುಂಬಳೂರು ರಾಜ್ಯ ಹೆದ್ದಾರಿ ಬದಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಅಖಿಲ ಕರ್ನಾಟಕ ಪುರೋಹಿತ ಮಹಾಸಭಾದ ಸರ್ವ ಸದಸ್ಯರ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಕೇವಲ ಎರಡು ಅಥವಾ ಮೂರು ಸಾವಿರ ರೂ.ಗಳಿಗೆ ಕೈ ಚಾಚುವುದು ಬೇಡ. ನಾವು ಸಂಘಟಿತರಾದರೆ, ರಾಜಕಾರಣಿಗಳು ನಮ್ಮ ಬಳಿಗೆ ಬರುತ್ತಾರೆ. ಇದರಿಂದ ಸರ್ಕಾರದ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತದೆ. ಆದ್ದರಿಂದ ಪುರೋಹಿತರು ಅರ್ಚಕರು ಒಂದಾಗಿ ಸಂಘಟಿತರಾಗಬೇಕೆಂದು ಕರೆ ನೀಡಿದರು.
ವೃತ್ತಿಪರ ಪುರೋಹಿತರು ಹಾಗೂ ಅರ್ಚಕರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಂತ್ರ ಮತ್ತು ಬುದ್ಧಿಶಕ್ತಿಯಿಂದ ಲೋಕಕ್ಕೆ ಸುಖ-ಶಾಂತಿ ಬಯಸುತ್ತಿರುವ ಇವರನ್ನು ಅಸಂಘಟಿತ ಕಾರ್ಮಿಕರೆಂದು ಪರಿಗಣಿಸಿ, ಸರ್ಕಾರ ಪುರೋಹಿತರ ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಬೇಕೆಂದು ಒತ್ತಾಯಿಸಿದರು.
ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾದ ರಾಜ್ಯಾಧ್ಯಕ್ಷ ಚನ್ನಯ್ಯ ಶಾಸ್ತ್ರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವೀರಶೈವ ಷೋಡಶ ಸಂಸ್ಕಾರಗಳ ಬಗ್ಗೆ ಧಾರ್ಮಿಕ, ವೈಜ್ಞಾನಿಕ, ವೈಚಾರಿಕ ವಿಶ್ಲೇಷಣಾ ಶಿಬಿರ ಹಾಗೂ ವೀರಶೈವ ಲಿಂಗಾಯತ, ಜಂಗಮ ಪುರೋಹಿತರ, ಅರ್ಚಕರ, ಜ್ಯೋತಿಷಿಗಳ ಆಚಾರ-ವಿಚಾರ ಸಂಹಿತೆಗಳ ವಿಚಾರ ವಿನಿಮಯ ನಡೆಸಲಾಗುವುದು ಎಂದರು.
ವೀರಭದ್ರೇಶ್ವರ ದೇಗುಲದ ಟ್ರಸ್ಟಿ ಬೆನಕನಕೊಂಡಿ ಉಮಾಶಂಕರ್ ಮಾತನಾಡಿ, ಪುರೋಹಿತರು ಸಮಾಜದಲ್ಲಿ ದೇವರ ಮತ್ತು ಭಕ್ತರ ಮಧ್ಯೆ ಸೇತುವೆ ಇದ್ದ ಹಾಗೆ. ಪುರೋಹಿತರು ಭಕ್ತರ ಹಿತವನ್ನು ಬಯಸುತ್ತಾ ಬಂದಿದ್ದಾರೆ. ಅವರಿಗೆ ಸರ್ಕಾರದ ಸೌಲಭ್ಯ ನೀಡುವುದು ಅವಶ್ಯಕವಾಗಿದೆ ಎಂದರು.
ಕಾರ್ಯದರ್ಶಿ ತುಮಕೂರಿನ ಕೆ.ಎಸ್. ವೀರಪ್ಪ ದೇವರು, ನಿರ್ದೇಶಕರಾದ ಹನುಮನಹಳ್ಳಿ ನಾಗರಾಜಶಾಸ್ತ್ರಿ, ಬೆನಕನಹಳ್ಳಿ ಬೆನಕಯ್ಯ, ಹಾಸನದ ದೇವರಾಜಶಾಸ್ತ್ರಿ, ಹೊನ್ನಾಳಿಎಂ.ಎಸ್.ಶಾಸ್ತ್ರಿಹೊಳೆಮಠ್, ಬೆನಕನಕೊಂಡಿ ಮಲ್ಲಿಕಾರ್ಜುನ್, ಶಿವಶಂಕರ್ ಶಾಸ್ತ್ರಿ, ಮಹಾಸಭಾದ ಚನ್ನಗಿರಿ ತಾಲ್ಲೂಕು ಘಟಕದ ಅಧ್ಯಕ್ಷ ನೀಲಕಂಠಯ್ಯ ಶಾಸ್ತ್ರಿ, ಬೂದಿಸ್ವಾಮಿ, ತುಮಕೂರಿನ ಫಣಿಭೂಷಣ ಆರಾಧ್ಯ, ಸೊರಬ ತಾಲ್ಲೂಕು ಘಟಕ ಸೇರಿದಂತೆ ಹಲವಾರು ಪುರೋಹಿತರು ಪಾಲ್ಗೊಂಡಿದ್ದರು.