ಪರೀಕ್ಷೆಯಲ್ಲಿನ ಅಕ್ರಮದ ತನಿಖೆಗೆ ಎಬಿವಿಪಿ ಆಗ್ರಹ

ಪರೀಕ್ಷೆಯಲ್ಲಿನ ಅಕ್ರಮದ ತನಿಖೆಗೆ ಎಬಿವಿಪಿ ಆಗ್ರಹ

ದಾವಣಗೆರೆ, ಏ.28- ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮವನ್ನು ಪಾರದರ್ಶಕವಾಗಿ ತನಿಖೆಗೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿತು.

ಕರ್ನಾಟಕ ಲೋಕಸೇವಾ ಆಯೋಗ ಹಾಗೂ ಪೊಲೀಸ್ ನೇಮಕಾತಿಯಲ್ಲಿ ಕೇಳಿ ಬರುತ್ತಿದ್ದ ಅಕ್ರಮದ ಆರೋಪವೀಗ ರಾಜ್ಯ ಸರ್ಕಾರ 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಯ ನೇಮಕಾತಿಗೆ ನಡೆಸಿದ ಪರೀಕ್ಷೆ ಯಲ್ಲಿಯೂ ಕೇಳಿ ಬರುತ್ತಿದೆ. ಸುಸ್ಥಿರ ಸಮಾಜ ನಿರ್ಮಾಣದಲ್ಲಿ ಶಿಕ್ಷಣ ಕ್ಷೇತ್ರವು ಮಹತ್ವದ ಪಾತ್ರ ವಹಿಸುತ್ತದೆ. ಆದರೆ ಇಂತಹ ಕ್ಷೇತ್ರದಲ್ಲಿ ಭ್ರಷ್ಟಾಚಾರವು ನಡೆಯುತ್ತಿರುವುದು ಹಾಗೂ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾದ ಗಂಭೀರ ಆರೋಪಗಳು ಇದೀಗ ಕೇಳಿ ಬರುತ್ತಿದ್ದು, ಶಿಕ್ಷಣ ಕ್ಷೇತ್ರಕ್ಕೆ ಇದೊಂದು ಕಪ್ಪು ಚುಕ್ಕೆ ತರುವ ಸಂಗತಿಯಾಗಿದೆ ಎಂದು ಸಂಘಟನೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕೊಳ್ಳೇರ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರವು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ 1242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಗಾಗಿ ನಡೆಸಿದ ಪರೀ ಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಸಂಶ ಯದ ಮೇಲೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ  ದೂರು ದಾಖಲಿಸಿದ್ದು, ಹಲವು ಆರೋಪಿಗಳ ಬಂಧನವಾಗಿದೆ. ಪರೀಕ್ಷೆ ನಡೆದಾ ಗಲೇ ಅಕ್ರಮದ ಸುಳಿವು ಸಿಕ್ಕಿದರೂ ಪರೀಕ್ಷಾ ಪ್ರಾಧಿಕಾರವು ಕ್ರಮ ಕೈಗೊಳ್ಳಲಿಲ್ಲ ಎಂದು ಆಕ್ಷೇಪಿಸಿದರು.

ಜಿಲ್ಲಾ ಹಾಸ್ಟೆಲ್ ಸಹಪ್ರಮುಖ ವರುಣ್ ಕೌಟಿ ಹರಪನಹಳ್ಳಿ, ನಗರ ಎಸ್.ಎಫ್.ಡಿ.ಪ್ರಮುಖ ಮೋಹಿತ್, ಚೈತನ್ಯ, ಶರತ್ ಸೇರಿದಂತೆ ಇತರರು ಇದ್ದರು.