ತುಂಗಭದ್ರಾ ನದಿಯಲ್ಲಿ ವಿಪತ್ತು ನಿರ್ವಹಣಾ ತಂಡದಿಂದ ಅಣಕು ಪ್ರದರ್ಶನ

ತುಂಗಭದ್ರಾ ನದಿಯಲ್ಲಿ ವಿಪತ್ತು ನಿರ್ವಹಣಾ ತಂಡದಿಂದ ಅಣಕು ಪ್ರದರ್ಶನ

ಹರಿಹರ, ಏ. 28 – ನದಿಯಲ್ಲಿ ಅವಘಡ ನಡೆದರೆ ಆತ್ಮ ರಕ್ಷಣೆಯನ್ನು ಹೇಗೆ ಮಾಡಿಕೊಳ್ಳಬೇಕು ಎಂಬ ಮಾಹಿತಿ ತಿಳಿದುಕೊಂಡು ಈಜುವುದು ಒಳ್ಳೆಯದು ಎಂದು ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ ಅವರು ತಿಳಿಸಿದರು.

ನಗರದ ತುಂಗಭದ್ರಾ ನದಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ನದಿಯಲ್ಲಿ ವಿಪತ್ತು ನಿರ್ವಹಣೆ ಕುರಿತು ನಡೆಸಲಾದ ಅಣಕು ಪ್ರದರ್ಶನದ ವೇಳೆ ಅವರು ಮಾತನಾಡುತ್ತಿದ್ದರು. ಬೆಂಗಳೂರಿನ ವಿಪತ್ತು ನಿರ್ವಹಣಾ ತಂಡದ 25ಕ್ಕೂ ಹೆಚ್ಚು ಸದಸ್ಯರು ಅಣಕು ಪ್ರದರ್ಶನ ನಡೆಸಿಕೊಟ್ಟರು.

ಹರಿಹರದ ಶ್ರೀ ಹರಿಹರೇಶ್ವರ ದೇವಾಲಯ, ರಾಘವೇಂದ್ರ ಸ್ವಾಮಿ ಮಠ, ಅಯ್ಯಪ್ಪ ಸ್ವಾಮಿ ದೇವಾಲಯಗಳಿಗೆ ನಾಡಿನಾದ್ಯಂತ ಅಪಾರವಾದ ಭಕ್ತರು ಮತ್ತು ನದಿಗೆ ಪ್ರತಿನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು  ಬರುತ್ತಾರೆ. ಈ ಸಂದರ್ಭದಲ್ಲಿ ಅಪಾಯ ಎದುರಾದರೆ ರಕ್ಷಿಸಿಕೊಳ್ಳುವ ಬಗ್ಗೆ ತಿಳಿದಿರಬೇಕು ಎಂದವರು ಹೇಳಿದರು.

ನದಿಗೆ ಬಿದ್ದವರ ರಕ್ಷಣೆ ಮಾಡಿ ನಂತರದಲ್ಲಿ ಚಿಕಿತ್ಸೆ  ಕುರಿತು ಸಾರ್ವಜನಿಕರಿಗೆ ಮತ್ತು ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳ ತಂಡಕ್ಕೆ ಬೆಂಗಳೂರಿನ ಎನ್.ಡಿ.ಆರ್.ಎಫ್ ತಂಡವು ಸಂಪೂರ್ಣವಾಗಿ ಮಾಹಿತಿ ದೊರಕಿಸಿಕೊಟ್ಟಿದ್ದು ಉತ್ತಮ ಕೆಲಸವಾಗಿದೆ ಎಂದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಜಿ. ನಜ್ಮಾ ಮಾತನಾಡಿ, ಆತ್ಮ ರಕ್ಷಣೆ ಜೊತೆಗೆ ಇತರರ ರಕ್ಷಣೆ ಮಾಡುವುದರಿಂದ ಧೈರ್ಯ ಮತ್ತು ಆತ್ಮಬಲ ಹೆಚ್ಚಾಗುತ್ತದೆ ಎಂದು ಹೇಳಿದರು.

ಸಿಪಿಐ ಸತೀಶ್ ಕುಮಾರ್ ಮಾತನಾಡಿ, ವಿದ್ಯೆಯ ಜೊತೆ ಜೊತೆಗೆ ಡ್ರೈವಿಂಗ್, ಈಜುವುದು, ವ್ಯಾವಹಾರಿಕ, ಕಲೆ ಸೇರಿದಂತೆ ವಿವಿಧ ತರಬೇತಿಗಳ ಬಾಲ್ಯದಲ್ಲೇ ಕಲಿಯಬೇಕು ಎಂದರು.

ಪೌರಾಯುಕ್ತ ಐ. ಬಸವರಾಜ್, ಜಿಲ್ಲಾ ಆರೋಗ್ಯ ಅಧಿಕಾರಿ ನಾಗರಾಜ್, ನಟರಾಜ್, ಪತ್ರಕರ್ತ ಎಂ. ಚಿದಾನಂದ ಕಂಚಿಕೇರಿ , ಕೃಷ್ಣ ರಾಜೊಳ್ಳಿ ಇತರರು ಅಣಕು ಪ್ರದರ್ಶನದಲ್ಲಿ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ವಿಪತ್ತು ನಿರ್ವಹಣಾ ತಂಡದ ಮುಖ್ಯಸ್ಥ ಜೆ. ಸೆಂದಿಲ್ ಕುಮಾರ್ ಕಮಾಂಡರ್, ಎ.ಎಸ್.ಪಿ. ರಾಮಗೊಂಡ ಬಸರಗಿ, ಜಿಲ್ಲಾ ಆರೋಗ್ಯ ಅಧಿಕಾರಿ ನಾಗರಾಜ್, ನಟರಾಜ್, ತಾ.ಪಂ. ಇಓ ಗಂಗಾಧರನ್, ಬೆಸ್ಕಾಂ ಇಲಾಖೆಯ ಲಕ್ಷ್ಮಪ್ಪ, ಕೃಷಿ ಅಧಿಕಾರಿ ಎ.ನಾರನಗೌಡ, ಲೋಕೋಪಯೋಗಿ ಇಲಾಖೆ ಶಿವಮೂರ್ತಿ, ಶಿಕ್ಷಣ ಇಲಾಖೆ ಮಂಜುಳಾ, ಸಿಪಿಐ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.