`ಭ್ರಷ್ಟತೆ’ ಮತ್ತು `ಕರ್ತವ್ಯ ನಿಷ್ಠೆ’ ಸಮಾನಾಂತರವಾಗಿ ಚಲಿಸಲು ಸಾಧ್ಯವೇ…?

`ಭ್ರಷ್ಟತೆ’ ಮತ್ತು `ಕರ್ತವ್ಯ ನಿಷ್ಠೆ’  ಸಮಾನಾಂತರವಾಗಿ ಚಲಿಸಲು ಸಾಧ್ಯವೇ…?

ನಾವೆಲ್ಲಾ ಒಂದಲ್ಲಾ ಒಂದು ಕಾರಣಕ್ಕೆ ಎಲ್ಲಾ ಇಲಾಖೆ, ಕಛೇರಿಗಳಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ, ನಿರ್ಲಜ್ಜ ಲಂಚಗುಳಿತನ, ಅಧಿಕಾರಿ ಗಳಲ್ಲಿನ ವಿಷಯ ಹೀನತೆ, ಅರಾಜಕ ವ್ಯವಸ್ಥೆ, ಅಧಿಕಾರಿಗಳ ಬ್ರಹ್ಮಾಂಡ ದ್ರೋಹ, ಅವರ ಮನೆಗಳ ಮೇಲೆ ನಡೆಸುವ ದಾಳಿಯ ವೇಳೆ ಸಿಕ್ಕುವ ಅಷ್ಟೈಶ್ವರ್ಯ, ಸಿಕ್ಕಿಕೊಳ್ಳಬಾರದೆಂದು ನೋಟಿನ ಕಂತೆಗಳನ್ನು ಚರಂಡಿಯಲ್ಲಿ ಎಸೆದಿರುವುದು, ಇವು ಆವರ್ತಿತವಾಗಿ ಜರುಗುತ್ತಿರುವುದು, ವರ್ಷಗಳು ಉರುಳಿದರೂ ಯಾವುದೇ ಪರಿಣಾಮ ಕಾರಿ ಫಲಿತಾಂಶ ದೊರಕದಿರುವುದು, ನ್ಯಾಯಾಲಯಗಳಲ್ಲಿ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದಿರು ವುದು, ಕಾನೂನು ವ್ಯವಸ್ಥೆ… ಇವುಗಳ ಬಗ್ಗೆ ಮಾತಾಡುತ್ತೇವೆ. ಆದರೆ ಅದಕ್ಕೆ ಅದರ ನಿರ್ಮೂಲನೆ ಅಥವಾ ಪರ್ಯಾಯ ವ್ಯವಸ್ಥೆ ಬಗ್ಗೆ ತಲೆ ಕೆಡಿಸಿಕೊಳ್ಳುವ ಗೋಜಿಗೇ ಹೋಗುವುದಿಲ್ಲ.

ಕರುಣಾನಿಧಿ ಸತ್ತಾಗ ಸಿಂಗಾರವರಿಯದ ಆ ಹೆಣವನ್ನು ಎಲ್ಲಿ ಹೂಳಬೇಕೆಂದು ಜಿಜ್ಞಾಸೆ ಮೂಡಿದಾಗ, ನಡುರಾತ್ರಿಯಲ್ಲಿ ಅದರ ವಿಚಾರಣೆ ನಡೆಸಲು 11 ಘಂಟೆಯಲ್ಲಿ ಕೋರ್ಟ್ ಬಾಗಿಲು ತೆಗೆದುಕೊಂಡು ಗೌನ್ ಹಾಕಿ ಕೂತ ನ್ಯಾಯಾಧೀಶರುಗಳಿಗೆ ಬದುಕಿರುವ ಜೀವಗಳಿಗೆ ಕೂಡಲೇ ನ್ಯಾಯ ಕೊಡಿಸುವ  ಔಚಿತ್ಯ ಮತ್ತು ಪ್ರಾಧಾನ್ಯತೆ ಬಗ್ಗೆ ವಿವೇಚನೆ ಇಲ್ಲದಿರುವುದು ಈ ದೇಶದ ದೌರ್ಭಾಗ್ಯ.

ನಾವೊಮ್ಮೆ ಯೂರೋಪ್ ಪ್ರವಾಸದಲ್ಲಿದ್ದಾಗ ಜರ್ಮನಿಯಲ್ಲಿ ದಾಖಲಾತಿ ಪರಿಶೀಲನೆಗೆ ಬಸ್‌ ನಿಲ್ಲಿಸಿ ದಾಖಲಾತಿ ಪರಿಶೀಲನೆ ನಂತರ ಸರಿಯೆಂದು ತೃಪ್ತರಾದಾಗ, ಉಂಟಾದ ಅಡಚಣೆಯ ಬಗ್ಗೆ ನಮ್ಮೆಲ್ಲರ ಕ್ಷಮೆ ಯಾಚಿಸಿದ ಆ ಅಧಿಕಾರಿಯೆಲ್ಲಿ; ಎಲ್ಲಾ ಸರಿಯಿದ್ದರೂ ಸುಮ್ಮನೇ ಕುಂಟುನೆಪಗಳಿಂದ ಹಣ ಕೀಳುವ ಈ ನರಭಕ್ಷಕ ಕಿರಾತಕರೆಲ್ಲಿ?

`ಭ್ರಷ್ಟತೆ’  ಮತ್ತು `ಕರ್ತವ್ಯ ನಿಷ್ಠೆ’ ಎರಡೂ ಸಮಾನಾಂತರವಾಗಿ ಚಲಿಸಲು ಸಾಧ್ಯವೇ ಇರುವುದಿಲ್ಲ.

“ದುಬೈನಲ್ಲಿ ಕಾನೂನು ಎಂಥಾ ಸ್ಟ್ರಿಕ್ಟುರೀ, ಅಲ್ಲಿ ಅಪರಾಧಗಳೇ ನಡೆಯೊಲ್ಲ” ಎನ್ನುವ ನಾವು ನಮ್ಮ ವಿಜಯನಗರ ಸಾಮ್ರಾಜ್ಯದ ವೈಭವ  ನೆನಪಿಗೆ ಬರುವುದಿಲ್ಲ. ಏಕೆಂದರೆ ಅದು ಇತಿಹಾಸ.

ಇದಕ್ಕೆಲ್ಲಾ ಕಾರಣವಾಗಿದ್ದು ನಮ್ಮನ್ನು ಆಳುವವರ ಕಳ್ಳ ಮನಸ್ಸುಗಳು ಮತ್ತು ನಿರ್ಲಜ್ಜ  ಮನೋಭೂಮಿಕೆ. ಉದಾಹರಣೆಗೆ: Prevention of Benami Transaction Act 1988. ಇದು 1988 ನೇ ಇಸವಿ ಸೆಪ್ಟೆಂಬರ್ 5 ನೇ ತಾರೀಖು ಅಸ್ತಿತ್ವಕ್ಕೆ ಬಂದಿದ್ದರೂ, ಅದರ ಚಲಾವಣೆ ಯಾವ ಅಧಿಕಾರಿ ಅಥವಾ ಆಳುವ ಪಕ್ಷದ ರಾಜಕಾರಣಿಗೂ ಬೇಕಾಗಿರಲಿಲ್ಲ. ಏಕೆಂದರೆ ಮೊದಲು ಕಂಬಿ ಎಣಿಸುತ್ತಿದ್ದವರು ಅವರೇ. 

“No law can be effective
unless there is a strong sanction behind it”. 

ಪಾಶ್ಚಾತ್ಯ ದೇಶಗಳಲ್ಲಿ “Treason” ಅನ್ನು ತುಂಬಾ ಸಂಕೀರ್ಣವಾಗಿ ಮತ್ತು ಸೂಕ್ಷ್ಮವಾಗಿ ವಿಶ್ಲೇಷಿಸಿ ವ್ಯಾಖ್ಯಾನಿಸಿದೆ ಮತ್ತು ಅದನ್ನು ಮುಖ್ಯವಾಹಿನಿಯಾದ  ದಂಡ  ಸಂಹಿತೆಯಲ್ಲಿಯೇ ಸೇರ್ಪಡೆಗೊಳಿಸಿದೆ. 

ನಮ್ಮ ಭಾರತೀಯ ದಂಡ ಸಂಹಿತೆಯು 1860 ರಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ ಅಸ್ತಿತ್ವಕ್ಕೆ ಬಂದಿದ್ದು. ಈ “Treason” ಅನ್ನು ಬ್ರಿಟಿಷರು ಆಗಿನ ಸ್ವಾತಂತ್ರ್ಯ ಸಂಗ್ರಾಮವನ್ನು ಹತ್ತಿಕ್ಕಲು ಮಾತ್ರ ಆತುರಾತುರವಾಗಿ ಸೇರ್ಪಡೆಗೊಳಿಸಿದ್ದು.

ಅದರನ್ವಯ ಈ ಅಪರಾಧವು ಕೇವಲ ದೇಶದ ವಿರುದ್ಧ ಘೋಷಣೆ ಕೂಗುವುದು ಅಥವಾ ಭಿತ್ತಿಪತ್ರ ಪ್ರಕಟಣೆ ಹೊರಡಿಸುವುದು, ಧ್ವಜಕ್ಕೆ ಅಪಮಾನಿಸುವುದು ಎಂದಾಗಿದೆ. ಆದರೆ ದೇಶದ ವಿರುದ್ಧ ಮಾಡುವ ದ್ರೋಹದ ಕೆಲಸ ಅಂದರೆ 
ಆರ್ಥಿಕ  ಅಪರಾಧಗಳು, ತನ್ಮೂಲಕ ದೇಶದ ಭದ್ರತೆ, ಅಭಿವೃದ್ಧಿಗೆ ಮಾರಕವಾಗುವುದನ್ನು ದೇಶದ ವಿರುದ್ಧ ಪಿತೂರಿಯೆಂದು ಪರಿಗಣಿಸಿಯೇ ಇಲ್ಲ.

ಇದನ್ನು ಮನಗಂಡೇ 1971 ರ ಆಗಸ್ಟ್ 31 ರಂದು ನವ ದೆಹಲಿಯ  ಕಾನೂನು ಆಯೋಗವು  ಈ ಅಪರಾಧದ ಕುರಿತು ಸುದೀರ್ಘ ವಿಶ್ಲೇಷಣೆ ಮತ್ತು ಅಳವಡಿಕೆ ಅವಶ್ಯವೆಂದು ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿದೆ.

ಒಂದೊಮ್ಮೆ ಅಭಿವೃದ್ಧಿ ರಾಷ್ಟ್ರಗಳಂತೆ ಇದು ಆಯಿತೆಂದರೆ, ಯಾರೊಬ್ಬರು ಭ್ರಷ್ಟಾಚಾರಿಯಾಗಲಾರ. ಏಕೆಂದರೆ ಇದಕ್ಕೆ ಶಿಕ್ಷೆ ಬಹು ಘೋರ ಮತ್ತು ಭಯಾನಕವಾದದ್ದಾಗಿದೆ. ಇದಕ್ಕೆ ಮರಣ ದಂಡನೆಯೊಂದೇ ಶಿಕ್ಷೆ. ಇದಕ್ಕೆ ಜಾಮೀನೂ ಇಲ್ಲ ಮತ್ತು ವಿಚಾರಣೆ ಕೂಡ ವೇಗವಾಗಿ ನಡೆಯುತ್ತದೆ.

ವಿತಂಡವಾದಕ್ಕೇ ಹೆಸರಾದ ಧುರೀಣರುಗಳು ಇದ್ದಲ್ಲಿ ಇದು ಸಾಧ್ಯವೇ ಇರುವುದಿಲ್ಲ. ಆದ್ದರಿಂದಲೇ ನಮ್ಮ ದೇಶದಲ್ಲಿ ಭ್ರಷ್ಟಾಚಾರ ಯಾವುದೇ ಭಯ, ಆತಂಕಗಳಿಲ್ಲದೇ ಸಾಗಿದೆ.


ರಾಜಶೇಖರ್ ಎನ್.ಸಿ.
ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ
ವಿದ್ಯಾನಗರ, ದಾವಣಗೆರೆ.
rajdfo55@gmail.com