ಚಿಗಟೇರಿ ನಾರದಮುನಿ ರಥೋತ್ಸವ ರಥದ ಗಾಲಿಗೆ ಸಿಲುಕಿ ವ್ಯಕ್ತಿ ಸಾವು

ಚಿಗಟೇರಿ ನಾರದಮುನಿ ರಥೋತ್ಸವ ರಥದ ಗಾಲಿಗೆ ಸಿಲುಕಿ ವ್ಯಕ್ತಿ ಸಾವು

ಚಿಗಟೇರಿ, ಏ.21- ಗುರು ವಾರ ಸಂಜೆ ಶ್ರೀ ನಾರದಮುನಿ ರಥೋತ್ಸವ ಜರುಗುತ್ತಿದ್ದ ವೇಳೆ ಭಕ್ತಿಯ ಆವೇಶದಲ್ಲಿ ರಥವನ್ನು ಎಳೆಯಲು ಮುಂದಾದ ಓರ್ವ ವ್ಯಕ್ತಿ ರಥದ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತ ದುರ್ದೈವಿ ದಾವಣಗೆರೆ ಆರ್‌ಟಿಒ ಕಚೇರಿ ಸಮೀಪದ ಅಶೋಕ ನಗರದ ನಿವಾಸಿ ಸುರೇಶ್ ಬಸವನಗೌಡ (42) ಮೂಲತಃ ಹರಪನಹಳ್ಳಿ ತಾಲ್ಲೂಕು ಕಡಬಗೆರೆಯವರು. ದಾವಣಗೆರೆಯ ಮಹೀಂದ್ರ ಆಟೋ ಮೊಬೈಲ್ ಷೋರೂಂನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ರಥ ಏಳೆಯುವ ಸಂದರ್ಭದಲ್ಲಿ ಮಗುವಿನೊಂದಿಗೆ ಬಂದಿದ್ದ ಸುರೇಶ್ ರಥ ಮುಟ್ಟಿ ಎಳೆಯಲು ಮುಂದಾಗಿದ್ದಾರೆ. ಈ ವೇಳೆ ಅವರೊಟ್ಟಿಗಿದ್ದ ಮಗುವನ್ನು ಪೊಲೀಸರು ಹಿಂದೆ ಸರಿಸಿದ್ದಾರೆ. ಇದೇ ಸಂದರ್ಭದಲ್ಲಿ ರಥದ ಮುಂಭಾಗ 15-20 ಅಡಿ ಮುಂದೆ ರಥ ಎಳೆಯುವ ರಭಸದಲ್ಲಿ ಒಬ್ಬರ ಮೇಲೊಬ್ಬರು ಬಿದ್ದಿದ್ದಾರೆ. ಈ ವೇಳೆ ರಥದ ಒಂದು  ಬದಿಯವರು ರಥ ಎಳೆಯುವುದಕ್ಕೆ ತಕ್ಷಣ ಬ್ರೇಕ್ ಹಾಕಿದ್ದಾರೆ. ಈ ಸಂದರ್ಭದಲ್ಲಿ ರಥದ ಗಾಲಿ ಸುರೇಶ್ ಮೇಲೆ ಹರಿದಿದೆ.

ಕಾಲ್ತುಳಿತದಿಂದಾಗಿ ಕೆಲವರಿಗೆ ಚಿಕ್ಕ ಪುಟ್ಟ ಗಾಯಗಳಾಗಿವೆ. ರಥ ನಿಲ್ಲದೆ ಹೋಗಿದ್ದಲ್ಲಿ ರಥದ ಮುಂಭಾಗವಿದ್ದ ಸುಮಾರು ಏಳೆಂಟು ಜನರ ಮೇಲೆ ರಥ ಹರಿಯುತ್ತಿತ್ತು. ದೊಡ್ಡ ಅವಘಡವೇ ಸಂಭವಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕಳೆದ 29 ವರ್ಷಗಳ ಹಿಂದೆ ಇದೇ ಗ್ರಾಮದಲ್ಲಿ ಹಳೆಯ ರಥಕ್ಕೆ ಸಿಲುಕಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದ ಎಂದು ಹೇಳಲಾಗಿದೆ.