ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು ತರಗತಿಗಳಿಗೆ ತೆರಳದೇ ವಾಪಸ್

ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು ತರಗತಿಗಳಿಗೆ ತೆರಳದೇ ವಾಪಸ್

ಹರಪನಹಳ್ಳಿ, ಫೆ.21- ಪಟ್ಟಣದಲ್ಲಿ ಇದೇ ಪ್ರಥಮ ಬಾರಿಗೆ ಹಿಜಾಬ್ ಧರಿಸಿ ಆಗಮಿಸಿದ ವಿದ್ಯಾರ್ಥಿನಿ ಯರನ್ನು ವಾಪಸ್ ಕಳುಹಿಸಿದ ಘಟನೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಜರುಗಿದೆ. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯು ಅಭ್ಯಾಸ ಮಾಡುವ ಮುಸ್ಲಿಂ ವಿದ್ಯಾರ್ಥಿನಿಯರಲ್ಲಿ ಐದು ಜನರು ಮೊದಲ ಬಾರಿಗೆ ಹಿಜಾಬ್ ಧರಿಸಿ, ತರಗತಿಗೆ ಹಾಜರಾಗಲು ಕಾಲೇಜಿಗೆ ಬೆಳಿಗ್ಗೆ ಆಗಮಿಸಿದರು.

ಪ್ರಥಮ ವರ್ಷದ ವಿಜ್ಞಾನ ವಿಭಾಗದ ಒಬ್ಬರು, ಶಿಕ್ಷಣ ವಿಭಾಗದ ಒಬ್ಬರು, ದ್ವಿತೀಯ ವರ್ಷದ ಶಿಕ್ಷಣ ವಿಭಾಗದ ಇಬ್ಬರು, ಕಲಾ ವಿಭಾಗದ ಒಬ್ಬರು ಒಟ್ಟು 5 ಜನ ವಿದ್ಯಾರ್ಥಿನಿಯರು ಆಗಮಿಸಿದ್ದರು. ಆಗ ಪ್ರಾಚಾರ್ಯ ಸಿ.ಬಿ.ವೆಂಕಟೇಶ್‌ ಅವರು ಇಷ್ಟು ದಿವಸ ಇಲ್ಲದ ಹಿಜಾಬ್ ಇಂದ್ಯಾಕೆ ? ಕಳಚಿ ತರಗತಿಗಳಿಗೆ ಹಾಜರಾಗಿ ಎಂದು ಸೂಚಿಸಿದರು. ಆಗ ವಿದ್ಯಾರ್ಥಿನಿಯರು ಒಪ್ಪಲಿಲ್ಲ.

ಪೋಷಕರು ನಾವು ಹಿಜಾಬ್ ತೆಗೆಸಲ್ಲ, ಹಿಜಾಬ್ ತೆಗೆಸಬೇಕು ಎಂಬ ಆದೇಶ ಎಲ್ಲಿದೆ ಲಿಖಿತವಾಗಿ ಕೊಡಿ ಎಂದು ಕೇಳಿದರು. ಪ್ರಾಚಾರ್ಯರು ಲಿಖಿತವಾಗಿ ಕೊಡುವುದಿಲ್ಲ, ಹಿಜಾಬ್ ತೆಗೆದು ತರಗತಿಗಳಿಗೆ ಹಾಜರಾಗಿ ಎಂದು ತಾಕೀತು ಮಾಡಿದರು. ಅಂತಿಮವಾಗಿ ಹಾಗಾದರೆ ನಾವು ನಮ್ಮ ಮಕ್ಕಳನ್ನು ಮನೆಗೆ ವಾಪಸ್ ಕರೆದುಕೊಂಡು ಹೋಗುತ್ತೇವೆ ಎಂದು ಕಾಲೇಜು ಆವರಣದಿಂದ ಹೊರಟು ಹೋದರು ಎಂದು ಪ್ರಾಚಾರ್ಯರು ತಿಳಿಸಿದರು.