ಧಾರ್ಮಿಕ ಪರಂಪರೆ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ

ಧಾರ್ಮಿಕ ಪರಂಪರೆ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ

ನದಿಹರಳಹಳ್ಳಿಯಲ್ಲಿನ ಧರ್ಮಸಭೆಯಲ್ಲಿ ಶಾಸಕ ಅರುಣಕುಮಾರ ಪೂಜಾರ

ರಾಣೇಬೆನ್ನೂರು, ಫೆ.4- ಇಂದಿನ ಆಧುನಿಕ ಯುಗದಲ್ಲಿ ಧಾರ್ಮಿಕ ಪರಂಪರೆ ಗಳನ್ನು ಉಳಿಸಿಕೊಂಡು ಹೋಗುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.

ತಾಲ್ಲೂಕಿನ ನದಿಹರಳಹಳ್ಳಿ ಗ್ರಾಮದಲ್ಲಿ ಗುರುವಾರ ಶ್ರೀ ಮುರುಡ ಬಸವೇಶ್ವರ ಸ್ವಾಮಿ ದೇವಸ್ಥಾನದ ಕಳಸಾರೋಹಣ ಹಾಗೂ ಅಡ್ಡಪಲ್ಲಕ್ಕಿ ಮಹೋತ್ಸವದ ಧರ್ಮಸಭೆ ಸಮಾ ರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದಿನ ಕಾಲದಲ್ಲಿ ಮಕ್ಕಳು ತಂದೆ-ತಾಯಿಗಳ ಮಾತು ಕೇಳದೇ ಅಡ್ಡದಾರಿ ಹಿಡಿದಾಗ ಅವರಿಗೆ ಗುರುಗಳು ಮಾರ್ಗದರ್ಶನ ನೀಡಿ ಸರಿದಾರಿಯಲ್ಲಿ ಸಾಗುವಂತೆ ಮಾಡುತ್ತಿದ್ದರು. ಆದರೆ ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ಮೊಬೈಲ್ ಎಂಬ ಮಾಯೆಯೊಳಗೆ ಸಿಲುಕಿಕೊಂಡು ನರಳುತ್ತಿ ದ್ದಾರೆ. ಅವರನ್ನು ಸರಿ ದಾರಿಗೆ ತರಲು ಪಾಲಕರು ಗುರುಗಳ ತತ್ವ ಸಿದ್ದಾಂತಗಳನ್ನು ಮಕ್ಕಳಲ್ಲಿ ತುಂಬಬೇಕು ಎಂದರು.

ನಮ್ಮ ತಾಲ್ಲೂಕಿನ ಮುದೇನೂರು ಗ್ರಾಮದಲ್ಲಿ ಜನಿಸಿ ಬೆಳೆದು ಪಂಚಪೀಠಗಳಲ್ಲಿ ಒಂದಾದ ಉಜ್ಜಯಿನಿ ಮಹಾಪೀಠಕ್ಕೆ ಪೀಠಾ ಧಿಪತಿಯಾದ ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ತಾಲ್ಲೂಕಿಗೆ ಕೀರ್ತಿ ತಂದಿರುವುದು ಹೆಮ್ಮೆಯ ವಿಷಯ. ಪ್ರತಿಯೊಬ್ಬರೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದ ಅವರು, ಕೋಡಿಹಾಳ ಗ್ರಾಮದಲ್ಲಿ ಒಂದು ಎಕರೆ ಜಾಗವನ್ನು ಶ್ರೀ ಬಸವೇಶ್ವರ ವಿದ್ಯಾಪೀಠಕ್ಕೆ ಸರ್ಕಾರದಿಂದ ನೀಡಲಾಗುವುದು ಎಂದರು.

ಉಜ್ಜಯಿನಿ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿಯವರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡುತ್ತಾ,  ಪತ್ರಿ ಗ್ರಾಮದ ಜನರ ಕಷ್ಟ, ನೋವುಗಳನ್ನು ದೇವರಿಗೆ ಮುಟ್ಟಿಸುವ ಕೆಲಸವನ್ನು ಗುಡಿ-ಗೋಪುರಗಳು ಮಾಡುತ್ತಿವೆ. ಜನರ ಮೊಬೈಲ್‍ಗೆ ಟವರ್ ಇಲ್ಲದೇ ನೆಟ್‌ವರ್ಕ್ ಸಿಗದೇ ಕರೆಗಳು ಹೋಗುವುದಿಲ್ಲ. ಅದೇ ರೀತಿ ದೇವಸ್ಥಾನದ ಗೋಪುರಕ್ಕೆ ಕಳಸಾ ಇಲ್ಲದೇ ಹೋದರೆ ದೇವರಿಗೆ ನಾವು ಕಳುಹಿಸುವ ಸಂದೇಶಗಳು ಮುಟ್ಟುವುದಿಲ್ಲ. ಆದ್ದರಿಂದ ದೇವಸ್ಥಾನಗಳು ಸಣ್ಣದಿರಲಿ, ದೊಡ್ಡದಿರಲಿ ಗೋಪುರಕ್ಕೆ ಕಳಸ ಟವರ್ ಇದ್ದಂತೆ ಎಂದು ನುಡಿದರು.

ದಾವಣಗೆರೆ ಆವರಗೊಳ್ಳ ಹಿರೇಮಠದ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಮಹಾಸ್ವಾಮಿ, ಹಿರೇಹಡಗಲಿ ಶ್ರೀ ಗುರು ಹಾಲಸ್ವಾಮೀಜಿ ಸಂಸ್ಥಾನಮಠದ ಸದ್ಗುರು ಶ್ರೀ ಶಿವಯೋಗಿ ಹಾಲಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. 

ಇದಕ್ಕೂ ಮುಂಚೆ ಗ್ರಾಮದಲ್ಲಿ ಉಜ್ಜಯಿನಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಪುರಪ್ರವೇಶ ಮತ್ತು ಕಳಸಾರೋಹಣ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂತರ ಶ್ರೀ ಮುರುಡ ಬಸವೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಕಳಸ ಪೂಜೆ ಹಾಗೂ ಹೋಮ ಹವನಾದಿಗಳು ಜಗದ್ಗುರುಗಳ ಅಮೃತ ಹಸ್ತದಿಂದ ನೆರವೇರಿತು.

ಜಿ.ಪಂ. ಮಾಜಿ ಸದಸ್ಯೆ ಮಂಗಳಗೌರಿ ಅರುಣಕುಮಾರ ಪೂಜಾರ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಚೋಳಪ್ಪ ಕಸವಾಳ, ಎನ್‍ಡಬ್ಲೂಕೆಎಸ್‍ಆರ್‍ಟಿಸಿ ನಿರ್ದೇಶಕ ಸಂತೋಷಕುಮಾರ ಪಾಟೀಲ, ಕೆಪಿಸಿಸಿ ಸದಸ್ಯ ಪ್ರಕಾಶ ಕೋಳಿವಾಡ, ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಪಾಟೀಲ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

Comments are closed.