ಉಚ್ಚಂಗಿದುರ್ಗ ಜಾತ್ರೆ ಸರಳ ಆಚರಣೆ

ಉಚ್ಚಂಗಿದುರ್ಗ ಜಾತ್ರೆ ಸರಳ ಆಚರಣೆ

ಸಹಕರಿಸಲು ಪೂರ್ವಭಾವಿ ಸಭೆಯಲ್ಲಿ ಶಾಸಕ ಎಸ್.ವಿ. ರಾಮಚಂದ್ರ ಕರೆ

ಹರಪನಹಳ್ಳಿ, ಫೆ.4- ಇತಿಹಾಸ ಪ್ರಸಿದ್ಧ ಉಚ್ಚಂಗಿದುರ್ಗ ಗ್ರಾಮದ ಶಕ್ತಿದೇವತೆ ಹಾಗೂ ಅಪಾರ ಭಕ್ತರ ಆರಾಧ್ಯ ದೈವ ಉಚ್ಚಂಗೆಮ್ಮದೇವಿಯ ಭರತ ಹುಣ್ಣಿಮೆ ಜಾತ್ರೆಯನ್ನು ಕೊರೊನಾ ಮಾರ್ಗಸೂಚಿ ಅನ್ವಯ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಬೇಕಾಗಿರುವುದು ನಮ್ಮ ದುರ್ದೈವ ಎಂದು ಶಾಸಕ ಎಸ್.ವಿ. ರಾಮಚಂದ್ರ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ಉಚ್ಚಂಗಿ ದುರ್ಗದ ಉಚ್ಚೆಂಗೆಮ್ಮ ದೇವಿ ಯಾತ್ರಿ ನಿವಾಸದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಭರತ ಹುಣ್ಣಿಮೆ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರತಿ ವರ್ಷ ಭರತ ಹುಣ್ಣಿಮೆ ಹಾಗೂ ಯುಗಾದಿ ಸಂದರ್ಭದಲ್ಲಿ ಮಧ್ಯ ಕರ್ನಾಟಕದ ವಿವಿಧ ಜಿಲ್ಲೆ ಹಾಗೂ ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಸಹಸ್ರಾರು ಭಕ್ತರ ಶ್ರದ್ಧಾ ಕೇಂದ್ರವಾದ ಉಚ್ಚಂಗಿದುರ್ಗದ ಉಚ್ಚಂಗೆಮ್ಮದೇವಿ ಉತ್ಸವ ವಿಜೃಂಭಣೆ ಯಿಂದ ನೆರವೇರುವ ಮೂಲಕ ಭಕ್ತರ ಇಷ್ಟಾರ್ಥ ಸಿದ್ಧಿಗೆ ಮುನ್ನುಡಿ ಬರೆಯುತ್ತಿತ್ತು. ಆದರೆ, ಕಳೆದ ಎರಡು ವರ್ಷಗಳಿಂದ ನಾಡಿಗೆ ವಕ್ಕರಿಸಿರುವ ಕೋವಿಡ್-19 ಸಾಂಕ್ರಾಮಿಕ ವೈರಸ್‍ನಿಂದಾಗಿ, ಜಾತ್ರೆ ಕಳೆಗುಂದುವ ಮೂಲಕ ಭಕ್ತರ ಧಾರ್ಮಿಕ ಪರಂಪರೆಯ ಆಚರಣೆಗೂ ಅಡ್ಡಿಯಾಗಿದೆ. ಅಪಾರ ದೈವಿ ಭಕ್ತನಾದ ನನಗೂ ದೇವಿಯ ಆಶೀರ್ವಾದ ದಿಂದ ವಂಚಿತನಾಗುವ ಅನಿವಾರ್ಯತೆ ಎದುರಾಗಿದೆ ಎಂದು ಶಾಸಕ ರಾಮಚಂದ್ರ ಹೇಳಿದರು.

ಸರ್ಕಾರದ ಜತೆ ಕೈಜೋಡಿಸುವ ನಿಟ್ಟಿನಲ್ಲಿ ನಾವು ದೇವಿಯ ಉತ್ಸವವನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸುವ ಮೂಲಕ ಸರ್ಕಾರದ ಜತೆ ಕೈಜೋಡಿಸೋಣ. ದೇವಿಯ ಸನ್ನಿಧಿಯಲ್ಲಿ ಜರುಗುವ ಎಲ್ಲಾ ಧಾರ್ಮಿಕ ಪೂಜಾದಿ ಕಾರ್ಯಗಳನ್ನು, ಪರಂಪರೆಯನ್ನು ದೂರದರ್ಶನದಲ್ಲಿ ನೇರಪ್ರಸಾರ ಮಾಡುವ ಮೂಲಕ ಭಕ್ತರಿಗೆ ದೇವಿ ದರ್ಶನ ವ್ಯವಸ್ಥೆ ಕಲ್ಪಿಸುವಂತೆ ಶಾಸಕ ರಾಮಚಂದ್ರ ಅಧಿಕಾರಿಗಳಿಗೆ ಸಲಹೆ ನೀಡಿದರು. 

ದೇವಿಯ ಉತ್ಸವ ಸರಳವಾಗಿ ನಡೆಯಲಿದೆ. ಹೀಗಾಗಿ, ವ್ಯಾಪಕವಾಗಿ ಭಕ್ತರು ಸೇರುವುದನ್ನು ನಿಷೇಧಿಸಲಾಗಿದೆ. ಹೊರಗಡೆಯಿಂದ ಭಕ್ತಾದಿಗಳು ಈ ಬಾರಿ ದೇವಿಯ ಉತ್ಸವಕ್ಕೆ ಬರುವುದು ಬೇಡ. ಯುಗಾದಿ ಸಂದರ್ಭಕ್ಕೆ ಕೊರೊನಾ ವೈರಸ್ ಕಡಿಮೆಯಾದಾಗ ಅದ್ದೂರಿಯಾಗಿ ಉತ್ಸವ ಆಚರಿಸೋಣ. ಗಿರಿಯ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಭರತ ಹುಣ್ಣಿಮೆಯಂದು ಮುತ್ತು ಕಟ್ಟುವ ಪರಂಪರೆ ನಡೆಯುತ್ತದೆ ಎಂಬ ಹಿನ್ನೆಲೆಯಲ್ಲಿ ಆನೆಹೊಂಡ, ಅರಿಶಿಣ ಹೊಂಡ, ಹಾಲಮ್ಮನತೋಪು ಸೇರಿದಂತೆ ಪ್ರಮುಖ ಸ್ಥಳಗಳ ಎಲ್ಲಾ ಕಡೆಗಳಲ್ಲಿಯೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಅನಿಷ್ಟ ಪದ್ಧತಿಯ ಆಚರಣೆಗೆ ಅವಕಾಶ ಕಲ್ಪಿಸದಂತೆ ಕಟ್ಟೆಚ್ಚರವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

 ದೇವಸ್ಥಾನವನ್ನು ಸುಸಜ್ಜಿತವಾಗಿ ನವೀಕರಿಸುವ ಕಾರ್ಯ ನಡೆದಿದೆ. ಅದರ ಜತೆಗೆ ಇಡೀ ಕ್ಷೇತ್ರವನ್ನು ಮಾದರಿ ಪ್ರವಾಸಿ ಕ್ಷೇತ್ರವನ್ನಾಗಿಸುವ ಹಿನ್ನೆಲೆಯಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಭಕ್ತರ ಅನುಕೂಲಕ್ಕಾಗಿ ಶೌಚಾಲಯ, ಕುಡಿಯುವ ನೀರು ಪೂರೈಕೆ, ಸಿಸಿ ರಸ್ತೆ ನಿರ್ಮಾಣ ಸೇರಿದಂತೆ ಸಕಲ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಪಾದಗಟ್ಟೆ ಹಾಗೂ ದೇವಸ್ಥಾನದ ಮುಂಭಾಗದಲ್ಲಿ ಅಂಗಡಿಗಳನ್ನು ತೆರೆಯದಂತೆ ಜಾಗೃತಿ ವಹಿಸಿ ಎಂದು ಶಾಸಕರು ಸೂಚಿಸಿದರು.

ತಹಶೀಲ್ದಾರ್ ನಂದೀಶ್ ಹಾಗೂ ಸಿಪಿಐ ನಾಗರಾಜ ಕಮ್ಮಾರ್, ಮಾತನಾಡಿ, ಹೂವಿನಹಡಗಲಿ ತಾಲ್ಲೂಕಿನ ಮೈಲಾರ, ಕುರುವತ್ತಿ, ಕೊಟ್ಟೂರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಸೇರಿದಂತೆ ಈ ಭಾಗದ ಪ್ರಸಿದ್ಧ ಜಾತ್ರೋತ್ಸವಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ, ಸರ್ಕಾರದ ಮಾರ್ಗಸೂಚಿ ಅನ್ವಯ ಸರಳ ಹಾಗೂ ಸಾಂಕೇತಿಕವಾಗಿ ದೇವಿಯ ಉತ್ಸವ ಆಚರಣೆಗೆ ಗ್ರಾಮಸ್ಥರು ಹಾಗೂ ಭಕ್ತರು ಸಹಕರಿಸುವ ಮೂಲಕ ವೈರಸ್ ನಿರ್ಮೂಲನೆಗೆ ಕೈಜೋಡಿಸಿ ಎಂದರು.

ಮುಜರಾಯಿ ಇಲಾಖೆ ಉಪವಿಭಾಗಾಧಿಕಾರಿ ಪ್ರಕಾಶ್, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್, ದೇವದಾಸಿ ಪುನರ್‍ವಸತಿ ವಿಮೋಚನಾ ಯೋಜನಾಧಿಕಾರಿ ಪ್ರಜ್ಞಾ ಪಾಟೀಲ್ ಇತರರು ಮಾತನಾಡಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಹಾಲಸ್ವಾಮಿ, ಅರಸೀಕೆರೆ ಪಿಎಸ್‍ಐ ನಾಗರತ್ನ,  ಇಂಜಿನಿಯರ್ ಗಜೇಂದ್ರ, ಕೆಇಬಿ ಇಂಜಿನಿಯರ್ ಮಂಜುನಾಥ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸಾಕಮ್ಮ, ಉಪಾಧ್ಯಕ್ಷರಾದ ಕಾಳಮ್ಮ, ಸದಸ್ಯರಾದ ಹಾಲೇಶ್, ಪಿ. ಕೆಂಚಪ್ಪ, ಯುವರಾಜ, ಮಮತಾ ಸಿದ್ದನಗೌಡ, ಮುಖಂಡರಾದ ಎಸ್, ಹನುಮಂತಪ್ಪ, ಫಣಿಯಾಪುರ ಲಿಂಗರಾಜ್, ಬಾಲೇನಹಳ್ಳಿ ಕೆಂಚನಗೌಡ, ಉಚ್ಚಪ್ಳ ಜಯಣ್ಣ. ಎಂ.ಜಿ.ಸಿದ್ದನಗೌಡ್ರು,  ಭರಮಪ್ಪ, ಸಿದ್ದೇಶ, ಉಮೇಶ, ಕೆಂಚಜ್ಜ, ಬಿದ್ದಪ್ಪ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಉಮೇಶ್, ದೇವಸ್ಥಾನದ ಉತ್ಸವಾಂಭ ದೇವಿಯ ಕಾರ್ಯ ನಿರ್ವಹಕ ಅಧಿಕಾರಿ ಮಲ್ಲಪ್ಪ ಹಾಗೂ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.