ನೇರ ಪಾವತಿ ಪೌರ ಕಾರ್ಮಿಕರ ಖಾಯಂಗೆ ಆಗ್ರಹ

ದಾವಣಗೆರೆ, ಫೆ. 3- ನಗರ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ 245 ನೇರ ಪಾವತಿ ಪೌರ ಕಾರ್ಮಿಕರನ್ನು ಖಾಯಂಗೊಳಿಸ ಬೇಕು. ಗೃಹಭಾಗ್ಯ ಯೋಜನೆಯಡಿ ಪೌರ ಕಾರ್ಮಿಕರಿಗೆ ಮಂಜೂರಾತಿ ಪತ್ರ ನೀಡುವಂತೆ ರಾಜ್ಯ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರ ಕಾರ್ಮಿಕರ ಮಹಾ ಸಂಘದ ದಾವಣಗೆರೆ ಜಿಲ್ಲಾ ಶಾಖೆ ಆಗ್ರಹಿಸಿದೆ.

 ಈ ಕುರಿತು ಮಾತನಾಡಿದ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷ ಎಲ್.ಎಂ. ಹನುಮಂತಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಹೆಚ್. ವೀರಭದ್ರಪ್ಪ ಅವರು, ಕಳೆದ ಆರು ತಿಂಗಳಿನಿಂದ ಕೆಲಸ ನಿರ್ವಹಿಸಿದ ಇತರೆ 89 ಜನ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕು. ಮೃತ ಕಾರ್ಮಿಕರ ಮಕ್ಕಳಿಗೆ ಸಹ ನೇರ ಪಾವತಿ ಕೆಲಸ ನೀಡುವಂತೆ ಒತ್ತಾಯಿಸಿದರು.

ಗೃಹಭಾಗ್ಯ ಯೋಜನೆಯಡಿ ಮನೆಗಳ ನಿರ್ಮಾಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಖಾಯಂ ಪೌರಕಾರ್ಮಿಕರಿಗೆ ಮನೆಗಳನ್ನು ಹಂಚಿಕೆ ಮಾಡಬೇಕು ಎಂದು ಮನವಿ ಮಾಡಿದರು.

ಕಳೆದ 15- 16 ವರ್ಷಗಳಿಂದಲೂ ನೇರ ಪಾವತಿ ಕಾರ್ಮಿಕರು ತಮ್ಮ ಕುಟುಂಬ, ಆರೋ ಗ್ಯವನ್ನು ಲೆಕ್ಕಿಸದೇ ನಗರ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ಆದೇಶ ಹೊರಡಿಸಿತ್ತು. ಆದರೆ ಈಗಿನ ಬಿಜೆಪಿ ಆಡಳಿತದಲ್ಲಿ ಪಾಲಿಕೆ ಟೆಂಡರ್ ಕರೆದಿದ್ದು, ಕೂಡಲೇ ಟೆಂಡರ್ ಪದ್ಧತಿಯನ್ನು ರದ್ದು ಮಾಡಬೇಕು. ನೇರ ಪಾವತಿ ಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು.

 ಸಂಘದ ಪ್ರಮುಖ ಬೇಡಿಕೆಗಳನ್ನು ಫೆ. 8 ರೊಳಗಾಗಿ ಈಡೇರಿಸದಿದ್ದರೆ ಫೆ. 9 ರಿಂದ  ಪೊರಕೆ ಚಳವಳಿ, ಮಹಾನಗರ ಪಾಲಿಕೆಗೆ ಮುತ್ತಿಗೆ, ಮಲ-ಮೂತ್ರ ಸುರಿದುಕೊಂಡು ಪ್ರತಿಭಟನೆ, ಸಿದಗಿಯೊಂದಿಗೆ ಸಮಾಧಿ ಮಾಡುವ ಮೂಲಕ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಚ್ಚರಿಸಿದರು.

ಬಿಜೆಪಿ ಸರ್ಕಾರ ಜಾತಿವಾದಿ, ದಲಿತ ವಿರೋಧಿ, ಪೌರ ಕಾರ್ಮಿಕರ ವಿರೋಧಿ ಸರ್ಕಾರವಾಗಿದೆ. ಪಾಲಿಕೆ ಉನ್ನತ ಅಧಿಕಾರಿಗಳು ಅಭಿವೃದ್ಧಿಯತ್ತ ಗಮನಹರಿಸದೇ ಕೇವಲ ಲಂಚ ಪಡೆಯುವಲ್ಲಿ ಮುಂದಾಗಿದ್ದಾರೆಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಎನ್. ನೀಲಗಿರಿಯಪ್ಪ, ಎಲ್.ಹೆಚ್. ಸಾಗರ್, ಮಲ್ಲೇಶ್ ಕುಕ್ಕುವಾಡ ಮುಂತಾದವರಿದ್ದರು.