ಹರಪನಹಳ್ಳಿ: ತರಾತುರಿಯಲ್ಲಿ ನಿವೇಶನಗಳಿಗೆ ಖಾತೆ ಹಂಚಿಕೆ

ಹರಪನಹಳ್ಳಿ: ತರಾತುರಿಯಲ್ಲಿ ನಿವೇಶನಗಳಿಗೆ ಖಾತೆ ಹಂಚಿಕೆ

ಪುರಸಭೆ ಕ್ರಮ ಖಂಡಿಸಿ ಸದಸ್ಯರಿಂದ ಡಿಸಿಗೆ ದೂರು

ಹರಪನಹಳ್ಳಿ, ಜ.27-  ಪಟ್ಟಣದ ಪುರಸಭೆ ವ್ಯಾಪ್ತಿಗೆ ಒಳಪಡುವ ಸರ್ವೆ ನಂಬರ್ 365/2 ಮತ್ತು 355/1 ರ ಜಮೀನುಗಳಲ್ಲಿ ಕೈಗೊಂಡಿರುವ ನಿವೇಶನಗಳ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಮಾಲೀಕರಿಂದ ಸರಿಯಾಗಿ ದಾಖಲೆಗಳನ್ನು ಪಡೆಯದೇ ತರಾತುರಿಯಲ್ಲಿ ನಿವೇಶನಗಳಿಗೆ ಖಾತೆ ಹಂಚಿಕೆ ಮಾಡಲು ಮುಂದಾಗಿರುವ ಕ್ರಮ ಖಂಡಿಸಿ ಪುರಸಭೆ ಸದಸ್ಯರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಈ ಸಂಬಂಧ ಜ.24 ರಂದು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿ ಬಂದಿರುವ ಪುರಸಭೆ ಸದಸ್ಯರಾದ ಜಾಕೀರ್ ಹುಸೇನ್, ಜೋಗಿನರ್ ಭರತೇಶ್, ಕೆ.ಸಾಹೀರಾ ಬಾನು, ಮತ್ತು ತಳವಾರ್ ಲಕ್ಕಮ್ಮ ಇವರುಗಳು ಪತ್ರಿಕಾ ಹೇಳಿಕೆ ನೀಡಿದ್ದು, ಪುರಸಭೆ ವ್ಯಾಪ್ತಿಗೆ ಸಂಬಂಧಪಟ್ಟಂತೆ ಸರ್ವೆ ನಂಬರ್ 365/2 ರ ಪೈಕಿ 4 ಎಕರೆ 87 ಸೆಂಟ್ಸ್ ಹಾಗೂ 355/1 ರ ಪೈಕಿ 5 ಎಕರೆ 6 ಸೆಂಟ್ಸ್ ಜಮೀನಿಗೆ ಸಂಬಂಧಪಟ್ಟ ಮಾಲೀಕರು ಈಗಾಗಲೇ ತಮ್ಮ ಜಮೀನುಗಳಲ್ಲಿ ರಚನೆ ಮಾಡಿಕೊಂಡಿರುವ ನಿವೇಶನಗಳಿಗೆ ಖಾತೆ ಹಂಚಿಕೆ ಮಾಡಿಕೊಡಲು ಪುರಸಭೆ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಿರುತ್ತಾರೆ.

ಆದರೆ ಪುರಸಭೆ ಅಧಿಕಾರಿಗಳು ಮಾಲೀಕರು ಸಲ್ಲಿಸಿರುವ ಅರ್ಜಿಯ ದಾಖಲಾತಿಗಳನ್ನು ಸರಿಯಾಗಿ ಪರಿಶೀಲನೆ ಮಾಡದೇ ಸಂಬಂಧಪಟ್ಟ ದಾಖಲಾತಿಗಳನ್ನು ಪಡೆದುಕೊಳ್ಳದೇ ನಿವೇಶನಗಳಿಗೆ ಖಾತೆ ಹಂಚಿಕೆ ಮಾಡಲು ಮುಂದಾಗಿದ್ದನ್ನು ಪ್ರಶ್ನಿಸಿ ಕಳೆದ ಸಾಮಾನ್ಯ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದರೂ ಸಹ ಅದನ್ನು ಲೆಕ್ಕಿಸದೇ ತರಾತುರಿಯಲ್ಲಿ ನಿವೇಶನಗಳಿಗೆ ಖಾತೆ ಹಂಚಿಕೆ ಮಾಡಲು ಆದೇಶ ಮಾಡಿದ್ದನ್ನು ಖಂಡಿಸಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದೇವೆ ಎಂದರು.

ಕೂಡಲೇ ಖಾಲಿ ನಿವೇಶನಗಳಿಗೆ ಡೋರ್ ನಂಬರ್ ಹಂಚಿಕೆ ಮಾಡಲು ಮಾಡಿರುವ ಆದೇಶವನ್ನು ಹಿಂಪಡೆದುಕೊಳ್ಳುವಂತೆ ಹಾಗೂ ಪುರಸಭೆ ಕಾರ್ಯಾಲಯಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.