ಮತದಾನದ ಬಗ್ಗೆ ತಾತ್ಸಾರ ಭಾವ ಬೇಡ

ಮತದಾನದ ಬಗ್ಗೆ ತಾತ್ಸಾರ ಭಾವ ಬೇಡ

ಯುವ ಮತದಾರರಿಗೆ ಜಿಪಂ ಸಿಇಓ ವಿಜಯ ಮಹಾಂತೇಶ್ ಕಿವಿಮಾತು

ದಾವಣಗೆರೆ, ಜ.25- ಪ್ರಸ್ತುತ ಮತದಾನದ ಸಂಖ್ಯೆ ಕ್ಷೀಣಿಸಲು ಯುವ ಮತದಾರರಲ್ಲಿ ಮತದಾನದ ಬಗ್ಗೆ ತಾತ್ಸಾರ ಮನೋಭಾವ ಇರುವುದೇ ಕಾರಣವಾಗಿದ್ದು, ಇದರಿಂದ ಹೊರಬರಬೇಕಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ್ ತಿಳಿಸಿದರು.

ಅವರು, ಇಂದು ನಗರದ ನಗರ ಪಾಲಿಕೆ ಆವರಣದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಗುಂಡಾಳ್ ಬಿಜಿನೆಸ್ ಡೇಟಾ ಸೆಲ್ಯೂಷನ್ಸ್, ಮಹಾನಗರ ಪಾಲಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 12ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಮತದಾನದ ಹಕ್ಕು ಇತರೆ ಹಕ್ಕುಗಳಿ ಗಿಂತಲೂ ಬಹಳಷ್ಟು ವಿಭಿನ್ನವಾಗಿದ್ದು, ದೇಶದ ಚಿತ್ರಣವನ್ನೇ ಬದಲಿಸುವ ಶಕ್ತಿ ಇದೆ. ಭಾರತದಲ್ಲಿ ಸ್ವಾತಂತ್ರ್ಯ ಸಿಕ್ಕ ನಂತರ ಸಂವಿಧಾನದಲ್ಲಿ ಪ್ರತಿಯೊಬ್ಬ ಪ್ರಜೆಗೂ ಮತ ಚಲಾಯಿಸುವ ಹಕ್ಕನ್ನು ನೀಡಲಾಗಿದೆ. ಬಹಳಷ್ಟು ದೇಶಗಳಲ್ಲಿ ಈ ಹಕ್ಕು ಇಲ್ಲ. 18 ವರ್ಷ ಮೇಲ್ಪಟ್ಟಂತಹ ಯುವ ಮತದಾರರಲ್ಲಿ ತಾತ್ಸಾರ ಭಾವವಿರುವ ಕಾರಣ ಮತದಾರರ ನೋಂದಣಿಯಲ್ಲಾಗಲೀ, ಮತದಾನ ಮಾಡುವುದರಲ್ಲಾಗಲೀ ಕ್ಷೀಣಿಸುವುದನ್ನು ಕಾಣಲಾಗುತ್ತಿದ್ದು, ನಗರ ಪ್ರದೇಶಗಳಲ್ಲೇ ಶೇ.40 ರಿಂದ 50ರಷ್ಟು ಅಷ್ಟೇ ಮತದಾನ ವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಒಂದು ಮತದಿಂದ ದೇಶದ ಭವಿಷ್ಯವೇ ಅಡಗಿದೆ. ನನ್ನ ಮತ ನನ್ನ ಭವಿಷ್ಯ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸ್ಪರ್ಧೆ ಏರ್ಪಡಿಸುವ ಮುಖೇನ ಯುವ ಮತದಾರರನ್ನು ಮತದಾನದ ನೋಂದಣಿ ಮತ್ತು ಮತದಾನಕ್ಕೆ ಪ್ರೋತ್ಸಾಹಿಸಲಾಗುತ್ತಿದೆ. ಕೇವಲ ನೋಂದಣಿ ಮಾಡಿಸುವುದಷ್ಟೇ ಅಲ್ಲದೇ ಮತಗಟ್ಟೆಗೆ ಹೋಗಿ ಮತ ಚಲಾಯಿಸಬೇಕು, ನೀವಷ್ಟೇ ಅಲ್ಲದೇ ನಿಮ್ಮ ಕುಟುಂಬ, ಅಕ್ಕಪಕ್ಕದ ಮನೆಯವರಿಗೂ ಸಹ ಮತ ಚಲಾಯಿಸುವಂತೆ ಪ್ರೇರಣೆ ನೀಡಬೇಕು ಎಂದು ಯುವ ಮತದಾರರಿಗೆ ತಿಳಿ ಹೇಳಿದರು.

ಜನವರಿ 25, 1950ರ ಕೇಂದ್ರ ಚುನಾವಣಾ ಆಯೋಗದ ಸಂಸ್ಥಾಪನಾ ದಿನವನ್ನು ಪ್ರತಿ ವರ್ಷ ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸುವ ಜೊತೆಗೆ ಜನವರಿಯಲ್ಲಿ 18 ವರ್ಷ ಮೇಲ್ಪಟ್ಟ ಯುವ ಮತದಾರರಿಗೆ ಮತದಾನದ ನೋಂದಣಿ, ಮತದಾನದ ಗುರುತಿನ ಚೀಟಿ ನೀಡಿ, ಮತದಾನದಲ್ಲಿ ಭಾಗವಹಿಸಲು ಹುಮ್ಮಸ್ಸು ತುಂಬಲಾಗುತ್ತಿದೆ. ಅಲ್ಲದೇ ಶಾಲಾ-ಕಾಲೇಜು ಮಟ್ಟದಲ್ಲಿ ಜಿಲ್ಲೆ, ತಾಲ್ಲೂಕು, ರಾಜ್ಯಮಟ್ಟದಲ್ಲಿ ವಿವಿಧ ಸ್ಪರ್ಧೆ ಗಳನ್ನು ನಡೆಸಿ, ಯುವ ಮತದಾರರಲ್ಲಿ ಮತ ದಾನದ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಪ್ರಾಸ್ತಾವಿಕವಾಗಿ ಮಾತನಾಡಿ, ಮತದಾನದ ಪ್ರಮಾಣ ಹೆಚ್ಚಿಸಲು ಮತಗಟ್ಟೆ ಸುಧಾರಣೆ, ನೋಟಾ, ಸಖಿ ಮತಗಟ್ಟೆ ಸೇರಿದಂತೆ ಹಲವು ಸುಧಾರಣಾ ಕ್ರಮಗಳನ್ನು ಚುನಾವಣಾ ಆಯೋಗ ಕೈಗೊಂಡಿದೆ. ಪ್ರಜಾಪ್ರಭುತ್ವದಲ್ಲಿ ಉತ್ತಮ ನಾಯಕರ ಆಯ್ಕೆಯ ಗುರುತರ ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಯದ್ದಾಗಿದೆ. ಪ್ರಜೆಗಳ ಮತದ ನಿರ್ಧಾರದ ಮೇಲೆ ಸರ್ಕಾರ ನಿರ್ಧಾರವಾಗಲಿದೆ ಹಾಗೂ ಸಮಾಜ ನಿರ್ಮಾಣವಾಗಲಿದೆ. ಹಾಗಾಗಿ ನನ್ನ ಮತದಾನದಿಂದ ಅಂದುಕೊಂಡಂತೆ ಅಭ್ಯರ್ಥಿ ಗೆಲ್ಲುವರಾ ಎಂಬ ತಾತ್ಸಾರ ಭಾವ ಯಾರಿಗೂ ಬರಬಾರದು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಹೊಸ ಮತದಾರರಿಗೆ ಮತದಾರರ ಗುರುತಿನ ಚೀಟಿ ವಿತರಿಸಿದರು. 

ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ,  ಗುಂಡಾಳ್ ಬಿಜಿನೆಸ್ ಡೇಟಾ ಸೆಲ್ಯೂಷನ್ಸ್ ಮುಖ್ಯಸ್ಥ ಮಂಜುನಾಥ ಗುಂಡಾಳ್, ಪಾಲಿಕೆ ಉಪ ಆಯುಕ್ತ ಚಂದಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ. ಪಾಲಾಕ್ಷಿ, ಡಿಡಿಪಿಐ ತಿಪ್ಪೇಶಪ್ಪ, ಡಿಡಿಪಿಯು ಶಿವರಾಜ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.