ಪ್ರಾಚೀನ ಕಾಲದಿಂದಲೂ ಸ್ತ್ರೀಯರಿಗೆ ಗೌರವ

ಪ್ರಾಚೀನ ಕಾಲದಿಂದಲೂ ಸ್ತ್ರೀಯರಿಗೆ ಗೌರವ

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್

ದಾವಣಗೆರೆ, ಜ.25- ಪ್ರಾಚೀನ ಕಾಲದಿಂದ, ಆಧುನಿಕ ಯುಗದವರೆಗೂ ಸ್ತ್ರೀಯರಿಗೆ ಗೌರವಯುತವಾದ ಸ್ಥಾನಮಾನವನ್ನೇ ನೀಡಲಾಗಿದೆ, ಹಾಗಾಗಿ ಹೆಣ್ಣನ್ನು ಉಳಿಸಿ, ಬೆಳೆಸುವ ಕೆಲಸ ಆಗಬೇಕಾಗಿದೆ ಎಂದು ಉಪವಿಭಾಗಾಧಿಕಾರಿ ಶ್ರೀಮತಿ ಮಮತಾ ಹೊಸಗೌಡರ್ ಸಂದೇಶ ನೀಡಿದರು.

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಪಿ.ಸಿ. ಮತ್ತು ಪಿ.ಎನ್‌.ಡಿ.ಟಿ. ವಿಭಾಗ, ಮಹಿಳಾ ಮತ್ತು ಹೆರಿಗೆ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು  ಮಾತನಾಡಿದರು. 

ವೈದ್ಯ ಡಾ. ಎನ್.ಕೆ ಕಾಳಪ್ಪನವರು ಮಾತ ನಾಡಿ, ವಿವಿಧ ರಂಗಗಳಲ್ಲಿ ಮಹಿಳೆಯರು ತಮ್ಮದೇ ಆದ ಸಾಧನೆ ಮಾಡಿದ್ದಾರೆ. ಹೆಣ್ಣು ಸಂಸಾರದ ಕಣ್ಣು, ಹಾಗಾಗಿ ನಾವು ಹೆಣ್ಣನ್ನು ಆರಾಧ್ಯ ದೇವತೆ ಎನ್ನುತ್ತೇವೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗರಾಜ್‌ ಮಾತನಾಡಿ, ಹಿಂದಿನ ಕಾಲದಲ್ಲಿ ಸ್ತ್ರೀಯರನ್ನು ಸಾಕಷ್ಟು ತುಳಿತಕ್ಕೆ ಒಳಗಾಗಿಸಿದ್ದರು. ಆಧುನಿಕ ಯುಗದಲ್ಲಿ ಮಹಿಳೆಯರಿಗೆ ವಿಶೇಷವಾದ ಸ್ಥಾನಮಾನ ನೀಡಿ ಗೌರವಿಸಲಾಗುತ್ತಿದೆ. ಆದ್ದರಿಂದ ಹೆಣ್ಣನ್ನು ಬೆಳೆಸುವ ಜೊತೆಗೆ  ಉಳಿಸುವ ಕಾರ್ಯ ಮಾಡೋಣ ಎಂದು ಕರೆ ನೀಡಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಆರ್.ಜಿ ರಾಘವನ್ ಮಾತನಾಡಿ, ಹೆಣ್ಣಿಗೆ ವಿಶೇಷವಾದ ಗೌರವ ನೀಡಬೇಕು ಎಂದು ತಿಳಿಸಿದರು.

ಜಿಲ್ಲಾ  ಪಿ.ಸಿ. ಮತ್ತು ಪಿ.ಎನ್‌.ಡಿ.ಟಿ. ಸಲಹಾ ಸಮಿತಿಯ ಸದಸ್ಯ ಶ್ರೀಕಾಂತ್ ಮಾತನಾಡಿ, ಹೆಣ್ಣು ಮಗುವಿಗೆ ಕುಟುಂಬದಲ್ಲಿ ಗೌರವವಿದೆ. ಅಲ್ಲದೆ ಕುಟುಂಬ ನಿರ್ವಹಿಸುವ ಜವಾಬ್ದಾರಿ ಅವರ ಮೇಲಿದೆ. ಆದ್ದರಿಂದ ಕುಟುಂಬ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿಕೊಂಡು ಹೋಗುತ್ತಾರೆ ಎಂದು ತಿಳಿಸಿದರು.

ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎ. ಎಮ್. ರೇಣುಕಾರಾಧ್ಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ. ಸುರೇಶ್‌ ಎನ್. ಬಾರ್ಕಿ ಕಾರ್ಯಕ್ರಮ ಕುರಿತು ಮಾತನಾಡಿದರು. 

ಇದೇ ವೇಳೆ ಜ.24 ರಂದು ಜನಿಸಿದ ಹೆಣ್ಣು ಮಗುವಿನ ತಾಯಂದಿರಿಗೆ ಸಿಹಿ ಹಂಚಲಾಯಿತು. ಕಾರ್ಯಕ್ರಮದಲ್ಲಿ ಡಾ.ಸುಮಿತ್ರ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.