ಹಿಂತಿರುಗಿ ನೋಡಿದಾಗ, ಮತ್ತದೇ ಸಂಕಟ, ನೋವು… ಮಹಾಮಳೆಯ ಘೋರ ದುರಂತ… ಕೋಟಿ ದಾಟಿದ `ಲಸಿಕೆ ಯಜ್ಞ’

ಹಿಂತಿರುಗಿ ನೋಡಿದಾಗ, ಮತ್ತದೇ ಸಂಕಟ, ನೋವು…  ಮಹಾಮಳೆಯ ಘೋರ ದುರಂತ… ಕೋಟಿ ದಾಟಿದ  `ಲಸಿಕೆ ಯಜ್ಞ’

ರ್ನಾಟಕದ ಜನತೆಯ ಪಾಲಿಗೆ ಹೇಗಿತ್ತು 2021ನೇ ವರ್ಷ..?

ಕನ್ನಡಿಗರು ಮರೆಯಲಾಗದ, ನೆನಪಲ್ಲಿಡುವ ಘಟನೆಗಳು…!

ರಾಜ್ಯ ರಾಜಕೀಯದಲ್ಲಿ ನಡೆದ ಅವಾಂತರಗಳು… 

2021ನೇ ವರ್ಷ ಮುಗೀತಾ ಇದೆ. ಎಲ್ಲಾ ಸಿಹಿ ಕಹಿ ಘಟನೆಗಳನ್ನು ಮರೆತು ಜನ ಮತ್ತೊಂದು ವರ್ಷವನ್ನು ಸ್ವಾಗತಿಸಲು ಸಿದ್ಧವಾಗಿದ್ದಾರೆ. ಹಾಗಾದ್ರೆ ಹೊಸ ವರ್ಷವನ್ನು ಸ್ವಾಗತಿಸೋ ಮುನ್ನ ಈ ವರ್ಷದ ಕಳೆದ ದಿನಗಳ ನೆನಪು ಮಾಡಿಕೊಳ್ಳೋಣ….

ಡಿಸೆಂಬರ್ ತಿಂಗಳ ಮೈಕೊರೆಯುವ ಚಳಿಯಲ್ಲಿ ಹೈರಾಣಾಗಿರುವ ಜನ  2021 ನೇ ಇಸವಿಗೆ  ವಿದಾಯ ಹೇಳುತ್ತಾ, ಹೊಸ ವರ್ಷವನ್ನು ಸ್ವಾಗತಿಸುವ  ಉತ್ಸಾಹದಲ್ಲಿದ್ದಾರೆ.

ಡೆಡ್ಲಿ ಕೊರೊನಾದಿಂದ ಕಳೆದ ವರ್ಷ ರಾಜ್ಯದಲ್ಲಿ ಸಂಭವಿಸಿದಷ್ಟು ಸಾವು-ನೋವುಗಳಾಗದಿದ್ದರೂ, ಕೊರೊನಾ ಕಾವು   ಇನ್ನೂ ಕಡಿಮೆಯಾಗಿಲ್ಲ. ಜೊತೆಗೆ ಅತಿವೃಷ್ಟಿಯಿಂದಾದ ಅನಾಹುತವು ರಾಜ್ಯದಲ್ಲಿಯೂ ದೊಡ್ದ ಪ್ರಮಾಣದ  ಜೀವ ಹಾನಿ ಮತ್ತು ಆಸ್ತಿ  ಹಾನಿ ಉಂಟುಮಾಡಿತು, ನಿರಾಶ್ರಿತ ಜೀವಗಳು ನರಕಯಾತನೆ ಅನುಭವಿಸಬೇಕಾಯಿತು.

 ಇದೀಗ ಚಾಲ್ತಿಯಲ್ಲಿರುವ `ಓಮಿಕ್ರಾನ್’ ತಳಿ ಸೇರಿದಂತೆ ಕೊರೊನಾ ವೈರಸ್ ಭಯ ಇನ್ನೂ ಇದೆ. ರಾಜಧಾನಿ ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿಯೂ ಸೋಂಕಿನ ಪ್ರಮಾಣ ಕಡಿಮೆಯಾಗಿದ್ದರೂ ತಜ್ಞರ ಪ್ರಕಾರ ಮೂರನೇ ಅಲೆಯ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗಿದೆ. 

ನಾಯಕತ್ವ ಬದಲಾವಣೆ : ರಾಜ್ಯದ ಚುಕ್ಕಾಣಿ ಹಿಡಿದಿದ್ದ ಹಿರಿಯ ರಾಜಕಾರಣಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬದಲಿಸಿ, ಅವರದೇ ಸಂಪುಟದಲ್ಲಿ ಗೃಹ ಮಂತ್ರಿಗಳಾಗಿದ್ದ  ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತಿಗಳನ್ನಾಗಿ ಬಿಜೆಪಿ ಹೈಕಮಾಂಡ್ ಪಟ್ಟ ಕಟ್ಟಿತು.

`ಲಸಿಕೆ ಯಜ್ಞ’ :” ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಭಾರತ ಕಳೆದ ಜನವರಿಯಿಂದ ಆರಂಭಿಸಿದ `ಲಸಿಕೆ ಯಜ್ಞ’ ಡಿಸೆಂಬರ್ ಅಂತ್ಯಕ್ಕೆ 140 ಕೋಟಿ ಡೋಸ್ ದಾಟಿರುವುದು ವಿಶ್ವವೇ ಹೆಮ್ಮೆ ಪಡುವ ವಿಚಾರವೇ ಆಗಿದೆ. ಸೋಂಕಿನ ತೀವ್ರತೆ  ಕ್ಷೀಣಿಸಲು ಇದು ಸಹ ಮುಖ್ಯ ಕಾರಣವಾಗಿದೆ.

ಆಫ್ರಿಕಾದಿಂದ `ಓಮಿಕ್ರಾನ್’ : ಈ ಮಧ್ಯೆ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ `ಓಮಿಕ್ರಾನ್’ ಸೋಂಕು ಭಾರತವೂ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಹರಡಿ ಜನರಲ್ಲಿ ಆತಂಕ ಮೂಡಿಸಿದೆ. ಕಳೆದ ವರ್ಷ ಕೊರೊನಾ ವೈರಸ್ ಜೊತೆಗೆ ಬ್ರಿಟನ್ ವೈರಸ್ ಸಹ ವೇಗವಾಗಿ ಹರಡಿತ್ತು. ಆದರೆ, ಈ ವರ್ಷ  ಡೆಲ್ಟಾ ಜೊತೆಗೆ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದ್ದರೂ ಅದರ ತೀವ್ರತೆ ಕಡಿಮೆ ಇದ್ದರೂ ಹರಡುವಿಕೆಯ ವೇಗ ಜಾಸ್ತಿ ಇದೆ ಎನ್ನಲಾಗುತ್ತಿದೆ.

2019 ಡಿಸೆಂಬರ್ ತಿಂಗಳಲ್ಲಿ  ಚೀನಾ ದೇಶದಲ್ಲಿ  ಮೊಟ್ಟಮೊದಲ ಕೊರೊನಾ ವೈರಸ್ ಪತ್ತೆಯಾಗಿ ಬಹಳಷ್ಟು ಸಾವು-ನೋವುಗಳಿಗೆ ಕಾರಣವಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆ ಅಧಿಕೃತವಾಗಿ ವೈರಸ್ ಬಗ್ಗೆ `ಕೋವಿಡ್-19′ ಹೆಸರಿಸಿ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, 2020 ರ ಮಾರ್ಚ್ 11ರಂದು. ವಿಶ್ವ ಆರೋಗ್ಯ ಸಂಸ್ಥೆಯ ಈ ನಡೆಗೆ ದೊಡ್ಡಣ್ಣ ಅಮೆರಿಕ ಸೇರಿದಂತೆ ಅನೇಕ ರಾಷ್ಟ್ರಗಳು ಅಸಮಾಧಾನ ವ್ಯಕ್ತಪಡಿಸಿದ್ದವು. 

ಚೀನಾದ ವುಹಾನ್ ಪ್ರಾಂತ್ಯದಲ್ಲಿ ಕಾಣಿಸಿಕೊಂಡ  ಕೊರೊನಾ ವೈರಸ್ ರೋಗಕ್ಕೆ ಈಗ  ಎರಡು ವರ್ಷ ತುಂಬಿತು. ಮತ್ತೆ ಆ ದೇಶದಲ್ಲೀಗ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ವರದಿಗಳು ಬರುತ್ತಿದ್ದರೂ  ಅದನ್ನು ಜಾಹೀರು ಮಾಡದೆ ತನ್ನ ಹಳೇ ಚಾಳಿಯನ್ನೇ ಚೀನಾ ಮುಂದುವರೆಸಿದೆ.

2020ರ ಜನವರಿ 30ರಂದು ಕೇರಳದಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. ನಂತರದ 10 ತಿಂಗಳಲ್ಲಿ ಭಾರತವು ವಿಶ್ವದಲ್ಲಿಯೇ ಎರಡನೇ ಅತಿ ದೊಡ್ಡ ಸೋಂಕು ಪೀಡಿತ ರಾಷ್ಟ್ರವೆನಿಸಿತು. ಮಾರ್ಚ್ 1ರಂದು ಅಮೆರಿಕದಿಂದ ರಾಜ್ಯಕ್ಕೆ ಹಿಂತಿರುಗಿದ್ದ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರಲ್ಲಿ ಪ್ರಪ್ರಥಮ ಪ್ರಕರಣ ಪತ್ತೆಯಾದರೆ, ದಾವಣಗೆರೆ ನಗರದಲ್ಲಿಯೂ ಸಹ ವಿದೇಶದಿಂದ ಬಂದ ವ್ಯಕ್ತಿಯಲ್ಲಿಯೇ ಮೊದಲ ಸೋಂಕು  ಪ್ರಕರಣ ಪತ್ತೆಯಾಗಿತ್ತು.

ಕೊರೊನಾ ಮಾರಿಯನ್ನು ತಹಬಂದಿಗೆ ತರಲು ಎಲ್ಲೆಡೆ  ಲಾಕ್ ಡೌನ್, ಸೀಲ್ ಡೌನ್, ಕಂಟೈನ್ ನ್ಮೆಂಟ್ ಏರಿಯಾ, ಬಫರ್ ಜೋನ್ ಕಾಣಬೇಕಾಗಿ ಬಂದಿತ್ತು.
 

ಜವರಾಯನ ಅಟ್ಟಹಾಸ : ಈ ವರ್ಷವೂ ಅನೇಕ ಖ್ಯಾತನಾಮರು ಇಹಲೋಕ ತ್ಯಜಿಸಿದರು. ಸೇನಾ ಕಾಪ್ಟರ್ ಅಪಘಾತದಲ್ಲಿ ರಕ್ಷಣಾ ಪಡೆ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 13 ಜನ ಮಿಲಿಟರಿ ಅಧಿಕಾರಿಗಳನ್ನು ಕಳೆದುಕೊಂಡ ನತದೃಷ್ಟ ವರ್ಷ…. ದೇಶಕ್ಕಾದ ದೊಡ್ಡ ಹಾನಿ.

ಜನಪ್ರಿಯ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ಸಾವು ರಾಜ್ಯವೇ ಕಣ್ಣೀರಿಡುವಂತೆ ಮಾಡಿತು. ಅಭಿನಯ ಶಾರದೆ ಜಯಂತಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್, ಹಿರಿಯ ನಟ ಶನಿ ಮಹದೇವಪ್ಪ, ಶರಪಂಜರ ಶಿವರಾಂ, ನಿರ್ಮಾಪಕ ರಾಮು, ಖಳನಟ ಸತ್ಯಜಿತ್ ವಿಧಿವಶರಾದರು.

 ಹಿಂದಿ ಚಿತ್ರರಂಗದ ಮೇರು ನಟ ದಿಲೀಪ್ ಕುಮಾರ್, ರಾಜೀವ್ ಕಪೂರ್, ಸುಪ್ರೀಂಕೋರ್ಟ್ ಮಾಜಿ ನ್ಯಾಯಮೂರ್ತಿ ಮೋಹನ ಶಾಂತನಗೌಡರ್, ಪರಿಸರವಾದಿ ಸುಂದರ್ ಲಾಲ್ ಬಹುಗುಣ, ಖ್ಯಾತ ಅಥ್ಲೀಟ್ ಕ್ಯಾಪ್ಟನ್ ಮಿಲ್ಖಾಸಿಂಗ್, ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್, ಬಾಲಿವುಡ್ ನಿರ್ದೇಶಕ ಕೌಶಲ್ ರಾಜ್ ಸೇರಿದಂತೆ ಇನ್ನೂ ಅನೇಕ  ಗಣ್ಯರು ಇಹಲೋಕ ತ್ಯಜಿಸಿದರು.

ಅತಿವೃಷ್ಟಿ ಅನಾಹುತಗಳು : ಜುಲೈ-ಆಗಸ್ಟ್ ಮತ್ತು ನವೆಂಬರ್ ತಿಂಗಳಲ್ಲಿ ಮುಂಗಾರು ಮಳೆ ಮತ್ತು ವಾಯುಭಾರ ಕುಸಿತದಿಂದ ಎಡಬಿಡದೆ ಸುರಿದ ಮಹಾಮಳೆಗೆ ರಾಜ್ಯದ ಜನತೆ ಸಾಕಷ್ಟು ಸಂಕಟ ಅನುಭವಿಸಬೇಕಾಯಿತು. ಅದರಲ್ಲೂ ಉತ್ತರ ಕರ್ನಾಟಕದ ಜನರ ಸ್ಥಿತಿ ಕರುಣಾಜನಕವಾಗಿತ್ತು. ಸರ್ಕಾರದ ಅಂಕಿ-ಅಂಶಗಳ ಪ್ರಕಾರ 35 ಸಾವಿರಕ್ಕೂ ಹೆಚ್ಚು ಜನರು ಸೂರನ್ನು, ಬೆಳೆಯನ್ನು ಕಳೆದುಕೊಂಡು ನಿರಾಶ್ರಿತರಾಗಿ ಬದುಕಬೇಕಾಯಿತು.

60ಕ್ಕೂ ಹೆಚ್ಚು ಜನ  ಸಾವಿಗೀಡಾದರು. ಹಲವರು ನಾಪತ್ತೆಯಾದರು. 5150 ಕೋಟಿ ರೂಪಾಯಿಗಳಷ್ಟು ನಷ್ಟದ ಅಂದಾಜು ಮಾಡಲಾಯಿತು. 

ಬೆಂಗಳೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಬೆಳಗಾವಿ, ಚಿಕ್ಕಮಗಳೂರು, ಹುಬ್ಬಳ್ಳಿ ಮತ್ತು ದಾವಣಗೆರೆ ಜಿಲ್ಲೆ ಸೇರಿದಂತೆ 63 ತಾಲ್ಲೂಕುಗಳನ್ನು ಮಳೆಪೀಡಿತ ಪ್ರದೇಶಗಳೆಂದು ಘೋಷಿಸಲಾಯಿತು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಜರುಗಿದ ಚಳಿಗಾಲದ ಅಧಿವೇಶನದಲ್ಲಿ ಮತಾಂತರ ಮಸೂದೆ, ವಿರೋಧ ಪಕ್ಷದ ವಿರೋಧದ ನಡುವೆಯೂ ಬಹುಮತದಿಂದ ಅಂಗೀಕಾರವನ್ನು ಪಡೆಯಿತು. 

 ಪ್ರತಿಮೆಗಳ ಭಗ್ನ  : ಬೆಳಗಾವಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿಯೇ ಮಹಾರಾಷ್ಟ್ರದ ಕೆಲ ಕಿಡಿಗೇಡಿಗಳಿಂದ ಸೌಹಾರ್ದತೆಗೆ ಭಂಗ ತರುವಂತಹ ಕೃತ್ಯಗಳು ನಡೆದವು. ಕನ್ನಡದ ಧ್ವಜಕ್ಕೆ ಬೆಂಕಿ ಹಚ್ಚಲಾಯಿತು. ಪರಕೀಯರ ದಾಸ್ಯ ವಿಮೋಚನೆಗಾಗಿ ಹೋರಾಡಿ ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ ಮತ್ತು ಮಹಾ ಪರಾಕ್ರಮಿ ದೇಶಭಕ್ತ ಶಿವಾಜಿ  ಪ್ರತಿಮೆಗಳಿಗೆ ಹಾನಿಮಾಡಿ, ಅಗೌರವ ತೋರಲಾಯಿತು.  ಅಲ್ಲದೇ, `ಇವನಾರವ ಇವನಾರವ, ಇವ ನಮ್ಮವ ಇವ ನಮ್ಮವ’ ಎಂದು ಬೋಧಿಸಿದ ಮಹಾ ಮಾನವತಾವಾದಿ ಶರಣ ಭಕ್ತಿ ಭಂಡಾರಿ ಬಸವಣ್ಣನವರ ಪ್ರತಿಮೆಗೂ ಮಸಿ ಬಳಿದು ಅವಮಾನ ಮಾಡಿದ್ದು ವೀರಶೈವ-ಲಿಂಗಾಯಿತರನ್ನು ಕೆರಳಿಸುವಂತೆ ಮಾಡಿತ್ತು.

ಇನ್ನು ವರ್ಷವಿಡೀ ವಿವಾದದ ಕೇಂದ್ರಬಿಂದುವಾಗಿದ್ದ ಕೇಂದ್ರ ಸರ್ಕಾರ ಜಾರಿ ತಂದ  3 ಕೃಷಿ ಕಾಯ್ದೆಗಳ ಮಸೂದೆಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಹಿಂದಕ್ಕೆ ಪಡೆದು, ದೇಶದ ಕೃಷಿಕರಿಗೆ ಈ ಕಾಯ್ದೆಗಳಿಂದ ಆಗಬಹುದಾದ ಅನುಕೂಲದಿಂದ  ವಂಚಿತರಾದ ಬಗ್ಗೆ ಮರುಕ ವ್ಯಕ್ತಪಡಿಸಿದರು. ಕೃಷಿ ಮಸೂದೆಗಳನ್ನು ವಿರೋಧಿಸಿ ನಿರಂತರ ಚಳುವಳಿ ನಿರತ ರೈತರು ಕುಣಿದು ಕುಪ್ಪಳಿಸಿ ವಿಜಯೋತ್ಸವ ಆಚರಿಸಿದರು.

ಕಪ್ಪು ಚುಕ್ಕೆ… ಈ ಬಾರಿಯ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕೆಂಪುಕೋಟೆಯ ಬಳಿ ಕೃಷಿ ಕಾಯ್ದೆ ಮಸೂದೆ ವಿರೋಧಿ ಚಳುವಳಿ ನಿರತರ ವರ್ತನೆ ನಿಜಕ್ಕೂ ಅಸಹನೀಯವಾಗಿತ್ತು, ಭಾರತದ ಇತಿಹಾಸದಲ್ಲಿ  ಇದೊಂದು ಕಪ್ಪುಚುಕ್ಕೆಯಾಗಿ ಪರಿಣಮಿಸಿತು.

ಕೋಡಿ ಮಠದ ಭವಿಷ್ಯ… : ರಾಜ್ಯದ ಹಾರನಹಳ್ಳಿ ಕೋಡಿಮಠದ  ಶ್ರೀ ಶಿವಾನಂದ ಸ್ವಾಮೀಜಿ ಅವರು  ಭವಿಷ್ಯ  ನುಡಿದಿದ್ದು, ದೇಶದಲ್ಲಿ ಮತ್ತೊಂದು ಅವಘಡ ಸಂಭವಿಸಲಿದೆ, 2022ರ ಜನವರಿ ಸಂಕ್ರಾಂತಿ ಒಳಗಾಗಿ ಜಗತ್ತು ತಲ್ಲಣಗೊಳ್ಳಲಿದೆ. ಜನರಲ್ಲಿ ಸಂಶಯ, ಅಸಹನೆ, ರಾಜಕೀಯ ಕಲಹ ಹೆಚ್ಚಲಿದೆ ಎಂಬ ಭವಿಷ್ಯ ನುಡಿದಿದ್ದಾರೆ. 

ಈ ಎಲ್ಲಾ ವಿಚಾರಗಳು 2021ನೇ ವರ್ಷವನ್ನು ಜನ ಎಂದೂ ಮರೆಯದಂತೆ ಮಾಡಿವೆ. ಅತಿ ಹೆಚ್ಚು ಕಹಿ ಘಟನೆಗಳು, ಕೆಲವೊಂದಷ್ಟು ಮರೆಯಲಾಗದ ನೆನಪುಗಳೊಂದಿಗೆ 2021ನೇ ವರ್ಷ ಮುಕ್ತಾಯವಾಗುತ್ತಿದೆ. ಸಾಕಷ್ಟು ನೋವಿನ ನೆನಪುಗಳೊಂದಿಗೆ ಜನ ಈ ವರ್ಷಕ್ಕೆ ಗುಡ್ ಬೈ ಹೇಳುತ್ತಿದ್ದು, ಬರ್ತಾ ಇರೋ ವರ್ಷವಾದರೂ ನೆಮ್ಮದಿ ಹಾಗೂ ಸಂತೋಷ ಸಿಗಲಿ….


ಉತ್ತಂಗಿ ಕೊಟ್ರೇಶ್