ಪೊಲೀಸ್ ಕಸ್ಟಡಿಯಲ್ಲಿ ಸಾವು ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಆಗ್ರಹ

ಪೊಲೀಸ್ ಕಸ್ಟಡಿಯಲ್ಲಿ ಸಾವು ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಆಗ್ರಹ

ಪೀಪಲ್ಸ್ ಲಾಯರ್ಸ್ ಗಿಲ್ಡ್ ನೇತೃತ್ವದಲ್ಲಿ ಎಸ್ಪಿಗೆ ಮನವಿ

ದಾವಣಗೆರೆ, ಡಿ.7- ಪೊಲೀಸ್ ಕಸ್ಟಡಿಯಲ್ಲಿ ವ್ಯಕ್ತಿಯ ಸಾವು ಪ್ರಕರಣವನ್ನು ಒತ್ತಡ ರಹಿತ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಪೀಪಲ್ಸ್ ಲಾಯರ್ಸ್ ಗಿಲ್ಡ್ ನೇತೃತ್ವದಲ್ಲಿ ವಕೀಲರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಒತ್ತಾಯಿಸಿದರು.

ನಗರದ ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿದ ವಕೀಲರು, ಪ್ರಕರಣದಲ್ಲಿನ ತಪ್ಪಿತಸ್ಥರಿಗೆ ಕಾನೂನು ಕ್ರಮ ಕೈಗೊಳ್ಳಬೇಕು. ನ್ಯಾಯಬದ್ದ ತನಿಖೆ ನಡೆಸುವಂತೆ ಎಸ್ಪಿ ಸಿ.ಬಿ. ರಿಷ್ಯಂತ್ ಅವರಿಗೆ ಮನವಿ ಸಲ್ಲಿಸಿದರು.

ಬಹದ್ದೂರ್ ಘಟ್ಟ ಗ್ರಾಮದ ಕುಮಾರ್ ಎಂಬ ಯುವಕನನ್ನು ವಿಚಾರಣೆಗೆಂದು ದಾವಣಗೆರೆಯ ಸಿಇಎನ್ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ಸಂದರ್ಭದಲ್ಲಿ ಆತ ಮೃತಪಟ್ಟಿದ್ದು, ಮೃತನ ಮೈಮೇಲೆ ಗಾಯಗಳು ಕಂಡು ಬಂದಿವೆ ಎಂದು ತಿಳಿದು ಬಂದಿದ್ದು, ಆತನ ಸಾವಿಗೆ ಪೊಲೀಸರ ದೌರ್ಜನ್ಯ ಮತ್ತು ಚಿತ್ರ ಹಿಂಸೆಯೇ ಕಾರಣವಾಗಿದೆ ಎಂದು ಪೀಪಲ್ಸ್ ಲಾಯರ್ಸ್ ಗಿಲ್ಡ್ ಜಿಲ್ಲಾಧ್ಯಕ್ಷ ಅನೀಸ್ ಪಾಷ ಆರೋಪಿಸಿದರು.

ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮಾಡುವ ಬದಲಿಗೆ ಲಾಡ್ಜಿಗೆ ಕರೆದೊಯ್ದು ವಿಚಾರಣೆ ಮಾಡುವ ಅವಶ್ಯಕತೆ ಏನಿತ್ತು. ಪೊಲೀಸ್ ಅಧಿಕಾರಿಗಳು ವಿಚಾರಣೆಯ ನೆಪದಲ್ಲಿ ಬಂಧಿತರಿಗೆ ಹಿಂಸೆ ನೀಡಲು ಕಾನೂನಿನಲ್ಲಿ ಅವಕಾಶಗಳಿಲ್ಲ. 

ಯಾವುದೇ ವ್ಯಕ್ತಿ ತಪ್ಪು ಮಾಡಿದರೂ ಶಿಕ್ಷೆ ನೀಡಲು ನ್ಯಾಯಾಲಯಗಳಿವೆ. ಅಂತೆಯೇ ಪೊಲೀಸ್ ಕಸ್ಟಡಿಯಲ್ಲಿ ವ್ಯಕ್ತಿ ಸಾವು ಮಾನವ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ. 

ಇತ್ತೀಚೆಗೆ ಪೊಲೀಸರ ದೌರ್ಜನ್ಯ ಮಿತಿ ಮೀರಿದೆ. ಆಗಾಗ ವಿಚಾರಣೆಯ ನೆಪದಲ್ಲಿ ಹಲವರಿಗೆ ಚಿತ್ರಹಿಂಸೆ ನೀಡಿರುವುದೂ ಸಾಬೀತಾಗಿದೆ. ಸರ್ಕಾರ ಇಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೆ. ರಂಗನಾಥ್, ನಜೀರ್ ಅಹ್ಮದ್, ಜಸ್ಟಿನ್ ಜೈ ಕುಮಾರ್, ರುದ್ರೇಶ್, ಅಬ್ದುಲ್ ಸಮದ್, ಖಲೀಲ್, ಸಿರಾಜುದ್ದೀನ್, ಸತೀಶ್ ಅರವಿಂದ್, ನೌಷಾದ್, ವಿನಯ್ ಕುಮಾರ್, ಮುಸ್ತಾಫಾ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.