ಸಾಹಿತ್ಯ ಪರಿಷತ್‍ನಲ್ಲಿ ಜಾತಿ, ಮತ, ಪಂಥ ಬಿಟ್ಟು ಕನ್ನಡ ಪಂಥವಾಗಿ ಕೆಲಸ ಮಾಡಬೇಕು

ಸಾಹಿತ್ಯ ಪರಿಷತ್‍ನಲ್ಲಿ ಜಾತಿ, ಮತ, ಪಂಥ ಬಿಟ್ಟು ಕನ್ನಡ ಪಂಥವಾಗಿ ಕೆಲಸ ಮಾಡಬೇಕು

ಬಳ್ಳಾರಿ ಜಿಲ್ಲಾ ಕಸಾಪ ನೂತನ  ಅಧ್ಯಕ್ಷ ನಿಷ್ಟಿ ರುದ್ರಪ್ಪ ಕರೆ

ಹರಪನಹಳ್ಳಿ, ಡಿ.5- ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ  ಜಾತಿ, ಮತ, ಪಂಥ ಬಿಟ್ಟು ಕನ್ನಡ ಪಂಥವಾಗಿ ಕೆಲಸ ಮಾಡಬೇಕು ಎಂದು ಬಳ್ಳಾರಿ ಕಸಾಪ ನೂತನ ಜಿಲ್ಲಾಧ್ಯಕ್ಷ ನಿಷ್ಟಿ ರುದ್ರಪ್ಪ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿ ನಲ್ಲಿ ತಾಲ್ಲೂಕು ಕಸಾಪ ವತಿಯಿಂದ ಇಂದು ಹಮ್ಮಿಕೊಂಡಿದ್ದ ನೂತನ ಕಸಾಪ ಜಿಲ್ಲಾಧ್ಯಕ್ಷರಿಗೆ ಅಭಿನಂದನೆ ಹಾಗೂ ಸಮಾಲೋಚನೆ ಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಸಾಹಿತ್ಯ ಪರಿಷತ್ ಎಂದರೆ ಸರ್ವ ಜನಾಂಗಕ್ಕೂ ವ್ಯಾಪಿಸಿದ್ದು, ಪ್ರತಿಯೊಬ್ಬರೂ ಬಿಡುವಿನಲ್ಲಿ ಕನ್ನಡವನ್ನು ಸ್ಮರಿಸಬೇಕು. ಪೋಷಕರು ತಮ್ಮ ಮಕ್ಕಳಿಗೆ ಕನ್ನಡ ಸಾಹಿತ್ಯದ ಬಗ್ಗೆ ಕನ್ನಡ ನಾಡು, ನುಡಿ ಬಗ್ಗೆ, ಕನ್ನಡದ ಪ್ರೇಮ ಬೆಳೆಯುವಂತೆ ನೋಡಿಕೊಳ್ಳಬೇಕು. ಬಳ್ಳಾರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಹಿಂದಿನಿಂದಲೂ ಪ್ರಯತ್ನ ನಡೆಯಿತು. ಆದರೆ ಅದು ಫಲಿಸಲಿಲ್ಲ. ಈ ಬಾರಿ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನವನ್ನು ಬಳ್ಳಾರಿಯಲ್ಲಿ ಮಾಡಲು ಪ್ರಯತ್ನಿಸಲಾಗುವುದು ಎಂದರು.

ಕಸಾಪ ನಿಕಟ ಪೂರ್ವ ತಾಲ್ಲೂಕು ಅಧ್ಯಕ್ಷ ಡಿ.ರಾಮನಮಲಿ ಮಾತನಾಡಿ,  ಕಸಾಪ ಜಿಲ್ಲಾಧ್ಯಕ್ಷ ನಿಷ್ಟಿ ರುದ್ರಪ್ಪ ಅವರು ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ.  ಅವರಿಗೆ ನಮ್ಮ ತಾಲ್ಲೂಕಿನಿಂದ ಹೆಚ್ಚು ಮತಗಳನ್ನು ನೀಡಿ ಗೆಲ್ಲಿಸಿ ಕಳಿಸಿದ್ದೇವೆ ಎಂದು ಹೇಳಿದರು. 

ಕಸಾಪ ಮಾಜಿ ಅಧ್ಯಕ್ಷ, ಉಪನ್ಯಾಸಕ ಮಲ್ಲಿಕಾರ್ಜುನ್‌ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ನಿಷ್ಟಿ ರುದ್ರಪ್ಪ ಅವರಿಗೆ ಕನ್ನಡಕ್ಕಾಗಿ ಇನ್ನೂ ಹೆಚ್ಚಿನ ಸೇವೆ ಸಲ್ಲಿಸುವ ಶಕ್ತಿ ಬರಲಿ ಎಂದು ಹಾರೈಸಿದರು.

ಈ ವೇಳೆ ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷ ರಾಮಪ್ರಸಾದ್ ಗಾಂಧಿ, ಗೌರವ ಕೋಶಾಧಿಕಾರಿ ಕೆ.ಉಚ್ಚೆಂಗೆಪ್ಪ, ಉಪನ್ಯಾಸಕ ಮಾಳ್ಗಿ ಮಂಜುನಾಥ ಸೇರಿದಂತೆ ಇತರರು ಇದ್ದರು.

ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಉಪನ್ಯಾಸಕ ವೀರೇಶ್ ಬಣಕಾರ, ಪತ್ರಕರ್ತರಾದ ಡಿ. ವಿಶ್ವನಾಥ, ದೇವರಾಜ, ಮಂಡಕ್ಕಿ ಸುರೇಶ್, ಶಿಕ್ಷಕರಾದ ಪದ್ಮರಾಜ್ ಜೈನ್, ಷಣ್ಮುಖಪ್ಪ ಪೂಜಾರ್ ಸೇರಿದಂತೆ 8 ಜನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಸಭೆಯಲ್ಲಿ ಜಿಲ್ಲಾಧ್ಯಕ್ಷರ ಮುಂದೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.