ಗಾಂಧಿ ಒಬ್ಬರಿಂದಲೇ ಸ್ವಾತಂತ್ರ್ಯ ಬಂದಿಲ್ಲ

ಮಹಾತ್ಮ ಗಾಂಧೀಜಿ ಅಹಿಂಸಾತ್ಮಕ ಹೋರಾಟ ನಡೆಸಿದ್ದರು. ಆದರೆ, ಜಲಿಯನ್‌ವಾಲಾ ಬಾಗ್, ಈಸೂರು ಹೋರಾಟ, ವಿಧುರಾಶ್ವತ್ಥ ಹೋರಾಟ ಸೇರಿದಂತೆ ಹಲವಾರು ಹಿಂಸಾತ್ಮಕ ಹೋರಾಟಗಳು ಸ್ವಾತಂತ್ರ್ಯಕ್ಕಾಗಿ ನಡೆದಿವೆ. ಹೀಗಾಗಿ ಮಹಾತ್ಮ ಗಾಂಧೀಜಿ ಅವರೊಬ್ಬರಿಂದಲೇ ಸ್ವಾತಂತ್ರ್ಯ ದೊರೆಯಿತು ಎಂದು ಹೇಳುವುದು ವ್ಯಕ್ತಿ ಸಂಸ್ಕೃತಿಯಾಗುತ್ತದೆ. 

-ಡಾ. ಬಿ.ಸಿ. ಮಹಾಬಲೇಶ್ವರಪ್ಪ

ಗುಲ್ಬರ್ಗ ವಿ.ವಿ. ನಿವೃತ್ತ ಪ್ರಾಧ್ಯಾಪಕ ಡಾ. ಬಿ.ಸಿ. ಮಹಾಬಲೇಶ್ವರಪ್ಪ

ದಾವಣಗೆರೆ, ಡಿ. 2 – ಮಹಾತ್ಮ ಗಾಂಧೀಜಿ ಅವರೊಬ್ಬರಿಂದಲೇ ದೇಶಕ್ಕೆ ಸ್ವಾತಂತ್ರ್ಯ ದೊರೆ ಯಿತು ಎಂದು ಹೇಳುವುದು ಅರ್ಧ ಸತ್ಯ ಎಂದು ಗುಲ್ಬರ್ಗ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾ ಪಕ ಡಾ. ಬಿ.ಸಿ. ಮಹಾಬಲೇಶ್ವರಪ್ಪ ಹೇಳಿದ್ದಾರೆ.

ನಗರದ ಎ.ವಿ.ಕೆ. ಕಾಲೇಜಿನ ಇತಿಹಾಸ ವಿಭಾಗ, ರಾಜ್ಯ ಪತ್ರಾಗಾರ ಇಲಾಖೆ ಹಾಗೂ ಇತಿಹಾಸ ಅಧ್ಯಾಪಕರ ವೇದಿಕೆಗಳ ಸಂಯುಕ್ತಾಶ್ರ ಯದಲ್ಲಿ ಇಂದು ಏರ್ಪಾಡಾಗಿದ್ದ §ದಾವಣಗೆರೆ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಹೆಜ್ಜೆಗಳು’ ಎಂಬ ವಿಷಯ ಕುರಿತ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾತನಾಡಿದರು.

ಗಾಂಧೀಜಿ ಅವರಿಗೆ ಮುಂಚೆಯೇ ತೀವ್ರ ಗಾಮಿಗಳು ಹಾಗೂ ಮಂದಗಾಮಿಗಳು ಧಾರ್ಮಿಕ ತಳಹದಿ ಮೇಲೆ ರಾಷ್ಟ್ರೀಯತೆಯನ್ನು ಕಟ್ಟಿದ್ದರು. ಅಲ್ಲಿಯವರೆಗೂ ಜನರಲ್ಲಿದ್ದ ರಾಜ ಭಕ್ತಿಯನ್ನು ರಾಷ್ಟ್ರಭಕ್ತಿಯಾಗಿ ಪರಿವರ್ತಿಸಿದ್ದರು. ಭಾಷಣಕಾರರು, ಕೀರ್ತನೆಕಾರರು, ಲಾವಣಿಕಾರರು ಈ ದಿಸೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದವರು ಹೇಳಿದರು.

ಈ ವೇದಿಕೆಯ ಮೇಲೆ ಗಾಂಧೀಜಿ ಅವರು ಸ್ವಾತಂತ್ರ್ಯ ಹೋರಾಟವನ್ನು ವಿಸ್ತಾರಗೊಳಿಸಿ ಗ್ರಾಮೀಣ ಭಾಗವದರಿಗೆ ಹಾಗೂ ಎಲ್ಲ ಜಾತಿ – ವರ್ಗದವರಿಗೆ ತಲುಪಿಸಿದರು. ಇದೇ ವೇಳೆ ಕ್ರಾಂತಿಕಾರಿಗಳು ಹಿಂಸಾತ್ಮಕ ಹೋರಾಟದ ಮೂಲಕ ಸ್ವಾತಂತ್ರ್ಯಕ್ಕೆ ಕೊಡುಗೆ ನೀಡಿದರು ಎಂದವರು ತಿಳಿಸಿದರು.

ಇಷ್ಟಾದರೂ, ಗಾಂಧೀಜಿ ಅವರಿಂದಲೇ ಸ್ವಾತಂತ್ರ್ಯ ದೊರೆಯಿತು ಎಂದು ಹೇಳುವುದು ಅರ್ಧ ಸತ್ಯವಾಗುತ್ತದೆ. ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಸುಭಾಷ್ ಚಂದ್ರ ಬೋಸ್ ಅವರನ್ನು ಒಂದೇ ಸಾಲಿಗೆ ಸೀಮಿತ ಮಾಡಬಾರದು ಎಂದರು.

ಜಲಿಯನ್‌ವಾಲಾ ಬಾಗ್, ಈಸೂರು ಹೋರಾಟ, ವಿಧುರಾಶ್ವತ್ಥ ಹೋರಾಟ ಸೇರಿದಂತೆ ಹಲವಾರು ಹಿಂಸಾತ್ಮಕ ಹೋರಾಟಗಳು ಸ್ವಾತಂತ್ರ್ಯಕ್ಕಾಗಿ ನಡೆದಿವೆ. ಹೀಗಾಗಿ ಒಂದೇ ವ್ಯಕ್ತಿಯಿಂದ ಸ್ವಾತಂತ್ರ್ಯ ದೊರೆಯಿತು ಎಂದು ಹೇಳುವುದು ವ್ಯಕ್ತಿ ಸಂಸ್ಕೃತಿಯಾಗುತ್ತದೆ ಎಂದು ಮಹಾಬಲೇಶ್ವರಪ್ಪ ಹೇಳಿದರು.

1947ರಲ್ಲಿ ಭಾರತದ ಒಟ್ಟು ಭೂ ಭಾಗದ ಮೂರನೇ ಒಂದು ಭಾಗದಷ್ಟು ಮಾತ್ರ ಸ್ವಾತಂತ್ರ್ಯ ಪಡೆಯಿತು. ಉಳಿದ ಭೂ ಭಾಗ 562 ಸಂಸ್ಥಾನಗಳ ವಶದಲ್ಲಿತ್ತು. ಈ ಸಂಸ್ಥಾನಗಳನ್ನು ಏಕೀಕರಣಗೊಳಿಸುವಲ್ಲಿ ಆಗಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಅವರ ಕಾರ್ಯದರ್ಶಿಯಾಗಿದ್ದ ವಿ.ಪಿ. ಮೆನನ್ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದವರು ಹೇಳಿದರು.

ಪ್ರಪಂಚದ ಯಾವುದೇ ದೇಶದ ಸ್ವಾತಂತ್ರ್ಯ ಹೋರಾಟ ಸಂಪೂರ್ಣ ಅಹಿಂಸಾತ್ಮಕವಾಗಿಲ್ಲ. ಭಾರತದಲ್ಲಿ ನಡೆದ ಹೋರಾಟದಲ್ಲಿ ಹಿಂಸೆ ಕಡಿಮೆ ಇರಬಹುದು. ಆದರೆ, ಸಂಪೂರ್ಣ ಅಹಿಂಸಾತ್ಮಕ ಎಂದು ಹೇಳಲಾಗದು. ದಾವಣಗೆರೆ ಜಿಲ್ಲೆಯಲ್ಲೇ ಸ್ವಾತಂತ್ರ್ಯಕ್ಕಾಗಿ ಹಿಂಸಾತ್ಮಕ ಹೋರಾಟ ನಡೆಸಿದ ಉದಾಹರಣೆಗಳು ಸಿಗುತ್ತವೆ ಎಂದವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ. ವೀರೇಶ್, ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಅವಿಭಜಿತ ಚಿತ್ರದುರ್ಗ ಜಿಲ್ಲೆಯಲ್ಲಿದ್ದ ದಾವಣಗೆರೆಯಲ್ಲಿ ಬಳ್ಳಾರಿ ಸಿದ್ದಮ್ಮ, ಮೌನೇಶ್ವರಪ್ಪ, ಕೆ.ಎಸ್. ಸಿದ್ದಪ್ಪ ಸೇರಿದಂತೆ ಹಲವು ಹೋರಾಟಗಾರರಿದ್ದರು. ಹೋರಾಟದಲ್ಲಿ ಹಳ್ಳೂರು ನಾಗಪ್ಪ, ಅಕ್ಕಸಾಲಿ ವಿರೂಪಾಕ್ಷಪ್ಪ, ಬಿದರಕುಂದಿ ನಿಂಗಪ್ಪ, ಹಮಾಲ ಲಮ್ಮಣ್ಣ, ಹದಡಿ ನಿಂಗಪ್ಪ, ಮಾಗಾನಹಳ್ಳಿ ಹನುಮಂತಪ್ಪ ಮುಂತಾದವರು ಹುತಾತ್ಮರಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಹರಿಹರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾ ಪಕ ಡಾ. ಸದಾಶಿವಪ್ಪ, ಸಾಸ್ವೆಹಳ್ಳಿ ಎಸ್.ಡಿ.ವಿ.ಎಸ್. ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಪ್ರೊ. ವನಜಾಕ್ಷಮ್ಮ ಉಪಸ್ಥಿತರಿದ್ದರು.

ಎ.ವಿ.ಕೆ. ಕಾಲೇಜಿನ ಪ್ರಾಂಶುಪಾಲ
ಡಾ. ಬಿ.ಪಿ. ಕುಮಾರ್ ಅಧ್ಯಕ್ಷತೆ ವಹಿಸಿದ್ದರು.