ದಾವಣಗೆರೆ ಅರ್ಬನ್ ಬ್ಯಾಂಕಿನ ನಿರ್ದೇಶಕರಾಗಿ ಅರ್ಚನಾ ರುದ್ರಮುನಿ

ದಾವಣಗೆರೆ, ಡಿ.1- ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ನಿರ್ದೇಶಕರಾಗಿ ಸಾಮಾಜಿಕ ಸೇವಾ ಕಾರ್ಯಕರ್ತರಾದ ಶ್ರೀಮತಿ ಎ.ಆರ್. ಅರ್ಚನಾ ನೇಮಕಗೊಂಡಿದ್ದಾರೆ.

ಅರ್ಚನಾ, ಸ್ಥಳೀಯ ಕೀಲು-ಮೂಳೆ ತಜ್ಞ ಡಾ. ಎ.ಕೆ. ರುದ್ರಮುನಿ ಅವರ ಧರ್ಮಪತ್ನಿ ಮತ್ತು ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಮಾಜಿ ಅಧ್ಯಕ್ಷರೂ, ಹಿರಿಯ ಸಹಕಾರಿ ಧುರೀಣರೂ, ಎಸಿಕೆ ಎಂದೇ ಹೆಸರಾಗಿದ್ದ ಅಂದನೂರು ಕೊಟ್ರಬಸಪ್ಪ ಅವರ ಸೊಸೆ. 

ಬ್ಯಾಂಕಿನ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ ಅವರ ಅಧ್ಯಕ್ಷತೆಯಲ್ಲಿ ಬ್ಯಾಂಕಿನ ಸಭಾಂಗಣದಲ್ಲಿ ನಿನ್ನೆ ನಡೆದ ಬ್ಯಾಂಕಿನ ಆಡಳಿತ ಮಂಡಳಿಯ ಸಭೆಯಲ್ಲಿ ಈ ನೇಮಕ ಒಮ್ಮತದಿಂದ ನಡೆಯಿತು. ಹಿರಿಯ ನ್ಯಾಯವಾದಿ ಗಳೂ, ಬ್ಯಾಂಕಿನ ಹಿರಿಯ ನಿರ್ದೇಶಕರೂ ಆಗಿದ್ದ ಶ್ರೀಮತಿ ಐನಳ್ಳಿ ವಸಂತ ಕುಮಾರಿ ಅವರ ಅಕಾಲಿಕ ನಿಧನದಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ಶ್ರೀಮತಿ ಎ.ಆರ್. ಅರ್ಚನಾ ಅವರನ್ನು ನೇಮಕ ಮಾಡಲಾಗಿದೆ ಎಂದು ಬಕ್ಕೇಶಪ್ಪ ತಿಳಿಸಿದ್ದಾರೆ.

ಬ್ಯಾಂಕಿನ ಉಪಾಧ್ಯಕ್ಷ ಅಂದನೂರು ಮುಪ್ಪಣ್ಣ, ಹಿರಿಯ ನಿರ್ದೇಶಕರುಗಳಾದ ಬಿ.ಸಿ. ಉಮಾಪತಿ, ಮತ್ತಿಹಳ್ಳಿ ವೀರಣ್ಣ, ಪಲ್ಲಾಗಟ್ಟಿ ಶಿವಾನಂದಪ್ಪ, ಟಿ.ಎಸ್. ಜಯರುದ್ರೇಶ್, ದೇವರಮನೆ ಶಿವಕುಮಾರ್, ಎಂ. ಚಂದ್ರಶೇಖರ್, ಅಜ್ಜಂಪುರ ಶೆಟ್ರು ವಿಜಯಕುಮಾರ್, ಕಂಚಿಕೆರೆ ಮಹೇಶ್, ಶ್ರೀಮತಿ ಸುರೇಖಾ ಎಂ. ಚಿಗಟೇರಿ, ಮಲ್ಲಿಕಾರ್ಜುನ ಕಣವಿ, ನಲ್ಲೂರು ಎಸ್.ರಾಘವೇಂದ್ರ, ಎಂ. ವಿಕ್ರಂ, ಇ.ಎಂ. ಮಂಜುನಾಥ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಧಾನ ವ್ಯವಸ್ಥಾಪಕ ಡಿ.ವಿ.ಆರಾಧ್ಯಮಠ ನಿರೂಪಿಸಿದರು.