ಸಾಮಾನ್ಯ ತಿಳುವಳಿಕೆ ಜ್ಞಾನಕ್ಕಿಂತ ಹೆಚ್ಚು

ಸಾಮಾನ್ಯ ತಿಳುವಳಿಕೆ ಜ್ಞಾನಕ್ಕಿಂತ ಹೆಚ್ಚು

ವಿಶ್ವವಿದ್ಯಾಲಯ ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜಿನ ಕಾರ್ಯಕ್ರಮದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆಯ ರಿಜಿಸ್ಟ್ರಾರ್ ಡಾ|| ಎಸ್. ಬಸವರಾಜಪ್ಪ ಪ್ರತಿಪಾದನೆ

ದಾವಣಗೆರೆ, ಅ.19- ಆಧುನಿಕ ಜಗತ್ತಿಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಜ್ಞಾನ, ವಿಜ್ಞಾನ ಬೇಕೇಬೇಕು.  ಅದರ ಜೊತೆ ಸಾಮಾನ್ಯ ತಿಳುವಳಿಕೆ ಹಾಗೂ ಬುದ್ಧಿವಂತಿಕೆ ಕೂಡಾ ಇದ್ದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವೆಂದು ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ರಿಜಿಸ್ಟ್ರಾರ್ ಡಾ|| ಎಸ್. ಬಸವರಾಜಪ್ಪ ತಿಳಿಸಿದರು.

ನಗರದ ವಿಶ್ವವಿದ್ಯಾನಿಲಯ ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ   ಅಖಿಲ ಭಾರತಿಯ ತಾಂತ್ರಿಕ ಶಿಕ್ಷಣ ಪರಿಷತ್ (ನವದೆಹಲಿ)  ಇವರ ಸಹಯೋಗದೊಂದಿಗೆ  ವಿಶ್ವವಿದ್ಯಾನಿಲಯ ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜಿನ ಯಾಂತ್ರಿಕ ವಿಭಾಗದ ಆಶ್ರಯದಲ್ಲಿ `ಎಂಪಾವರಿಂಗ್ ಟೀಚಿಂಗ್, ಲರ್ನಿಂಗ್ ಸ್ಕಿಲ್ಸ್ ಯೂಸಿಂಗ್ ಮಾರ್ಡನ್ ಪೆಡಗೋಗಿ ಟೂಲ್ಸ್ ಇನ್ ಟೆಕ್ನೋಲಜಿ ಎಜುಕೇಷನ್’ ವಿಷಯ ಕುರಿತು ಇಂದು ಏರ್ಪಾಡಾಗಿದ್ದ ಎರಡು ವಾರಗಳ ಪ್ರಾಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಧನಾತ್ಮಕ ಚಿಂತನೆ, ಸೃಜನ ಶೀಲ ವ್ಯಕ್ತಿತ್ವ, ವಾಕ್ ಸಾಮರ್ಥ್ಯ, ಸಮಸ್ಯೆ ಪರಿಹರಿಸುವ ತಂತ್ರಗಾರಿಕೆ ಮುಂತಾದ ಕೌಶಲ್ಯಗಳನ್ನು ಮೈಗೂಡಿಸಿಕೊಂಡು ಮಾದರಿ ಶಿಕ್ಷಕರಾಗಲು ಪ್ರತಿನಿಧಿಗಳಿಗೆ ಬಸವರಾಜಪ್ಪ ಕರೆ ನೀಡಿದರು.

ಭೋದನೆ ಮತ್ತು ಕಲಿಕೆ ಹಲವು ಚಂಚಲತೆಗಳಿಂದ ಕೂಡಿರುವ ಪ್ರಕ್ರಿಯೆಗಳು. ಕಲಿಯುವವರ ಕಲಿಕೆಯ ಅನುಭವಗಳ ವ್ಯಕ್ತಿಯನ್ನು ವೃದ್ಧಿಸುವಂತಹ ಗುರಿಯನ್ನು ತಲುಪಲು ಶ್ರಮಿಸುವಾಗ ಮತ್ತು ಹೊಸ ಜ್ಞಾನವನ್ನು ವರ್ತನೆ ಹಾಗು ಕೌಶಲ್ಯವನ್ನು ಆಯೋಜಿಸುವಾಗ ಈ ಭೇದಗಳು ಪರಸ್ಪರ ವರ್ತಿಸುತ್ತವೆ. ಕಳೆದ ರಾಮಾಯಣ ಹಾಗೂ ಮಹಾಭಾರತ ಶತಮಾನಗಳಿಂದಲೂ ಕಲಿಕೆಯ ಮೇಲೆ ಅನೇಕ ದೃಷ್ಟಿ ವೈಶಾಲ್ಯಗಳು ಮೂಡಿ ಬಂದಿವೆ ಎಂದು ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನೋಲಜಿ ಕಾಲೇಜಿನ ಪ್ರಾಚಾರ್ಯ ಡಾ|| ಹೆಚ್.ಬಿ. ಅರವಿಂದ್ ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಭಾರಿ ಪ್ರಾಚಾರ್ಯರಾದ ಡಾ|| ಹೆಚ್. ಈರಮ್ಮ ಮಾತನಾಡಿ, ಬೋಧನೆ ತತ್ವ ಕಲಿಸುವ ಕಲೆ ಮತ್ತು ಸೈದ್ಧಾಂತಿಕ ಪರಿಕಲ್ಪನೆಯನ್ನು ಪ್ರತಿಯೊಬ್ಬ ಶಿಕ್ಷಕರು ಪಾಲಿಸಬೇಕು ಎಂದು ಕರೆ ನೀಡಿದರು.

ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯದ ಕಾರ್ಯಕಾರಿ ಮಂಡಳಿಯ ಸದಸ್ಯ ಡಾ|| ಹೆಚ್.ಆರ್. ಪ್ರಭಾಕರ್ ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.  

ಶ್ರೀಮತಿ ರೇಖಾ ಪದಕಿ ಪ್ರಾರ್ಥಿಸಿದರು. ಸಹ ಪ್ರಾಧ್ಯಾಪಕ ಡಾ|| ಎಂ. ಪ್ರಸನ್ನ ಕುಮಾರ್, ಸಹಾಯಕ ಪ್ರಾಧ್ಯಾಪಕರುಗಳಾದ ಡಾ|| ಕೆ.ಜಿ. ಸತೀಶ್, ಮತ್ತು ಎ.ಆರ್. ಅಣ್ಣಪ್ಪ ಅವರುಗಳು ಅತಿಥಿಗಳನ್ನು ಪರಿಚಯಿಸಿದರು. ಯಾಂತ್ರಿಕ ವಿಭಾಗದ ಮುಖ್ಯಸ್ಥ ಡಾ|| ಈರಪ್ಪ ಸೋಗಲದ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಸಂಯೋಜಕ ಡಾ|| ಶೇಖರಪ್ಪ ಬಿ. ಮಲ್ಲೂರ ಕಾರ್ಯಕ್ರಮದ ಉದ್ಧೇಶ ಕುರಿತು ಮಾತನಾಡಿದರು.  ಸಹಾಯಕ ಪ್ರಾಧ್ಯಾಪಕ ಎಂ.ಹೆಚ್. ದಿವಾಕರ್ ವಂದಿಸಿದರು.