ಜೀವದ ಹಂಗು ಬಿಟ್ಟು ಕೊರೊನಾ ಹಿಮ್ಮೆಟ್ಟಿಸಿದ ವಾರಿಯರ್‌

ಜೀವದ ಹಂಗು ಬಿಟ್ಟು ಕೊರೊನಾ ಹಿಮ್ಮೆಟ್ಟಿಸಿದ ವಾರಿಯರ್‌

ನ್ಯಾಮತಿಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರಿಗೆ `ಸೂಪರ್ ಕೊರೊನಾ ವಾರಿಯರ್’ ಪ್ರಶಸ್ತಿ ಹಾಗೂ 5250 ಕೊರೊನಾ ವಾರಿಯರ್‌ಗಳನ್ನು ಅಭಿನಂದಿಸುವ ಅಪೂರ್ವ ಸಮಾರಂಭ

ಹೊನ್ನಾಳಿ, ಅ.19- ವೈದ್ಯಕೀಯ ಜಗತ್ತಿಗೆ ಸವಾಲಾಗಿ, ಕೊರೊನಾ ವೈರಾಣು ವ್ಯಾಪಕವಾಗಿ ಹರಡುವ ಸಂದರ್ಭದಲ್ಲಿ ಅದನ್ನು ತಡೆಯುವಲ್ಲಿ ಆಶಾ ಕಾರ್ಯಕರ್ತೆ ಯರ, ಅಂಗನವಾಡಿ ಕಾರ್ಯಕರ್ತೆ ಯರ, ದಾದಿಯರ, ವೈದ್ಯರ ಹಗಲು – ರಾತ್ರಿಯ ಪರಿಶ್ರಮದ ಸೇವೆ ಅನನ್ಯ ಹಾಗೂ ಅವಿಸ್ಮರಣೀಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ನ್ಯಾಮತಿ ಮಹಿಳಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣ ದಲ್ಲಿ ಇಂದು ಏರ್ಪಾಡಾಗಿದ್ದ ಕಾರ್ಯ ಕ್ರಮದಲ್ಲಿ ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕುಗಳ ಜನತೆಯ ಪರವಾಗಿ ಮಾಜಿ ಸಿಎಂ ಬಿಎಸ್‌ವೈ ಅವರಿಗೆ `ಸೂಪರ್ ಕೊರೊನಾ ವಾರಿಯರ್’ ಪ್ರಶಸ್ತಿ ಹಾಗೂ 5250 ಕೊರೊನಾ ವಾರಿಯರ್‌ಗಳ ಅಭಿ ನಂದನಾ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಅಪರೂಪದ ಈ ಸಮಾರಂಭ ರಾಜ್ಯದಲ್ಲಿಯೇ ಮೊದಲನೆಯ ದ್ದಾಗಿದೆ. ಇದರ ರೂವಾರಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅಭಿನಂ ದನಾರ್ಹರು. ಕೋವಿಡ್ ತಡೆಯು ವಲ್ಲಿ ವೈದ್ಯರು, ದಾದಿಯರು, ಅಂಗ ನವಾಡಿ, ಆಶಾ ಕಾರ್ಯಕರ್ತೆಯರ ಸೇವೆ ಮೆಚ್ಚುವಂತಹದ್ದು, ಶಾಸಕ ರೇಣುಕಾಚಾರ್ಯ ಕೂಡ ಮಾದರಿ ತಾಲ್ಲೂಕು ಮಾಡುವಲ್ಲಿ ಅವಿರತ ವಾಗಿ ಶ್ರಮಿಸುತ್ತಿದ್ದಾರೆ ಎಂದು ಯಡಿಯೂರಪ್ಪ ಶ್ಲ್ಯಾಘಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸೂಚನೆಯಂತೆ ಕೊರೊನಾ ಬಗ್ಗೆ ಇನ್ನೂ ಎಚ್ಚರ ವಹಿಸುವ ಅಗತ್ಯವಿದೆ. ಕೊರೊನಾ ತಡೆಯಲು ವಾರಿಯರ್ಸ್‌ಗಳು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಜನರ ಆರೋಗ್ಯ ರಕ್ಷಣೆ ಮಾಡಿದ್ದಾರೆ ಎಂದು ಅವರು ಪ್ರಶಂಸಿಸಿದರು.

ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮಾತನಾಡಿ, ಕೋವಿಡ್‌ ನಂತಹ ಮಹಾಮಾರಿಯನ್ನು ತಡೆ ಗಟ್ಟಲು ಲಸಿಕೆ ನೀಡಿಕೆ ಕಾರ್ಯಕ್ಕೆ ವೇಗ ದೊರೆತಿದೆ. ಇನ್ನೆರಡು ದಿನಗಳಲ್ಲಿ 100 ಕೋಟಿ ಲಸಿಕೆ ನೀಡಿಕೆ ಪೂರ್ಣಗೊಳ್ಳಲಿದೆ. ವಿಶ್ವದಲ್ಲೇ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಲಸಿಕೆ ನೀಡಿರುವ ದೇಶಗಳಲ್ಲಿ ಭಾರತ ಪ್ರಥಮ ಆಗಲಿದೆ ಎಂದು ಹೇಳಿದರು.

ಕೋವಿಡ್ ಸಾಂಕ್ರಾಮಿಕ ರೋಗ ತಡೆಗೆ ತಮ್ಮ ಜೀವದ ಹಂಗು ತೊರೆದು ಅಹರ್ನಿಶಿ ದುಡಿದ ಕೊರೊನಾ ವಾರಿಯರ್ಸ್‌ಗಳಿಗೆ ಅಭಿನಂದನಾ ಸಮಾರಂಭವನ್ನು ದಾವಣಗೆರೆ ಜಿಲ್ಲೆ ಅದರಲ್ಲೂ ರೇಣುಕಾಚಾರ್ಯ ಅವರ ಕ್ಷೇತ್ರದಲ್ಲಿ ಆಯೋಜಿಸಿರುವುದು ನಿಜಕ್ಕೂ ಶ್ಲ್ಯಾಘನೀಯ ಕಾರ್ಯ ಎಂದರು.

ರಾಜ್ಯದಲ್ಲಿ ಈಗಾಗಲೇ ಶೇ. 79 ರಷ್ಟು ಜನರಿಗೆ ಮೊದಲ ಡೋಸ್  ಹಾಗೂ ಶೇ. 30 ರಷ್ಟು ಜನರಿಗೆ 2 ನೇ ಡೋಸ್ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ಕೋವಿಡ್ ಸಂಪೂರ್ಣ ನಿರ್ಮೂಲನೆ ಮಾಡಲು ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಹೊನ್ನಾಳಿ ತಾಲ್ಲೂಕು ಆಸ್ಪತ್ರೆಯನ್ನು 100 ಹಾಸಿಗೆಗಳಿಂದ 200 ಹಾಸಿಗೆಗಳಿಗೆ, ನ್ಯಾಮತಿ ಆಸ್ಪತ್ರೆಯನ್ನು 30 ರಿಂದ 100 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಆರೋಗ್ಯ ಸಚಿವರಿಗೆ ಮನವಿ ಮಾಡಿದರು.

ಕೋವಿಡ್‌ನಿಂದ ಮೃತಪಟ್ಟ ಕುಟುಂಬಗಳಿಗೆ ಸರ್ಕಾರದಿಂದ 1.5 ಲಕ್ಷ ರೂ. ನೀಡಲಾಗುತ್ತಿದ್ದು, ತಾವೂ ಸಹ ವೈಯಕ್ತಿಕವಾಗಿ 10 ಸಾವಿರ ರೂ. ನೀಡಿರುವುದಾಗಿ ಅವರು ತಿಳಿಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ಪಿ ಸಿ.ಬಿ. ರಿಷ್ಯಂತ್ ಕೊರೊನಾ ವಾರಿಯರ್ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಜಿ.ಪಂ. ಸಿಇಓ ಡಾ. ವಿಜಯ ಮಹಾಂತೇಶ್ ದಾನಮ್ಮನವರ್ ಸೇರಿದಂತೆ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಸಮಾರಂಭದಲ್ಲಿ ದಾದಿಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು ಮತ್ತಿತರೆ ಕೊರೊನಾ ವಾರಿಯರ್ಸ್‌ಗಳಿಗೆ ಹೂಮಳೆಗರೆದು ಗೌರವಿಸಲಾಯಿತು.