ನ. 14 ರವರೆಗೆ ಪ್ರತಿ ಹಳ್ಳಿಗಳಲ್ಲೂ ಉಚಿತ ಕಾನೂನು ಅರಿವು

ನ. 14 ರವರೆಗೆ ಪ್ರತಿ ಹಳ್ಳಿಗಳಲ್ಲೂ ಉಚಿತ ಕಾನೂನು ಅರಿವು

ದಾವಣಗೆರೆ, ಅ.18- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿಕ್ಷಣ ಇಲಾಖೆ, ಅಭಿಯೋಜನೆ ಇಲಾಖೆ ಸಹಯೋಗದಲ್ಲಿ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ, ಪ್ರತಿ ಗ್ರಾಮದಲ್ಲೂ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರೂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ವರಿ ಹೆಗಡೆ ತಿಳಿಸಿದ್ದಾರೆ..

ನಗರದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ಸಭಾಂಗಣದಲ್ಲಿ ಪ್ಯಾನ್ ಇಂಡಿಯಾ ಅವೇರ್‌ನೆಸ್ ಅಂಡ್ ಔಟ್‌ರೀಚ್ ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು..

ಎಲ್ಲರಿರೂ ನೆಮ್ಮದಿ ಜೀವನ ನಡೆಸುವ ಹಕ್ಕನ್ನು ಸಂವಿ ಧಾನ ಕಲ್ಪಿಸಿದ್ದು, ಗ್ರಾಮೀಣ ಜನರಲ್ಲಿ ಕಾನೂನು ಅರಿವಿನ ಕೊರತೆ ಇದೆ. ಆದ್ದರಿಂದ ಪ್ರತಿ ಗ್ರಾಮದಲ್ಲೂ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಅ. 2 ರಂದು ಚಾಲನೆ ನೀಡಲಾಗಿದ್ದು, ನ. 14 ರವರೆಗೆ ನಡೆಯಲಿದೆ ಎಂದರು.

75 ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ, ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಕಾನೂನು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಕಾನೂನು ಸೇವೆಗಳ ಪ್ರಾಧಿಕಾರ ಜನರ ಹಕ್ಕುಗಳ ಸಂರಕ್ಷಣೆಗೆ ಬದ್ಧವಾಗಿದೆ. ಕಾನೂನಿನ ಅರಿವು ಮೂಡಿಸುವು ದು, ಉಚಿತ ಕಾನೂನು ಸಲಹೆ ಮತ್ತು ನೆರವು ನೀಡುವುದು, ಲೋಕ್ ಅದಾಲತ್ ಮೂಲಕ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸುವುದು ಪ್ರಮುಖ ಜವಾಬ್ದಾರಿಯಾಗಿದೆ ಎಂದರು. 

ದಾವಣಗೆರೆ ತಾಲ್ಲೂಕಿನಲ್ಲಿ ಅ. 2 ರಿಂದ 10 ರವರೆಗೆ, ಜಗಳೂರು ತಾಲ್ಲೂಕಿನಲ್ಲಿ ಅ. 11 ರಿಂದ 18 ರವರೆಗೆ ಹಮ್ಮಿಕೊಳ್ಳಲಾಗಿತ್ತು. ಹರಿಹರ ತಾಲ್ಲೂಕಿನಲ್ಲಿ ನಾಳೆ (19 ) ಯಿಂದ ಅ. 26 ರವರೆಗೆ, ಹೊನ್ನಾಳಿ ತಾಲ್ಲೂಕಿನಲ್ಲಿ  27 ರಿಂದ 31 ರವರೆಗೆ, ಚನ್ನಗಿರಿ ತಾಲ್ಲೂಕಿನಲ್ಲಿ ನ. 4 ರಿಂದ 14 ರವರೆಗೆ ನಿರಂತರವಾಗಿ ಕಾನೂನು ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ.

ಎಸ್ಸಿ, ಎಸ್ಟಿಗೆ ಸೇರಿದವರು, ಮಾನಸಿಕ ಅಥವಾ ಬೇರಾವುದೇ ನ್ಯೂನತೆಗೆ ಒಳಗಾಗಿರುವವರು, ಮಹಿಳೆ ಮತ್ತು ಮಕ್ಕಳು, ಕಾರ್ಖಾನೆ ಕಾರ್ಮಿಕರು, ಗುಂಪು ಘರ್ಷಣೆ, ಗಲಭೆ, ಪ್ರವಾಹ, ಭೂಕಂಪ, ಕೈಗಾರಿಕಾ ವಿನಾಶ ಮುಂತಾದ ವುಗಳಿಗೆ ತುತ್ತಾದವರು, ದೈಹಿಕ ವ್ಯಾಪಾರ ಅಥವಾ ಜೀತಕ್ಕೊಳಗಾದವರು, ರಕ್ಷಣಾ ಗೃಹ, ಮನೋರೋಗಿಗಳ ಆಸ್ಪತ್ರೆ ಮುಂತಾದವುಗಳಲ್ಲಿ ಅಭಿರಕ್ಷೆಯಲ್ಲಿರುವವರು, ಮತೀಯ ಕಾರಣದಿಂದ ದೌರ್ಜನ್ಯಕ್ಕೆ ಬಲಿಯಾದವರು, ವಾರ್ಷಿಕ 3 ಲಕ್ಷ ರೂ. ಗಳಿಗಿಂತ ಕಡಿಮೆ ಇರುವವರು ಉಚಿತ ಕಾನೂನು ಸಲಹೆ ಮತ್ತು ನೆರವು ಪಡೆಯಲು ಅರ್ಹರಿರುತ್ತಾರೆ ಎಂದು ರಾಜೇಶ್ವರಿ ಹೆಗಡೆ ಅವರು ಮಾಹಿತಿ ನೀಡಿದರು.

ಹೆಚ್ಚಿನ ಮಾಹಿತಿಗಾಗಿ ದಾವಣಗೆರೆ ಹಳೆಯ ನ್ಯಾಯಾಲಯ ಸಂಕೀರ್ಣದಲ್ಲಿರುವ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ (08192-296364), ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರ ಹರಿಹರ (08192-296885), ಹೊನ್ನಾಳಿ (08188-251732), ಚನ್ನಗಿರಿ (08189-229195), ಜಗಳೂರು (08196-227600) ಇವರನ್ನು ಸಂಪರ್ಕಿಸಬಹುದು. 

ಹಿರಿಯ ಸಿವಿಲ್ ನ್ಯಾಯಾಧೀಶರೂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ ನಾಯಕ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಪಿ. ಬಸವರಾಜ್, ಹಿರಿಯ ಸಹಾಯಕ ಸಾರ್ವಜನಿಕ ಅಭಿಯೋಜಕ ಎ.ಎಂ. ಬಸವರಾಜ್ ಮತ್ತು ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.