ಕಾನೂನು ಅರಿವಿನಿಂದ ಬಾಲ್ಯವಿವಾಹಕ್ಕೆ ತಡೆ

ಕಾನೂನು ಅರಿವಿನಿಂದ ಬಾಲ್ಯವಿವಾಹಕ್ಕೆ ತಡೆ

ಹರಪನಹಳ್ಳಿ ಕಾನೂನು ಅರಿವು ಕಾರ್ಯಕ್ರಮದಲ್ಲಿ ನ್ಯಾ.ಫಕ್ಕೀರವ್ವ ಕೆಳಗೇರಿ

ಹರಪನಹಳ್ಳಿ, ಅ.17- ಸಾರ್ವಜನಿಕರಲ್ಲಿ ಕಾನೂನು ಅರಿವು ಮೂಡಿಸಿದಾಗ ಮಾತ್ರ ಬಾಲ್ಯ ವಿವಾಹಗಳನ್ನು ತಡೆಯಲು ಸಾಧ್ಯ ಎಂದು  ಕಿರಿಯ ಸಿವಿಲ್ ನ್ಯಾಯಾಧೀಶರಾದ ಫಕ್ಕೀರವ್ವ ಕೆಳಗೇರಿ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯತಿ ರಾಜೀವ್ ಗಾಂಧಿ ಸಭಾಂಗಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ  ವಿವಿಧ ಇಲಾಖೆಗಳ ಸಹಯೋಗದಲ್ಲಿ `ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯಿದೆ ಮತ್ತು ವರದಕ್ಷಿಣೆ ನಿಷೇಧಕ್ಕೆ ಸಂಬಂಧಿಸಿದ ಕಾನೂನು ಅರಿವು ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಕಾನೂನಿನಲ್ಲಿ ಮಹಿಳೆಯರಿಗೆ ಹೆಚ್ಚಿನ ರಕ್ಷಣೆ ಇದೆ. ಮಹಿಳೆಯರೂ ಸಹ ಕಾನೂನಿನ ನಿಯಮಗಳನ್ನು ಪಾಲಿಸಬೇಕು. ಯಾವುದೇ ಕಾಯಿದೆಗಳನ್ನು ದುರುಪಯೋಗ ಪಡಿಸಿಕೊಳ್ಳ ಬಾರದು ಎಂದು ಕಿವಿ ಮಾತು ಹೇಳಿದರು.

ಮಹಿಳೆಯರು ತವರು ಮನೆಯಲ್ಲಿ ಜೀವಿಸಿ ದಂತೆಯೇ ಗಂಡನ ಮನೆಯಲ್ಲೂ ಜೀವನ ಮಾಡಿಕೊಂಡು ಹೋಗಬೇಕು. ಗಂಡನ ಪರಿಸ್ಥಿತಿಯನ್ನು ಅರಿತು ಬಾಳಬೇಕು. 

ಪತಿ-ಪತ್ನಿ ಒಬ್ಬರಿಗೊಬ್ಬರು ಪರಸ್ಪರ ಪ್ರೀತಿ, ವಿಶ್ವಾಸದಿಂದ ನಡೆಕೊಳ್ಳಬೇಕು ಎಂದು ಸಲಹೆ ನೀಡಿದರು.

ವಕೀಲರ ಸಂಘದ ಉಪಾಧ್ಯಕ್ಷ ಟಿ.ವೆಂಕಟೇಶ್ ಮಾತನಾಡಿ, ಕುಟುಂಬ ನಿರ್ವಹಣೆ ಮಾಡುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು. ಇಂತಹ ಸಂದರ್ಭದಲ್ಲಿ ಗ್ರಾಮ ವಾಸಿಗಳಿಗೆ ಕಾನೂನು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

ವಕೀಲರಾದ ಜೆ.ಸೀಮಾ ಮಾತನಾಡಿ,  ಮಹಿಳೆಯರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂದರು.  ಅಪರ ಸರ್ಕಾರಿ ವಕೀಲ ವಿ.ಜಿ.ಪ್ರಕಾಶ್ ಗೌಡ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಮಹಿಳೆಯರಿಗೆ ಆಸ್ತಿಯ ಹಕ್ಕು ಇರಲಿಲ್ಲ. ಈಗ  ಆಸ್ತಿಯಲ್ಲಿ ಮಹಿಳೆಯರಿಗೆ ಪುರುಷರಷ್ಟೇ ಸಮಾನ  ಹಕ್ಕಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಕೆ.ಚಂದ್ರಗೌಡ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ಪ್ರಕಾಶ್ ಮಾತನಾಡಿದರು. ವಕೀಲರುಗಳಾದ  ಬಾಗಳಿ ಮಂಜುನಾಥ್, ಮುತ್ತಿಗಿ, ರೇವಣಸಿದ್ದಪ್ಪ, ನಂದೀಶ್ ನಾಯ್ಕ, ಆನಂದ, ಬಿ.ಸಿದ್ದೇಶ್,  ತಾ.ಪಂ. ಸಿಬ್ಬಂದಿಗಳಾದ ಬುಳ್ಳನಗೌಡ, ವಿಜಯಕುಮಾರ್, ಖಲೀಲ್ ಸಾಬ್, ಪಿ.ಪವಿತ್ರ, ರೋಬಿಯಾ, ರೇವಣಸಿದ್ದಪ್ಪ, ಬಸವರಾಜ್, ಕೊಟ್ರೇಶ್ ಸೇರಿದಂತೆ, ಇತರರಿದ್ದರು.