ಹಾನಗಲ್ ಚುನಾವಣೆಗಾಗಿ ನಗರದಲ್ಲಿ ಸಿಎಂ ತಂತ್ರಗಾರಿಕೆ

ಹಾನಗಲ್ ಚುನಾವಣೆಗಾಗಿ ನಗರದಲ್ಲಿ ಸಿಎಂ ತಂತ್ರಗಾರಿಕೆ

ದಾವಣಗೆರೆ, ಅ. 12 – ಹಾವೇರಿ ಜಿಲ್ಲೆಯ ಹಾನಗಲ್‌ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ಉಂಟಾಗಿರುವ ಬಂಡಾಯ ಶಮನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಾಗಿದ್ದಾರೆ.

ಸೋಮವಾರ ರಾತ್ರಿ ನಗರಕ್ಕೆ ಆಗಮಿಸಿ, ಇಲ್ಲಿನ ಜಿ.ಎಂ.ಐ.ಟಿ. ಅತಿಥಿ ಗೃಹದಲ್ಲಿದ್ದ ಬೊಮ್ಮಾಯಿ, ಪಕ್ಷದ ಹಿರಿಯ ಮುಖಂಡರ ಜೊತೆ ಚರ್ಚೆ ನಡೆಸಿದ್ದರು. ಮಂಗಳವಾರ ಮುಂದುವರೆದ ಚರ್ಚೆಯಲ್ಲಿ ಸಚಿವರು, ಶಾಸಕರು, ಪಂಚಮಸಾಲಿ ಮುಖಂಡರಲ್ಲದೇ, ಸ್ವಾಮೀಜಿಗಳ ಜೊತೆಯೂ ಸಮಾಲೋಚನೆ ನಡೆಸಿದ್ದರು.

ಸಂಸದರಾದ ಜಿ.ಎಂ. ಸಿದ್ದೇಶ್ವರ, ಶಿವ ಕುಮಾರ ಉದಾಸಿ, ಸಚಿವರಾದ ಸುನಿಲ್ ಕುಮಾರ್, ಬಿ.ಸಿ. ಪಾಟೀಲ್, ಮುನಿರತ್ನ, ರಾಣೇಬೆನ್ನೂರು ಶಾಸಕ ಅರುಣಕುಮಾರ್ ಪೂಜಾರ್, ಹಾನಗಲ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನ್, ಪಂಚಮಸಾಲಿ ಸಮಾಜದ ಮುಖಂಡರಾದ ಬಿ.ಸಿ. ಉಮಾಪತಿ, ಶಿಗ್ಗಾಂವ್‌ನ ಕುಮಾರೇಶ್ವರ ಪೀಠದ ಶ್ರೀ ಶಾಂತಲಿಂಗ ಸ್ವಾಮೀಜಿ ಮತ್ತಿತರರ ಜೊತೆ ಬೊಮ್ಮಾಯಿ ಸುದೀರ್ಘ ಚರ್ಚೆ ನಡೆಸಿದರು. ಹಾನಗಲ್‌ನಲ್ಲಿ ಪಂಚಮಸಾಲಿ ಸಮುದಾಯ ಗೆಲುವಿನಲ್ಲಿ ಗಣನೀಯ ಪಾತ್ರ ವಹಿಸಲಿದೆ. ಈ ಹಿನ್ನೆಲೆಯಲ್ಲಿ ಸಮುದಾಯದ ಮುಖಂಡರ ಜೊತೆ ಬೊಮ್ಮಾಯಿ ಚರ್ಚಿಸಿರುವುದು ಪ್ರಾಮುಖ್ಯತೆ ಪಡೆದಿದೆ.

ಬಿಜೆಪಿಯಿಂದ ಬಂಡಾಯ ಅಭ್ಯರ್ಥಿಯಾಗಿರುವ ಸಿ.ಆರ್. ಬಳ್ಳಾರಿ ಅವರು ನಾಮಪತ್ರ ವಾಪಸ್ ಪಡೆಯುವ ಬಗ್ಗೆ ಮುಖ್ಯಮಂತ್ರಿ ಮನವೊಲಿಸಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನವಾಗಿರುವ ನಾಳೆ ಬುಧವಾರ ಅವರು ನಾಮಪತ್ರ ವಾಪಸ್ ಪಡೆಯಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಬಳ್ಳಾರಿ ಅವರು ಮುಖ್ಯಮಂತ್ರಿಗೆ ಹಿಂದಿನಿಂದಲೂ ಆಪ್ತರು. ಈ ಹಿನ್ನೆಲೆಯಲ್ಲಿ ಸ್ವತಃ ಮುಖ್ಯಮಂತ್ರಿಯವರೇ ಕರೆಸಿಕೊಂಡು ಮನವೊಲಿಸಿದ್ದಾರೆ. ಅಲ್ಲದೇ ಬಳ್ಳಾರಿ ಅವರ ಸಹೋದರ ಬ್ಯಾಡಗಿ ಕ್ಷೇತ್ರದಲ್ಲಿ ಶಾಸಕರಾಗಿದ್ದಾರೆ. ಹೀಗಾಗಿ ಅವರ ನಾಮಪತ್ರ ವಾಪಸಾತಿ ಶೇ.99ರಷ್ಟು ಖಚಿತ ಎಂದೂ ಮೂಲಗಳು ಹೇಳಿವೆ.

ಚುನಾವಣಾ ಸಮಾಲೋಚನೆ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಬೊಮ್ಮಾಯಿ, ಜಿಲ್ಲೆಯ ಶಾಸಕರು ಹಾಗೂ ಮುಖಂಡರ ಜೊತೆ ಅಭಿವೃದ್ಧಿ ವಿಚಾರ ಚರ್ಚಿಸಿದ್ದೇನೆ. ಇದೇ ವೇಳೆ ಹಾನಗಲ್ ಉಪ ಚುನಾವಣೆಯ ತಂತ್ರಗಾರಿಕೆಯ ಬಗ್ಗೆಯೂ ಚರ್ಚಿಸಿದ್ದೇನೆ. ಹಾನಗಲ್ ಹಾಗೂ ಸಿಂಧಗಿ ಎರಡರಲ್ಲೂ ನಮ್ಮ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ ಎಂದವರು ಹೇಳಿದ್ದಾರೆ. 

ಸಿ.ಆರ್. ಬಳ್ಳಾರಿ ಹಾಗೂ ನಮ್ಮದು ಬಹಳ ಹಳೆಯ ಸಂಬಂಧ, ಅವರು ಶಿವಕುಮಾರ ಉದಾಸಿ ಅವರಿಗೂ ಹತ್ತಿರದವರು. ನಾನು ಇಲ್ಲಿಗೆ ಬರುವುದನ್ನು ತಿಳಿದು, ಅವರೇ ಭೇಟಿಯಾಗಲು ಬಂದಿದ್ದಾರೆ. ನಾಮಪತ್ರ ವಾಪಸ್ಸಾತಿ ಬಗ್ಗೆ ಅವರ ಬೆಂಬಲಿಗರು ಹಾಗೂ ಸಮಾಜದ ಮುಖಂಡರ ಜೊತೆ ಚರ್ಚಿಸಿ, ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಬಳ್ಳಾರಿ, ಬುಧವಾರ ಹಾನಗಲ್‌ನಲ್ಲಿ ಸಮಾಜದ ಮುಖಂಡರ ಜೊತೆ ಚರ್ಚಿಸಿ, ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ. ಬಸವರಾಜ ಬೊಮ್ಮಾಯಿ ಮತ್ತು ನಾನು ಸ್ನೇಹಿತರು. ಅವರು ಮುಖ್ಯಮಂತ್ರಿ ಆಗಿರುವಾಗ ಚುನಾವಣೆಯಲ್ಲಿ ಹೆಚ್ಚುಕಮ್ಮಿ ಆದರೆ ಅವರಿಗೆ ಗೌರವ ತರುವಂಥದ್ದಲ್ಲ. ಆ ದೃಷ್ಟಿಯಿಂದ ಬಹಳಷ್ಟು ವಿಚಾರ ಮಾಡುತ್ತಿದ್ದೇವೆ ಎಂದಿದ್ದಾರೆ.