ಧಾರಾಕಾರ ಮಳೆ : ಮನೆಗಳಿಗೆ ನುಗ್ಗಿದ ನೀರು

ಧಾರಾಕಾರ ಮಳೆ : ಮನೆಗಳಿಗೆ ನುಗ್ಗಿದ ನೀರು

ಮಲೇಬೆನ್ನೂರು, ಅ.11- ಸೋಮವಾರ ಸಂಜೆ 6.30 ರಿಂದ ಶುರುವಾದ ಮಳೆ ತಡ ರಾತ್ರಿವರೆಗೂ ಧಾರಾಕಾರವಾಗಿ ಸುರಿದ ಪರಿಣಾ ಮವಾಗಿ ತಗ್ಗು ಪ್ರದೇಶಗಳಲ್ಲಿ ಇದ್ದ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಯಲವಟ್ಟಿ ಗ್ರಾಮದ ತಾಂಡಾದಲ್ಲಿ ಭತ್ತದ ಗದ್ದೆಗಳ ಮೂಲಕ ಹರಿದು ಬಂದ ಮಳೆ ನೀರು, ಸುಮಾರು 30 ಮನೆಗಳಿಗೆ ನುಗ್ಗಿದ್ದು, ಮನೆ ಸಾಮಾನುಗಳು ನೀರಿನಲ್ಲಿ ತೇಲಾಡುತ್ತಿವೆ ಎಂದು ತಾಂಡಾದ ಕೊಟ್ರೇಶ್ ನಾಯ್ಕ, ಆನಂದ್‌ ನಾಯ್ಕ `ಜನತಾವಾಣಿ’ಗೆ ರಾತ್ರಿ 10 ಗಂಟೆಗೆ ಸುಮಾರಿಗೆ ಮಾಹಿತಿ ನೀಡಿದರು.

ಯಲವಟ್ಟಿ ಅಷ್ಟೇ ಅಲ್ಲದೇ ಮಲೇಬೆನ್ನೂರು, ಜಿಗಳಿ, ಭಾನುವಳ್ಳಿ, ಕಮಲಾಪುರ, ಸಿರಿಗೆರೆ ಮತ್ತಿತರೆ ಗ್ರಾಮಗಳಲ್ಲೂ ಮನೆಗಳಿಗೆ ನೀರು ನುಗ್ಗಿರುವ ಬಗ್ಗೆ ವರದಿಯಾಗಿದ್ದು, ಜನರು ರಾತ್ರಿಯಿಡೀ ನೀರನ್ನು ಮನೆಯಿಂದ ಹಾಕುವ ಕೆಲಸ ಮಾಡಿದ್ದಾರೆ. 

ಭಾರೀ ಮಳೆಯಿಂದಾಗಿ ಎಲ್ಲಾ ಕಾಲುವೆಗಳು, ಹಳ್ಳ – ಕೊಳ್ಳಗಳು ತುಂಬಿ ಹರಿದಿವೆ. ಕೆಲವಡೆ ಚರಂಡಿ ನೀರಿನ ಪೈಪ್‌ಗಳು ಕಸ – ಕಡ್ಡಿಗಳಿಂದ ಮುಚ್ಚಿರುವುದರಿಂದ ಚರಂಡಿ ನೀರು ರಸ್ತೆ, ರಸ್ತೆ ಅಕ್ಕ – ಪಕ್ಕದ ಮನೆಗಳ ಆವರಣಕ್ಕೆ ನುಗ್ಗಿದೆ.

ಇತ್ತ ಮಲೆನಾಡಿನಲ್ಲೂ ಚಿತ್ತಾ ಮಳೆ ಭಾರೀ ಪ್ರಮಾಣದಲ್ಲಿ ಸುರಿದಿದ್ದು, ಸೋಮವಾರ ಸಂಜೆ ವೇಳೆಗೆ ಅನೇಕ ಸಂಪರ್ಕ ಸೇತುವೆಗಳು ನೀರಿನಲ್ಲಿ ಮುಳುಗಡೆ ಆಗಿರುವ ಬಗ್ಗೆ ವರದಿಯಾಗಿದೆ. ಬಾಳೆಹೊನ್ನೂರು – ಕಳಸ ಮತ್ತು ಕಳಸ – ಹೊರ ನಾಡು ಸಂಪರ್ಕ ಕಡಿತಗೊಂಡಿದೆ ಎನ್ನಲಾಗಿದೆ.

ಭದ್ರಾ ಮತ್ತು ತುಂಗಾ ಜಲಾಶಯಗಳಿಗೆ ಒಳಹರಿವು ಹೆಚ್ಚಾಗುತ್ತಿದ್ದು, ಯಾವುದೇ ಕ್ಷಣದಲ್ಲಿ ನದಿಗೆ ನೀರು ಹರಿಸುವ ಸಾಧ್ಯತೆ ಇರುವುದರಿಂದ ತುಂಗಭದ್ರಾ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮಲೇಬೆನ್ನೂರು ಉಪತಹಶೀಲ್ದಾರ್ ಆರ್.ರವಿ ಮನವಿ ಮಾಡಿದ್ದಾರೆ.

ಮಲೇಬೆನ್ನೂರು ಹೋಬಳಿಯ ಅನೇಕ ಗ್ರಾಮಗಳಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿರುವ ಬಗ್ಗೆ ವರದಿಯಾಗಿದ್ದು, ಮಂಗಳವಾರ ಬೆಳಗ್ಗೆ ಸ್ಥಳ ಪರಿಶೀಲನೆ ಮಾಡುವುದಾಗಿ ರವಿ ತಿಳಿಸಿದ್ದಾರೆ.

ಮಳೆ ಪ್ರಮಾಣ : ಸೋಮವಾರ ರಾತ್ರಿ ಸುರಿದ ಮಳೆ ಪ್ರಮಾಣ ಲಭ್ಯವಾಗಿದ್ದು, ಮಲೇಬೆ ನ್ನೂರು ಹೋಬಳಿಯಲ್ಲಿ ಸರಾಸರಿ 80 ಮಿ.ಮೀ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಭಾನುವಳ್ಳಿ ಯಲ್ಲಿ 72.5 ಮಿ.ಮೀ, ನಂದಿಗಾವಿಯಲ್ಲಿ 75.9 ಮಿ.ಮೀ, ಕೆ.ಎನ್.ಹಳ್ಳಿ 77.2 ಮಿ.ಮೀ, ಮಲೇಬೆನ್ನೂರು ಪಟ್ಟಣದಲ್ಲಿ 68.5 ಮಿ.ಮೀ ಮಳೆಯಾಗಿದೆ. ಅತಿ ಹೆಚ್ಚು ಎಂದರೆ ಯಲವಟ್ಟಿ ಯಲ್ಲಿ 127.5 ಮಿ.ಮೀ ಮತ್ತು ಕೊಕ್ಕನೂರಿನಲ್ಲಿ 128.5 ಮಿ.ಮೀ ಮಳೆಯಾಗಿದೆ ಎಂದು ಉಪ ತಹಶೀಲ್ದಾರ್ ಆರ್.ರವಿ ಮಾಹಿತಿ ನೀಡಿದ್ದಾರೆ.