ದುಷ್ಟರ ನಿಗ್ರಹ, ಶಿಷ್ಟರ ರಕ್ಷಣೆಯ ಸಂಕಲ್ಪದ ಆಚರಣೆಯೇ ನವರಾತ್ರಿ

ದುಷ್ಟರ ನಿಗ್ರಹ, ಶಿಷ್ಟರ ರಕ್ಷಣೆಯ ಸಂಕಲ್ಪದ ಆಚರಣೆಯೇ ನವರಾತ್ರಿ

ಹೊನ್ನಾಳಿ ಹಿರೇಕಲ್ಮಠದಲ್ಲಿ ನಡೆದ ಶರನ್ನವರಾತ್ರಿ ದಸರಾ ಮಹೋತ್ಸವದ ಧರ್ಮಸಭೆ ಉದ್ಘಾಟಿಸಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ

ಹೊನ್ನಾಳಿ, ಸೆ. 10-  ದುಷ್ಟ ಶಕ್ತಿಗಳನ್ನು ನಿಗ್ರಹಿಸಿ, ಶಿಷ್ಟರ ರಕ್ಷಣೆಗೆ ಸಂಕಲ್ಪ ಮಾಡುವ ಮಹತ್ವದ ಆಚರಣೆಯೇ ನವರಾತ್ರಿ ಹಬ್ಬ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಇಲ್ಲಿನ ಹಿರೇಕಲ್ಮಠದಲ್ಲಿ ನಡೆದ ಶರನ್ನವರಾತ್ರಿ ದಸರಾ ಮಹೋತ್ಸವದ ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ದೇವಿಗೆ ವಿವಿಧ ಅಲಂಕಾರ ಮಾಡಿ ಭಕ್ತರು ಸಂಭ್ರಮಿಸುತ್ತಾರೆ. ಜನರಲ್ಲಿ ಭಕ್ತಿಯ ಹೊನಲು ಹರಿಸುವ ನವರಾತ್ರಿ ಆಚರಣೆ ನಾಡಿನ ಸಾಂಸ್ಕೃತಿಕ ಹಿರಿಮೆಯ ಸಂಕೇತ. ವಿಜಯನಗರದ ಅರಸರ ಕಾಲದಿಂದ ಆಚರಿಸಲ್ಪಡುತ್ತಿರುವ ನಾಡಹಬ್ಬ ದಸರಾವನ್ನು ಮೈಸೂರು ಅರಸರು ಅತಿ ವಿಜೃಂಭಣೆಯಿಂದ ಆಚರಿಸಲು ಮುಂದಾದರು. ಅದರಂತೆ ನಾಡಿನ ವಿವಿಧ ಮಠ-ಮಾನ್ಯಗಳೂ ತಂತಮ್ಮ ವ್ಯಾಪ್ತಿಯಲ್ಲಿ ವೈಭವದ ದಸರಾ ಆಚರಿಸುವಂತೆ ಹೊನ್ನಾಳಿಯ ಹಿರೇಕಲ್ಮಠವು ಈ ಕಾರ್ಯ ನಡೆಸುವ ಮೂಲಕ ಭಕ್ತರಿಗೆ ಹತ್ತಿರವಾಗಿದೆ ಎಂದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಹೊನ್ನಾಳಿಯ ಹಿರೇಕಲ್ಮಠದಿಂದ ಅನೇಕ ಸಮಾಜಮುಖಿ ಕಾರ್ಯಕ್ರಮಗಳು ನಡೆಯುತ್ತಿವೆ. ಇಂಥ ಮಠದ ಆಶ್ರಯದಲ್ಲಿರುವ ಭಕ್ತರು ನಿಜಕ್ಕೂ ಪುಣ್ಯವಂತರು ಎಂದು ಹೇಳಿದರು.

ಹೊನ್ನಾಳಿಯ ಹಿರೇಕಲ್ಮಠದ ವತಿಯಿಂದ 2020ರಲ್ಲಿ ಆಯೋಜಿಸಲಾಗಿದ್ದ ಕೃಷಿ ಮೇಳ ಮಾದರಿಯಾದುದು. ಆ ರೀತಿಯ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು ಎಂದು ತಿಳಿಸಿದರು.

ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ನಾವೆಲ್ಲರೂ ಧರ್ಮದ ತಳಹದಿಯ ಮೇಲೆ ಜೀವನವನ್ನು ರೂಪಿಸಿಕೊಳ್ಳಬೇಕು. ಸಾಮಾಜಿಕ ಪ್ರಜ್ಞೆ ಮೂಡಿಸುವ ಕೆಲಸವನ್ನು ಮಠಾಧೀಶರು ಮಾಡಬೇಕು ಎಂದು ಹೇಳಿದರು.

ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ವೇಳೆ ಹೊನ್ನಾಳಿ ವಿಧಾನಸಭಾ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ.ಅನುದಾನ ನೀಡುವ ಮೂಲಕ ಅಭಿವೃದ್ಧಿ ಪರ್ವಕ್ಕೆ ಕಾರಣರಾಗಿದ್ದಾರೆ. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಸಾಕಷ್ಟು ಅನುದಾನ ನೀಡುತ್ತಿದ್ದಾರೆ. ಈ ಕಾರಣಕ್ಕಾಗಿ ಅಭಿವೃದ್ಧಿ ಕಾಮಗಾರಿಗಳು ವೇಗ ಪಡೆದುಕೊಂಡಿವೆ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, 2023ರಲ್ಲಿ ಹಿರೇಕಲ್ಮಠದ ವತಿಯಿಂದ ಹೊನ್ನಾಳಿಯಲ್ಲಿ `ದಕ್ಷಿಣ ಭಾರತದ ಐದು ರಾಜ್ಯಗಳ ಕೃಷಿ ಮೇಳ’ ನಡೆಸಲು ತೀರ್ಮಾನಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಐದು ರಾಜ್ಯಗಳ ಮುಖ್ಯಮಂತ್ರಿಗಳನ್ನು ಮೇಳಕ್ಕೆ ಆಹ್ವಾನಿಸಲಾಗುವುದು. 2022ರ ಮಾರ್ಚ್ ತಿಂಗಳಲ್ಲಿ ಹಿರೇಕಲ್ಮಠದಲ್ಲಿ ನಡೆಯುವ ಒಡೆಯರ್ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ-ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ಪುಣ್ಯಾರಾಧನೆ ಸಮಾರಂಭದಲ್ಲಿ `ದಕ್ಷಿಣ ಭಾರತದ ಐದು ರಾಜ್ಯಗಳ ಕೃಷಿ ಮೇಳ’ ದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಗುವುದು ಎಂದು ವಿವರಿಸಿದರು.

ಅಹಿಂದ ಅಧ್ಯಕ್ಷ ಕೆ. ಮುಕುಡಪ್ಪ, ಮುಷ್ಟೂರು ಓಂಕಾರೇಶ್ವರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಹರಪನಹಳ್ಳಿ ತೆಗ್ಗಿನಮಠದ ಶ್ರೀ ವರಸದ್ಯೋಜಾತ ಸ್ವಾಮೀಜಿ, ಚನ್ನಗಿರಿಯ ಶ್ರೀ ಡಾ. ಬಸವ ಜಯಚಂದ್ರ ಸ್ವಾಮೀಜಿಗಳು ಮಾತನಾಡಿದರು. ಯೋಗ ಮತ್ತು ಆರೋಗ್ಯ ಕುರಿತು ಸ್ತ್ರೀ ರೋಗ ತಜ್ಞೆ ಡಾ. ವಾಣಿ ಕೋರಿ ಉಪನ್ಯಾಸ ನೀಡಿದರು.

ಎಚ್.ಎ. ಉಮಾಪತಿ, ಹೊಸೂರು ರುದ್ರೇಶ್, ಗೀತಾ ರವೀಂದ್ರ, ರಂಜಿತಾ ಚನ್ನಪ್ಪ, ಶ್ರೀಧರ್, ಜೆ.ಕೆ. ಸುರೇಶ್, ಶಿವಯೋಗಿ, ಪಟ್ಟಣಶೆಟ್ಟ ಪರಮೇಶ್ವರಪ್ಪ ಇನ್ನಿತರರಿದ್ದರು.