ತಾಳ್ಮೆ ಪರೀಕ್ಷೆ ನಿಲ್ಲಿಸಿ, ಮೀಸಲಾತಿ ಹೆಚ್ಚಿಸಿ : ಸರ್ಕಾರಕ್ಕೆ ರಾಜನಹಳ್ಳಿ ಶ್ರೀ ಎಚ್ಚರಿಕೆ

ತಾಳ್ಮೆ ಪರೀಕ್ಷೆ ನಿಲ್ಲಿಸಿ, ಮೀಸಲಾತಿ ಹೆಚ್ಚಿಸಿ : ಸರ್ಕಾರಕ್ಕೆ ರಾಜನಹಳ್ಳಿ ಶ್ರೀ ಎಚ್ಚರಿಕೆ

ಮಲೇಬೆನ್ನೂರು, ಅ.6- ಎಸ್ಸಿ-ಎಸ್ಟಿ ಮೀಸಲಾತಿಯನ್ನು ಜನಸಂಖ್ಯೆಗನುಗುಣವಾಗಿ ಹೆಚ್ಚಿಸುವ ಸಂಬಂಧ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಆಯೋಗ ವರದಿ ಸಲ್ಲಿಸಿ ವರ್ಷ ಕಳೆದಿದ್ದರೂ ರಾಜ್ಯ ಸರ್ಕಾರ ಇದುವರೆಗೂ ವರದಿ ಅನುಷ್ಠಾನ ಮಾಡುವುದಿರಲಿ, ಅಂಗೀಕಾರವನ್ನೇ ಮಾಡಿಲ್ಲ ಎಂದು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ನ್ಯಾ. ನಾಗಮೋಹನ್ ದಾಸ್ ವರದಿ ಅನುಷ್ಠಾನ ಕುರಿತು ಸಮಾಜದ ಸಚಿವರು, ಸಂಸದರು, ಶಾಸಕರ ಸಮ್ಮುಖದಲ್ಲಿ ಸೋಮವಾರ ಜರುಗಿದ ಸಂವಾದ ಕಾರ್ಯಾಗಾರದ ನೇತೃತ್ವ ವಹಿಸಿ ಶ್ರೀಗಳು ಮಾತನಾಡಿದರು.

ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಹಾಲಿ ಮುಖ್ಯಮಂತ್ರಿಗಳು ಮೀಸಲಾತಿ ಹೆಚ್ಚಿಸುವ ಭರವಸೆ ನೀಡಿದ್ದರೂ, ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ತಾಳ್ಮೆ ಪರೀಕ್ಷೆ ಮಾಡುವುದನ್ನು ನಿಲ್ಲಿಸಲಿ. ನಮ್ಮ ತಾಳ್ಮೆಯನ್ನು ದೌರ್ಬಲ್ಯ ಎಂದು ನೀವು ತಿಳಿದುಕೊಂಡಿದ್ದರೆ, ಸಮಯ ಬಂದಾಗ ನಮ್ಮ ಶಕ್ತಿ ಏನೆಂದು ತೋರಿಸುತ್ತೇವೆ ಎಂದು ಸ್ವಾಮೀಜಿ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಇದೇ ದಿನಾಂಕ 20 ರಂದು ವಾಲ್ಮೀಕಿ ಜಯಂತಿ ಇದ್ದು, ಅಷ್ಟರೊಳಗೆ ವರದಿ ಅಂಗೀಕಾರ ಮಾಡಿ, ಅನುಷ್ಠಾನಗೊಳಿಸುವ ನಿರ್ಧಾರ ಕೈಗೊಳ್ಳಿ. ಅದಕ್ಕೂ ಮೊದಲು ನ್ಯಾ. ಸುಭಾಷ್ ನೇತೃತ್ವದ ತ್ರಿಸದಸ್ಯ ಸಮಿತಿಯಿಂದ ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ವಿಷಯವನ್ನು ವಾಪಸ್ ಪಡೆಯಿರಿ ಎಂದು ಸ್ವಾಮೀಜಿ ಸರ್ಕಾರಕ್ಕೆ ಆಗ್ರಹಪಡಿಸಿದರು. ಇದೇ ರೀತಿ ನಮ್ಮನ್ನು ಎಲ್ಲಾ ವಿಚಾರದಲ್ಲೂ ನಿರ್ಲಕ್ಷ್ಯ ಮಾಡಿದರೆ, ನಾವು ನಮ್ಮ  ನಿರ್ಧಾರವನ್ನು ವಾಲ್ಮೀಕಿ ಜಯಂತಿ ನಂತರ ಪ್ರಕಟಿಸುತ್ತೇವೆ ಎಂದು ಸ್ವಾಮೀಜಿ ಸರ್ಕಾರಕ್ಕೆ ಸಂದೇಶ ನೀಡಿದರು. 

ಇದಕ್ಕೂ ಮುನ್ನ ಬಳ್ಳಾರಿ ಸಂಸದ ಅರಸೀಕೆರೆ ದೇವೇಂದ್ರಪ್ಪ, ಶಾಸಕರುಗಳಾದ ಜಗಳೂರಿನ ಎಸ್.ವಿ. ರಾಮಚಂದ್ರ, ಸಿರಗುಪ್ಪದ ಸೋಮಲಿಂಗಪ್ಪ, ಮಸ್ಕಿಯ ಬಸವನಗೌಡ ತುರವಿನಹಾಳ್, ರಾಯಚೂರು ಗ್ರಾಮೀಣದ ಬಸವನಗೌಡ ದದ್ದಲ್, ಹೆಚ್.ಡಿ. ಕೋಟೆಯ ಅನಿಲ್ ಚಿಕ್ಕಮಾದು, ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಮೈಸೂರಿನ ಅಪ್ಪಣ್ಣ ಮಾತನಾಡಿ, ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಸರ್ಕಾರ ಕೂಡಲೇ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಈ ನಿಟ್ಟಿನಲ್ಲಿ ಯಾವುದೇ ರಾಜೀ ಇಲ್ಲ. ಸ್ವಾಮೀಜಿ ಅವರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆಂದು ಪ್ರಕಟಿಸಿದರು.

ಸಮಾಜದ ಮುಖಂಡ ಹೊದಿಗೆರೆ ರಮೇಶ್ ಮಾತನಾಡಿ, ಮೀಸಲಾತಿಗಾಗಿ ಹೋರಾಟ, ಪಾದಯಾತ್ರೆ ಮಾಡದ ಜನರಿಗೆ ಶೇ. 10 ಮೀಸಲಾತಿ ನೀಡಿರುವ ಸರ್ಕಾರ, ಮೀಸಲಾತಿಗಾಗಿ ಹೋರಾಟ ಮಾಡಿದವರನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ದೂರಿದರು. 

ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯ ಜಿ.ಟಿ. ಚಂದ್ರಶೇಖರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೀಸಲಾತಿ ಕೇಳುವವರ ಬೇಡಿಕೆಯೇ ಬೇರೆ, ಎಸ್ಸಿ-ಎಸ್ಟಿ ಬೇಡಿಕೆಯೇ ಬೇರೆಯಾಗಿದ್ದು, ಸರ್ಕಾರ ಅದಕ್ಕೆ ನಮ್ಮನ್ನು ಜೋಡಣೆ ಮಾಡಬಾರದು. ಈ ವಿಚಾರದಲ್ಲಿ ಸರ್ಕಾರದ ಇಚ್ಛಾಶಕ್ತಿ ಪ್ರದರ್ಶಿಸಬೇಕೆಂದು ಒತ್ತಾಯಿಸಿದರು.

ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಅಪರ ನಿರ್ದೇಶಕ ಕೆ.ಎಸ್. ಮೃತ್ಯುಂಜಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ಟಿ. ಈಶ್ವರ್, ಹರ್ತಿಕೋಟೆ ವೀರೇಂದ್ರ ಸಿಂಹ, ಗುರುಪೀಠದ ಆಡಳಿತಾಧಿಕಾರಿ ಟಿ. ಓಬಳಪ್ಪ, ಧರ್ಮದರ್ಶಿಗಳಾದ ಡಾ. ಜಿ. ರಂಗಯ್ಯ, ಶಾಂತಲಾ ರಾಜಣ್ಣ, ಸುರಪುರ ಶಾಂತ, ನಲುವಾಗಲು ನಾಗರಾಜಪ್ಪ, ಕೋಲಾರದ ವೆಂಕಟರಮಣ, ಹರಿಹರದ ಕೆ.ಬಿ. ಮಂಜುನಾಥ್, ಶಿವಮೊಗ್ಗದ ಬಸವರಾಜಪ್ಪ, ಭರತ್ ಮಗದೂರು ಇನ್ನಿತರರು ವೇದಿಕೆಯಲ್ಲಿದ್ದರು.