26ನೇ ವಾರ್ಡ್‌ನಲ್ಲಿ ಕ್ಷಯ ರೋಗ ನಿರ್ಮೂಲನಾ ಜಾಗೃತಿ

26ನೇ ವಾರ್ಡ್‌ನಲ್ಲಿ ಕ್ಷಯ ರೋಗ ನಿರ್ಮೂಲನಾ ಜಾಗೃತಿ

ದಾವಣಗೆರೆ, ಅ.4- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ನಗರದ 26ನೇ ವಾರ್ಡ್ ನಲ್ಲಿ ಕ್ಷಯ ರೋಗ ನಿರ್ಮೂಲನೆ ಬಗ್ಗೆ ಜಾಗೃತಿ ಜಾಥಾ ನಡೆಸಲಾಯಿತು.

ಕೆಟಿಜೆ ನಗರ 4ನೇ ಕ್ರಾಸ್ ನ ಅಂಗನವಾಡಿ ಶಾಲೆಯಿಂದ ಆರಂಭಗೊಂಡ ಈ ಜಾಥಾಗೆ ಡಾ. ಸುನೀತಾ, ಡಿಹೆಚ್ ಓ ಡಾ. ನಾಗರಾಜ್ ಚಾಲನೆ ನೀಡಿದರು. 1ನೇ ಕ್ರಾಸ್ ನಿಂದ 9ನೇ ಕ್ರಾಸ್ ವರೆಗೂ ಜಾಥಾ ನಡೆಸಿ, ಜನರಲ್ಲಿ ಕ್ಷಯ ರೋಗ ಮತ್ತು ಅದನ್ನು ತಡೆಗಟ್ಟುವ ಬಗ್ಗೆ ಅರಿವು ಮೂಡಿಸಲಾಯಿತು.

ಕ್ಷಯ ರೋಗವು ದೇಹದ ಯಾವುದೇ ಭಾಗಕ್ಕಾದರೂ ಬರಬಹುದು. ಕ್ಷಯ ರೋಗದಲ್ಲಿ ಶ್ವಾಸಕೋಶದ ಕ್ಷಯ ಮತ್ತು ಶ್ವಾಸಕೋಶೇತರ ಕ್ಷಯ ಎಂಬ ಎರಡು ವಿಧಗಳಿವೆ. ಕ್ಷಯ ರೋಗಿ ಕೆಮ್ಮಿದಾಗ, ಸೀನಿದಾಗ ಹೊರ ಬರುವ ತುಂತುರುಗಳಿಂದ ರೋಗಾಣುಗಳು ಆರೋಗ್ಯ ವಂತ ವ್ಯಕ್ತಿಯ ದೇಹ ಸೇರಿ ಕ್ಷಯ ರೋಗದ ಸೋಂಕು ಉಂಟು ಮಾಡುತ್ತದೆ ಎಂದು ಡಾ. ಸುನೀತಾ ತಿಳಿಸಿದರು.

ಕ್ಷಯ ರೋಗಿಗಳು ಕೆಮ್ಮುವಾಗ, ಸೀನು ವಾಗ ಬಾಯಿ ಮತ್ತು ಮೂಗಿನ ಹತ್ತಿರ ಕರವಸ್ತ್ರ ಇಟ್ಟುಕೊಳ್ಳಬೇಕು, ರೋಗಿಯು ಕಫವನ್ನು ಎಲ್ಲೆಂದರಲ್ಲಿ ಉಗಿಯಬಾರದು. ಬದಲಿಗೆ ಅದನ್ನು ಡಬ್ಬಿಯಲ್ಲಿ ಶೇಖರಿಸಿ ಸುಟ್ಟು ಹಾಕ ಬೇಕು, ಇಲ್ಲವೇ ಗುಂಡಿ ತೋಡಿ ಮುಚ್ಚಬೇಕು. ನವಜಾತ ಶಿಶುಗಳಿಗೆ ಬಿಸಿಜಿ ಹಾಕಿಸಬೇಕು. ಮನೆಯಲ್ಲಿ ಹಾಗೂ ಸುತ್ತಮುತ್ತಲಿನವರಲ್ಲಿ ಕ್ಷಯ ರೋಗದ ಲಕ್ಷಣಗಳು ಕಂಡು ಬಂದರೆ ಕೂಡಲೇ ಹತ್ತಿರದ ಕಫ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಬೇಕು. ಹೀಗೆ ಮಾಡುವುದರಿಂದ ಕ್ಷಯ ರೋಗ ತಡೆಗಟ್ಟಬಹುದಾಗಿದೆ ಎಂದು ಡಿಹೆಚ್ ಓ ಡಾ. ನಾಗರಾಜ್ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ 26ನೇ ವಾರ್ಡ್‌ನ ಪಾಲಿಕೆ ಸದಸ್ಯ ಅಬ್ದುಲ್ ಲತೀಫ್, ನಾಸೀರ್ ಹುಸೇನ್, ತಜಮುಲ್ ಬಳ್ಳಾರಿ, ಜಾಕೀರ್ ಹುಸೇನ್, ಜಬೀವುಲ್ಲಾ, ಸುರೇಂದರ್ ಸಿಂಗ್, ಆರಿಫ್, ಅನೂನ್, ಆಶಾ ಕಾರ್ಯಕರ್ತೆಯರು, ನರ್ಸಿಂಗ್ ಸಿಬ್ಬಂದಿ ಸೇರಿದಂತೆ ಇತರರಿದ್ದರು.