ಹೊನ್ನಾಳಿ : ಮಕ್ಕಳಿಗೆ ಬೈಸಿಕಲ್‍ ವಿತರಣೆ

ಹೊನ್ನಾಳಿ : ಮಕ್ಕಳಿಗೆ ಬೈಸಿಕಲ್‍ ವಿತರಣೆ

ವನಯಾತ್ರಿ ಸಂಸ್ಥೆಯಿಂದ 3 ಲಕ್ಷ ರೂ. ವೆಚ್ಚದ ಉತ್ತಮ ಗುಣಮಟ್ಟದ 43 ಸೈಕಲ್ ವಿತರಣೆ

ಹೊನ್ನಾಳಿ, ಅ. 4- ರಾಜ್ಯದಲ್ಲಿರುವ ಲಾಭದಾ ಯಕ ಸಂಸ್ಥೆಗಳ ಸಹಾಯ ಹಸ್ತದೊಂದಿಗೆ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವ ಮೂಲಕ, ಅಭಿವೃದ್ಧಿ ಕೆಲಸವನ್ನು ಸರ್ಕಾರವೇ ಮಾಡಬೇಕು ಎಂಬ ಜನರ ನಿರೀಕ್ಷೆಯನ್ನು ಬದಿಗೆ ತಳ್ಳಿ, ಬಡ ಮಕ್ಕಳ ಶಿಕ್ಷಣದ ಪ್ರಗತಿಗೆ ಮುಂದಾ ಗಬೇಕಿದೆ ಎಂದು ಬೆಂಗಳೂರಿನ ಕೆನರಾ ರೊಬೆಕೋ ಮ್ಯೂಚ್ಯುಯಲ್ ಕಂಪನಿಯ ಸಿಎಸ್ಆರ್ ಹುಬ್ಬಳ್ಳಿಯ ಮಲ್ಲಪ್ಪ ಬೆನ್ನೂರು ಹೇಳಿದರು. 

ನಗರದ ಟಿ.ಬಿ. ಸರ್ಕಾರಿ ಉನ್ನತೀಕರಿಸಿದ ಕನ್ನಡ-ಇಂಗ್ಲಿಷ್ ಶಾಲೆಯಲ್ಲಿ 5 ಹಾಗೂ 6ನೇ ತರಗತಿಯ ಕನ್ನಡ ಮಾಧ್ಯಮದ 43 ಮಕ್ಕಳಿಗೆ ಸೈಕಲ್ ವಿತರಣೆ ಮಾಡಿ ಅವರು ಮಾತನಾಡಿದರು.

3 ಲಕ್ಷ ರೂಗಳ ವೆಚ್ಚದ ಉತ್ತಮ ಗುಣಮಟ್ಟದ 7 ಸಾವಿರ ಒಂದರಂತೆ ಒಟ್ಟು 43 ಸೈಕಲ್ ಗಳನ್ನು ಮಕ್ಕಳಿಗೆ ನೀಡಲು ಮುಂದಾಗಿದ್ದು,  ಶಾಲೆಯ ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟ ಹಾಗು ಶಾಲಾ ಸುಧಾರಣೆಗೆ ವನಯಾತ್ರಿ ಸಂಸ್ಥೆ ಕೈಜೋಡಿಸಲಿದೆ ಎಂದು ಅವರು ಹೇಳಿದರು.

ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಮಾಸಡಿ ನಾಗರಾಜ ಮಾತನಾಡಿ, ವನಯಾತ್ರಿ ಸಂಸ್ಥೆಯು ನಮ್ಮ ಶಾಲೆಯನ್ನು ದತ್ತು ಪಡೆದಿದ್ದು, ಇದೇ ತಾಲ್ಲೂಕಿನವರಾದ ಸಂಸ್ಥೆಯ ಮುಖ್ಯಸ್ಥ ಬೆಂಗಳೂ ರಿನ ರಘು, ಶಾಲೆಯ ಮೇಲಿನ ಅಭಿಮಾನಕ್ಕೆ ಕಳೆದ ವರ್ಷ ಶಾಲಾ ಕಟ್ಟಡ ದುರಸ್ತಿಗಾಗಿ 1 ಲಕ್ಷ 60 ಸಾವಿರ ರೂ. ಅನುದಾನ ನೀಡಿ, ಅಭಿವೃದ್ಧಿ ಪಡಿಸಿದರು. ಇದೀಗ ಸರ್ಕಾರ ಸೈಕಲ್ ನೀಡದೇ ಇರುವುದನ್ನು ಗಮನಿಸಿದ ರಘು, ಮಕ್ಕಳ ಕಲಿಕೆಯ ಸುಧಾರಣೆ ಹಾಗೂ ಪ್ರೋತ್ಸಾಹಿಸುವುದಕ್ಕಾಗಿ ಸಂಸ್ಥೆಯಿಂದ ಸೈಕಲ್ ನೀಡುತ್ತಿದ್ದಾರೆಂದರು.

ಸಮಾರಂಭದಲ್ಲಿ ಬಿಆರ್‍ಸಿ ಉಮಾಶಂಕರ್, ಪುರಸಭಾ ಅಧ್ಯಕ್ಷರಾದ ರಂಜಿತಾ ಚನ್ನಪ್ಪ, ಶಾಲಾ ಮುಖ್ಯೋಪಾಧ್ಯಾಯ ಯೊಗೇಂದ್ರಕುಮಾರ್, ಎಸ್‍ಡಿಎಂಸಿ ಉಪಾಧ್ಯಕ್ಷೆ ರೇಷ್ಮಾ, ತಾಲ್ಲೂಕು ಎಸ್‍ಡಿಎಂಸಿ ಅಧ್ಯಕ್ಷ ಶಿವಲಿಂಗಪ್ಪ, ರುದ್ರನಾಯ್ಕ್, ರುದ್ರಯ್ಯ  ಮಾತನಾಡಿದರು.

ಶಾಲಾ ಪೋಷಕರಾದ ಬಿ.ಎನ್. ಉಮೇಶ್, ದಾಕ್ಷಾಯಿಣಿ, ರೂಪ, ಉಮೇಶ ಬಂತಿ, ಚನ್ನೇಶ್, ರಾಜಣ್ಣ, ಮಂಜುನಾಥ, ಗೌರಮ್ಮ, ಅಶ್ವಿನಿ, ಶಿಕ್ಷಕರಾದ ಸುರೇಶ್, ಕೊಟ್ರೇಶ, ಮಹೇಶ, ಶಾಂತವೀರಯ್ಯ, ನಿರಂಜನ, ವಾಣಿ, ರೇಖಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.