ಶಾಶ್ವತ ಪರಿಹಾರಕ್ಕೆ 5ನೇ ವಾರ್ಡ್ ನಾಗರಿಕರ ರಸ್ತೆ ತಡೆ

ಶಾಶ್ವತ ಪರಿಹಾರಕ್ಕೆ 5ನೇ ವಾರ್ಡ್ ನಾಗರಿಕರ ರಸ್ತೆ ತಡೆ

ದಾವಣಗೆರೆ, ಅ.4- ಶುಕ್ರವಾರ ರಾತ್ರಿ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶವಾದ ನಗರದ 5ನೇ ವಾರ್ಡ್ ಬೂದಾಳ್ ರಸ್ತೆಯ ಬಾಪೂಜಿ ನಗರ, ಬಾಬು ಜಗಜೀವನರಾಮ್ ನಗರದಲ್ಲಿನ ಮನೆಗಳಿಗೆ ನೀರು ನುಗ್ಗಿ ರಾತ್ರಿಯೆಲ್ಲಾ ಜನಜೀವನ ಅಸ್ತವ್ಯಸ್ತವಾಗಿತ್ತು. ಇದರಿಂದ ರೋಸಿ ಹೋದ ಅಲ್ಲಿನ ನಿವಾಸಿಗಳು ಇಂದು ಜಿಲ್ಲಾಡಳಿತ ಹಾಗೂ ನಗರಪಾಲಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

 ಬೂದಾಳ್ ಮುಖ್ಯರಸ್ತೆಯಲ್ಲಿ ಪ್ರತಿಭಟನಾ ಧರಣಿ ಮುಖೇನ ರಸ್ತೆ ತಡೆ ನಡೆಸಿ, ಸ್ಥಳಕ್ಕೆ ನಗರ ಪಾಲಿಕೆ ಆಯುಕ್ತರು, ಸ್ಮಾರ್ಟ್ ಸಿಟಿ ಮುಖ್ಯಸ್ಥರು ಆಗಮಿಸಬೇಕೆಂದು ಪಟ್ಟುಹಿಡಿದರು. ಕಳೆದ 15 ವರ್ಷಗಳಿಂದ ಇದೇ ಸಮಸ್ಯೆ ಇದ್ದು ದೊಡ್ಡ ಮಳೆಯಾದರೆ ಮನೆಗಳಿಗೆ ನೀರು ನುಗ್ಗುತ್ತಿದ್ದು, ಹಲವು ಬಾರಿ ಜಿಲ್ಲಾಡಳಿತಕ್ಕೂ ಹಾಗೂ ನಗರ ಪಾಲಿಕೆಗೆ ಮನವಿ ಮಾಡಿದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂದು ಆಕ್ರೋಶ ಹೊರ ಹಾಕಿದರು.

ಪ್ರತಿಭಟನಾ ಸ್ಥಳಕ್ಕಾಗಮಿಸಿದ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಹಾಗೂ ನಗರ ಪಾಲಿಕೆಯ ಅಧಿಕಾರಿಗಳು, ಮಳೆ ನೀರು ನುಗ್ಗದಂತೆ ಕಾಮಗಾರಿ ಕೈಗೊಂಡು ಅತಿ ಶೀಘ್ರದಲ್ಲಿ ಮುಗಿಸುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

 ಪ್ರತಿಭಟನೆಯಲ್ಲಿ ವಿ.ಎಸ್. ನರಸಿಂಹಮೂರ್ತಿ, ಹರೀಶ್, ಆಕಾಶ್, ಮಲ್ಲಿಕ್, ತಿಪ್ಪೇಶ್, ಶಿವಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.