ಜಗಳೂರಿನ ಹಿರಿಯ ನಾಗರಿಕರ ಕಚೇರಿಯಲ್ಲಿ ಗಾಂಧೀಜಿ, ಶಾಸ್ತ್ರೀಜಿ ಜಯಂತಿ

ಜಗಳೂರಿನ ಹಿರಿಯ ನಾಗರಿಕರ ಕಚೇರಿಯಲ್ಲಿ ಗಾಂಧೀಜಿ, ಶಾಸ್ತ್ರೀಜಿ ಜಯಂತಿ

ಜಗಳೂರು, ಅ.4-  ದೇಶದ ಮಹಾನ್ ನಾಯಕ ಮಹಾತ್ಮ ಗಾಂಧೀಜೀಯವರ ಆದರ್ಶ ತತ್ವಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು, ಮುನ್ನಡೆಯಬೇಕೆಂದು ಹಿರಿಯ ನಾಗರಿಕರ ಸಂಘದ ಉಪಾಧ್ಯಕ್ಷ, ಸಮಾಜ ಸೇವಕ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಹೇಳಿದರು.

ಪಟ್ಟಣದ ಹಿರಿಯ ನಾಗರಿಕರ ಕಚೇರಿಯ ಆವರಣದಲ್ಲಿ 153 ನೇ ಮಹಾತ್ಮ ಗಾಂಧೀಜಿ ಜಯಂತಿ ಆಚರಣೆ ಹಾಗೂ ಲಾಲ್‌ ಬಹದ್ದೂರ್ ಶಾಸ್ತ್ರಿ ಅವರ ಜಯಂತ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ದೇಶಕ್ಕಾಗಿ ಅಹಿಂಸಾತ್ಮಕವಾಗಿ ಹೋರಾಟ ಮಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಇವರು, ಪ್ರಧಾನ ಮಂತ್ರಿಯಾಗುವ ಅವಕಾಶವಿದ್ದರೂ ಪ್ರಧಾನ ಮಂತ್ರಿಯ ಸ್ಥಾನವನ್ನು ಅಲಂಕರಿಸಲಿಲ್ಲ. ಅಂತವರನ್ನು ನಾವು ಇಂದು ಅವರ ಹುಟ್ಟು ಹಬ್ಬದ ಅಂಗವಾಗಿ ಗಾಂಧೀಜಿ ಜಯಂತಿ ಮಾಡಿ ಸ್ಮರಿಸುತ್ತಿದ್ದೇವೆ. ಹಿರಿಯ ನಾಗರಿಕರಾದ ನಾವು ಗಾಂಧೀಜಿ ಧರಿಸುವ ಟೋಪಿಯನ್ನು ಹಾಕುವ ಮೂಲಕ ಗಾಂಧಿ ಜಯಂತಿಯನ್ನು ಆಚರಿಸುತ್ತಿರುವುದು ಸಂತಸ ತಂದಿದೆ. ಎಂದರು.

ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಸಿ. ತಿಪ್ಪೇಸ್ವಾಮಿ ಮಾತನಾಡಿ, ಮಹಾತ್ಮ ಗಾಂಧೀಜಿ ಬ್ರಿಟೀಷರನ್ನು ದೇಶದಿಂದ ತೆರವುಗೊಳಿಸಬೇಕು ಎನ್ನುವ ಛಲದಿಂದ ಅಹಿಂಸಾವಾದದ ಮೂಲಕ ಹೋರಾಟ ನಡೆಸಿದರು. ಅನೇಕ ಬಾರಿ ಸತ್ಯಾಗ್ರಹ, ಪ್ರತಿಭಟನೆ ನಡೆಸಿ ಜೈಲುವಾಸ ಅನುಭವಿಸಿದರು. ಧೃತಿ ಗೆಡದೇ ದೇಶವನ್ನು ಒಗ್ಗೂಡಿಸಿ ಶಾಂತಿಯುತವಾಗಿಯೇ ಸ್ವಾತಂತ್ರ ತಂದು ಕೊಡುವಲ್ಲಿ ಯಶಸ್ವಿಯಾದರು ಎಂದು ಸ್ಮರಿಸಿದರು.

ಹಿರಿಯ ನಾಗರಿಕರ ಸಂಘದ ವತಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಜನೆ ಮಾಡುತ್ತಾ ಪಟ್ಟಣದ ರಾಮನ ದೇವಸ್ಥಾನ, ಈಶ್ವರ, ಆಂಜನೇಯ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ಆಗಮಿಸಿ ಪೂಜೆ ನೆರವೇರಿಸಿದರು. ಹಿರಿಯ ನಾಗರಿಕರು ಬಿಳಿ ಪಂಚೆ, ಬಿಳಿ ಟೋಪಿ ಜೊತೆ ಸಮವಸ್ತ್ರ ಧರಿಸಿ ಗಾಂಧಿ ಜಯಂತಿಗೆ ಮೆರಗು ತಂದಿದ್ದರು.

ಈ ಸಂದರ್ಭದಲ್ಲಿ ಹಿರಿಯ ನಾಗರಿಕರ ಸಂಘದ ಕಾರ್ಯದರ್ಶಿ ಹಾಲಪ್ಪ, ಉಪಾಧ್ಯಕ್ಷರಾದ ಮಾದೇಗೌಡ, ಕರಿಬಸಣ್ಣ, ಗೌರವಾಧ್ಯಕ್ಷ ಪೋಸ್ಟ್ ರಂಗಣ್ಣ, ಮಲ್ಲಣ್ಣ, ಲಕ್ಷ್ಮಣ್ ರೆಡ್ಡಿ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.