ಎಐಡಿಸ್ಓ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ
ದಾವಣಗೆರೆ, ಅ.4- ಪ್ರಸ್ತುತ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಬಸ್ ಪಾಸ್ ಉಚಿತವಾಗಿ ಒದಗಿಸಲು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಸ್ಓ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ಜಯದೇವ ವೃತ್ತದಲ್ಲಿಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಮುಖಾಂತರ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿದರು.
ಹಿಂದಿನ ವರ್ಷದ ವಿದ್ಯಾರ್ಥಿ ಬಸ್ ಪಾಸ್ನ ವಿಸ್ತರಣೆಯ ಅವಧಿ ಮುಗಿದಿದೆ. ಆದರೆ ಇನ್ನೂ ಪರೀಕ್ಷೆಗಳು ನಡೆಯುತ್ತಿವೆ. ಮತ್ತೆ ಕೆಲವು ಕೋರ್ಸ್ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷ ಆರಂಭ ವಾಗಿದೆ. ವಿದ್ಯಾರ್ಥಿಗಳು ಈಗ ತಮ್ಮ ಹಳ್ಳಿ, ಊರುಗಳಿಂದ ಶಾಲಾ-ಕಾಲೇಜಿಗೆ ಬರ ಬೇಕಾದರೆ ಬಸ್ ಟಿಕೆಟ್ನ ದರ ಪಾವತಿಸಿ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ. ಬಹಳಷ್ಟು ದೂರದ ಪ್ರಯಾಣ ಮಾಡುವ ವಿದ್ಯಾರ್ಥಿಗಳಿಗೆ ಬಹುಮುಖ್ಯ ವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್ ಟಿಕೆಟ್ ದರ ಹೊರೆಯಾಗಿ ಪರಿಣಮಿಸಿದೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಅಳಲಿಟ್ಟರು.
ಕಳೆದ ವರ್ಷ ವಿದ್ಯಾರ್ಥಿಗಳು ಪಡೆ ದಿದ್ದ ವಾರ್ಷಿಕ ಬಸ್ಪಾಸ್ ಸಂಪೂರ್ಣ ವಾಗಿ ಉಪಯೋಗವಾಗಿಲ್ಲ. ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಲಾಕ್ಡೌನ್ ಆದ ಪರಿಣಾಮ ಬಹುಪಾಲು ಶಾಲಾ-ಕಾಲೇಜಿಗೆ ರಜೆ ಘೋಷಣೆಯಾಗಿದ್ದು, ಆಫ್ಲೈನ್ ತರಗತಿಗಳು ನಡೆದಿಲ್ಲ. ಈ ಕಾರಣದಿಂದಾಗಿ ವರ್ಷದ ಮೊದಲಲ್ಲೇ ಸಂಪೂರ್ಣ ಬಸ್ ಪಾಸ್ ದರ ಪಾವತಿಸಿ ದ್ದರೂ ವಾರ್ಷಿಕ ಬಸ್ ಪಾಸ್ ಸುಮಾರು ಅರ್ಧ ವರ್ಷಕ್ಕೂ ಬಳಕೆ ಆಗಿಲ್ಲ. ಈಗ ಮತ್ತೊಮ್ಮೆ ವಿದ್ಯಾರ್ಥಿಗಳು ವಾರ್ಷಿಕ ಬಸ್ಪಾಸ್ನ ಸಂಪೂರ್ಣ ವೆಚ್ಚ ಭರಿಸಿ ಪಡೆಯಬೇಕಾದಲ್ಲಿ ಅವರ ಮೇಲೆ ಅತ್ಯಂತ ಹೊರೆ ಬೀಳುತ್ತದೆ ಎಂದು ಆಕ್ಷೇಪಿಸಿದರು.
ರಾಜ್ಯದ ಎಲ್ಲ ವಿದ್ಯಾರ್ಥಿಗಳ ವಿದ್ಯಾಭ್ಯಾಸವನ್ನು ಮತ್ತು ಅವರ ಆರ್ಥಿಕ ಸ್ಥಿತಿಗತಿಗಳನ್ನು ಗಮನದಲ್ಲಿ ಇರಿಸಿಕೊಂಡು ಪ್ರಸ್ತುತ ವರ್ಷದ ಬಸ್ಪಾಸ್ ಅನ್ನು ಉಚಿತವಾಗಿ ನೀಡಬೇಕು. ಹಿಂದಿನ ವರ್ಷದ ಪಾಸ್ ಅನ್ನು ಈ ಶೈಕ್ಷಣಿಕ ವರ್ಷ ಪೂರ್ತಿ ಬಳಕೆ ಮಾಡಲು ಸಾರಿಗೆ ಇಲಾಖೆಯಿಂದ ಅನುಮತಿ ನೀಡಬೇಕು ಎಂದು ಜಿಲ್ಲಾ ಕಾರ್ಯದರ್ಶಿ ಪೂಜಾ ನಂದಿಹಳ್ಳಿ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಾವ್ಯ, ಅಭಿ ಸೇರಿದಂತೆ ಸೀತಮ್ಮ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.