ಅನುಭವಗಳ ಹಿನ್ನೆಲೆಯಲ್ಲಿ ಕಲಿಸುವವನೇ ನಿಜವಾದ ಶಿಕ್ಷಕ

ಅನುಭವಗಳ ಹಿನ್ನೆಲೆಯಲ್ಲಿ ಕಲಿಸುವವನೇ ನಿಜವಾದ ಶಿಕ್ಷಕ

ಕಲಿಸು ಗುರುವೇ ಕಲಿಸು, ಎಂಬಂತೆ ವೃತ್ತಿಗಳಲ್ಲೇ ಶಿಕ್ಷಕ ವೃತ್ತಿ ಶ್ರೇಷ್ಠ ವೃತ್ತಿ. ಸಮಾಜದಲ್ಲಿ ಶಿಕ್ಷಕನಿಗೆ  ಆದಿ ಕಾಲದಿಂದಲೂ ಗೌರವದ ಸ್ಥಾನವಿದೆ. ಈತನನ್ನು ರಾಷ್ಟ್ರದ ನಿರ್ಮಾತೃ, ರಾಷ್ಟ್ರ ಶಿಲ್ಪಿ, ಸಮಾಜದ ಹರಿಕಾರ, ಸಾಮಾಜಿಕ ಬದಲಾವಣೆಯ ಕೇಂದ್ರ ಬಿಂದು ಎಂದೆಲ್ಲಾ ಕರೆಯುವುದುಂಟು. ಶಿಕ್ಷಕ ತನ್ನ ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಕನಾಗಿರದೆ, ವಾತ್ಸಲ್ಯಮಯಿ ತಂದೆಯಾಗಿ, ತಾಯಿಯಾಗಿ, ಬಂಧುವಾಗಿ, ಸ್ನೇಹಿತನಾಗಿ, ಮಾರ್ಗದರ್ಶಕನಾಗಿ, ತತ್ವಜ್ಞಾನಿಯಾಗಿ ಪಾತ್ರವನ್ನು ನಿರ್ವಹಿಸಬೇಕಾಗುತ್ತದೆ. ವಿದ್ಯಾರ್ಥಿಗಳ ಭವ್ಯ ಭವಿಷ್ಯತ್ತನ್ನು ರೂಪಿಸುವವನೇ ನಿಜವಾದ ಶಿಕ್ಷಕ. ಉತ್ತಮ ವ್ಯವಸ್ಥೆಯಿದ್ದು ಅದಕ್ಕೆ ತಕ್ಕುದಾದ ಶಿಕ್ಷಕನಿಲ್ಲದಿದ್ದರೆ ಅದು ನಿರರ್ಥಕ, ಆದರೆ ವ್ಯವಸ್ಥೆಯಲ್ಲಿ ಅಲ್ಪ ದೋಷವಿದ್ದರೂ ಶಿಕ್ಷಕನಾದವನು ಉತ್ತಮನಿದ್ದಲ್ಲಿ ಅದನ್ನು ಚೆನ್ನಾಗಿ ನಿಭಾಯಿಸಬಲ್ಲನು. ದಿನದ ಹೆಚ್ಚು ಸಮಯವನ್ನು ವಿದ್ಯಾರ್ಥಿಗಳು ಶಾಲೆಯಲ್ಲಿ ಕಳೆಯುವರು. ಹಾಗಾಗಿ ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ನಿರ್ಮಿಸುವ ಹೊಣೆ ಶಿಕ್ಷಕನದ್ದು. ಒಬ್ಬ ಉತ್ತಮ ಶಿಕ್ಷಕ ಅತ್ಯಂತ ಉತ್ಸಾಹಿಯಾಗಿದ್ದು, ಪ್ರಾಮಾಣಿಕತೆಯಿಂದ  ತನ್ನೆಲ್ಲಾ ಸಾಮರ್ಥ್ಯವನ್ನು ಒಟ್ಟುಗೂಡಿಸಿ ಜ್ಞಾನವನ್ನು ಧಾರೆ ಎರೆಯಬೇಕು. ಜಗ ಮೆಚ್ಚಿದ ಶಿಕ್ಷಕನಾಗುವುದರ ಬದಲಿಗೆ  ವಿದ್ಯಾರ್ಥಿಗಳು ಮೆಚ್ಚಿದ ಶಿಕ್ಷಕನಾಗುವತ್ತ ಪ್ರಯತ್ನಿಸಬೇಕು.

 ” ಸಾಮಾನ್ಯ ಶಿಕ್ಷಕ ಹೇಳುತ್ತಾನೆ
ಸರಾಸರಿ ಶಿಕ್ಷಕ ವಿವರಿಸುತ್ತಾನೆ,
ಉತ್ತಮ ಶಿಕ್ಷಕ ಪ್ರಾತ್ಯಕ್ಷಿಸುತ್ತಾನೆ,
ಶ್ರೇಷ್ಠ ಶಿಕ್ಷಕ ಉತ್ತೇಜಿಸುತ್ತಾನೆ”.

ಪ್ರತಿ ಶಿಕ್ಷಕನು ಮೇಲ್ಕಾಣಿಸಿದ ನಾಲ್ಕು ವರ್ಗಗಳಲ್ಲಿ ತಾನು ಯಾವ ವರ್ಗಕ್ಕೆ ಸೇರಿದವನೆಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬೋಧನೆಯೆಂದರೆ ಬೊಗಸೆಯಲ್ಲಿ ನೀರು ಕುಡಿದಷ್ಟು ಸುಲಭವಲ್ಲ. ಅದಕ್ಕಾಗಿ ಪರಿಶ್ರಮಪಡಬೇಕು. ಇದು  ಗಿಳಿ ಪಾಠದಂತಿರದೆ, ತರಗತಿಗೆ ಸಿದ್ಧಪಡಿಸಿಕೊಂಡು ಬಂದ ಮಾಹಿತಿಯನ್ನಷ್ಟೇ ವಿದ್ಯಾರ್ಥಿಗಳ ಮುಂದೆ ಪ್ರಸ್ತುತಪಡಿಸದೆ, ಕಂಠಪಾಠ ಮಾಡಿಕೊಂಡು ಬಂದವರಂತೆ ಬೋಧಿಸದೆ  ವಿಷಯವನ್ನು ಉತ್ತಮವಾಗಿ ಗ್ರಹಿಸಿ ಉದಾಹರಣೆ, ಸಂಗತಿ, ಕಥೆ, ವಿಷಯಾನುಬಂಧ ಹಾಗೂ ಅನುಭವದ ಮೂಸೆಯಲ್ಲಿ  ಪಠ್ಯ  ವಿಷಯವನ್ನು ಅತ್ಯಂತ ನವಿರಾಗಿ, ಹಾಸ್ಯಮಯವಾಗಿ ಕಣ್ಣಿಗೆ ಕಟ್ಟುವಂತೆ ಅರ್ಥಗರ್ಭಿತವಾಗಿ ಯಾರು  ಬೋಧಿಸುವರೋ ಆತನು ನಿಜಾರ್ಥದಲ್ಲಿ  ಶಿಕ್ಷಕನೆನಿಸುವನು. ಈ ರೀತಿಯಾಗಿ ನಮ್ಮಲ್ಲಿ ಎಷ್ಟು ಜನ ಬೋಧಿಸಿಯಾರು ಎಂಬುದನ್ನು  ವಿಮರ್ಶೆ ಮಾಡಿಕೊಳ್ಳಬೇಕು. ಶಿಕ್ಷಕನಾದವನು ಸದಾ ಚಲನಶೀಲನಾಗಿ, ಸತತ ಅಧ್ಯಯನಶೀಲನಾಗಿ, ಸದಾ ವಿದ್ಯಾರ್ಥಿಯಾಗಲ್ಲದೆ, ಸಮಯ ಪ್ರಜ್ಞೆಯನ್ನೂ  ಹೊಂದಿದವನಾಗಿರಬೇಕು. ಇವೆಲ್ಲವುಗಳನ್ನು  ಯಾರು  ಮೈಗೂಡಿಸಿಕೊಳ್ಳುತ್ತಾನೋ  ಆತನು ನಿಜಾರ್ಥದಲ್ಲಿ ಸದ್ಗುರುವೆನಿಸಿಕೊಳ್ಳುವನು. ಆದರೆ ಇಂತಹ ಗುಣಲಕ್ಷಣಗಳು ಎಷ್ಟು  ಶಿಕ್ಷಕರಲ್ಲಿವೆ  ಎಂದು  ಆಲೋಚಿಸಬೇಕು. ಏನೋ ಕಾಟಾಚಾರಕ್ಕೆ ಶಾಲೆಗೆ ಬಂದೆ, ಪಾಠ ಮಾಡಬೇಕಲ್ಲಾ ಅಂತ ಮಾಡಿದೆ ಎನ್ನುವಂತಾಗಬಾರದು. ಒಬ್ಬ ಶಿಕ್ಷಕ ಸರಿಯಾಗಿ ಬೋಧಿಸದಿದ್ದರೆ ಸಾವಿರಾರು ವಿದ್ಯಾರ್ಥಿಗಳನ್ನು ಕೊಂದ ಹಾಗೆ. ಅಂತೆಯೇ ಯಾವುದೇ  ಶಿಕ್ಷಕ ಅವಧಿಯ ಅಂತ್ಯದಲ್ಲಿ ಬೆಲ್ಲು ಮತ್ತು ತಿಂಗಳ ಅಂತ್ಯದಲ್ಲಿ ಬಿಲ್ಲಿಗೆ ಕಾಯದೆ, ತನ್ನನ್ನು ತಾನು ಈ ವೃತ್ತಿಗೆ ಸಂಪೂರ್ಣವಾಗಿ  ಅರ್ಪಣೆ ಮಾಡಿಕೊಳ್ಳಬೇಕು. ಬಸವಣ್ಣನವರು ನುಡಿದಂತೆ ತಾನು ನಿರ್ವಹಿಸುವ ಕೆಲಸದಲ್ಲಿ ಕೈಲಾಸವನ್ನು ಕಾಣುವಂತಹ ಶಿಕ್ಷಕರು ಈ ಸಮಾಜಕ್ಕೆ ಅಗತ್ಯವಾಗಿ ಬೇಕು.

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬಂತೆ ವಿದ್ಯಾರ್ಥಿಗಳಾದವರು ಪಾಠ ಹೇಳಿ ಕೊಡುವ ಗುರುಗಳಿಗೆ ಸದಾ ಋಣಿ ಮತ್ತು  ವಿಧೇಯರಾಗಿರಬೇಕು. ಹೇಳಿ ಕೊಡುವ ತಾಳ್ಮೆ ಶಿಕ್ಷಕನಲ್ಲಿ ಹಾಗೂ ಕಲಿಯುವ ತಾಳ್ಮೆ ಮತ್ತು ಹಂಬಲ ವಿದ್ಯಾರ್ಥಿಗಳಲ್ಲಿರಬೇಕು. ಆದರೆ ಇದು ಬಹಳಷ್ಟು ಮಂದಿಯಲ್ಲಿ ಕಾಣಸಿಗದು. ಕೆಲವೊಮ್ಮೆ ಕಲಿಸಿದ ಶಿಕ್ಷಕರು ಎದುರಿಗೆ ಬಂದರೆ ಕಂಡರೂ ಕಾಣದಂತೆ  ಬೇರೆ ದಾರಿಯಲ್ಲಿ  ಹೋಗುವ ವಿದ್ಯಾರ್ಥಿಗಳಿಗೇನೂ ಕಡಿಮೆಯಿಲ್ಲ. ಇದು ಗುರುಗಳಿಗೆ ಮಾಡುವ ಅಪಮಾನ ಮತ್ತು ಅವಮಾನವೇ ಸರಿ.

ಶಿಕ್ಷಕ  ವೃತ್ತಿಗೆ ಬಂದ ವ್ಯಕ್ತಿ ಕಾಯಾ, ವಾಚಾ, ಮನಸಾ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು. ಆದರೆ  ಇಂಥವರು ಎಷ್ಟು ಜನರಿದ್ದಾರೆ ಎಂದು  ಹುಡುಕುವುದು ಸ್ವಲ್ಪ ಕಷ್ಟವಾಗಬಹುದು. ಹಾಗಂತ ಇಡೀ ಶಿಕ್ಷಕ ಸಮುದಾಯವನ್ನು ದೂಷಿಸಲೂ  ಆಗದು. ಅನೇಕರು ಎಲೆ ಮರೆಯ ಕಾಯಿಯಂತೆ ಯಾವುದೇ ಫಲಾಪೇಕ್ಷೆಯಿಲ್ಲದೆ ದುಡಿಯುವರು, ಆದರೆ ಅಂಥವರ ಸಂಖ್ಯೆ ಕಡಿಮೆಯೇ.  ಆಸಕ್ತಿ ಮತ್ತು  ಉತ್ಸಾಹದಿಂದ ಕೆಲಸ ನಿರ್ವಹಿಸುವ ಶಿಕ್ಷಕರ ಅಗತ್ಯತೆ ಈ ಸಮಾಜಕ್ಕೆ ಅವಶ್ಯವಾಗಿದೆ. ಅಂತಹವರು ಮುಂದೆ ಬಂದು ಶಿಕ್ಷಣ ಕ್ಷೇತ್ರಕ್ಕೆ ಅಂಟಿಕೊಂಡಿರುವ ಜಾಢ್ಯವನ್ನು ಅಳಿಸಿ ನವ ಸಮಾಜ ನಿರ್ಮಾಣದ ಕಡೆ ಹೆಜ್ಜೆ ಹಾಕಿದಲ್ಲಿ ಇಂದು ಡಾ. ಎಸ್. ರಾಧಾಕೃಷ್ಣನ್ ರವರ ಜನ್ಮ ದಿನದ ಹಿನ್ನೆಲೆಯಲ್ಲಿ  ಆಚರಿಸುತ್ತಿರುವ ಶಿಕ್ಷಕರ ದಿನಾಚರಣೆಗೆ ಒಂದರ್ಥ ಬರುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಶಿಕ್ಷಕರು ಜ್ಞಾನದ ಬೆಳಕನ್ನು ದಶ ದಿಕ್ಕುಗಳಲ್ಲೂ  ಪಸರಿಸುವ ಕಾರ್ಯದಲ್ಲಿ  ನಿರತರಾಗಲಿ, ತತ್ಫಲವಾಗಿ ರಾಷ್ಟ್ರ ಅಭಿವೃದ್ಧಿಯತ್ತ ಸಾಗಲಿ ಎಂಬುದೇ ಎಲ್ಲರ ಆಶಯ.


ಡಾ. ಶಿವಯ್ಯ ಎಸ್.
ವಿಶ್ರಾಂತ ಪ್ರಾಧ್ಯಾಪಕರು, ದಾವಣಗೆರೆ
s.shivaiah26@gmail.com