ಶಿವ ಸಹಕಾರಿ ಬ್ಯಾಂಕಿಗೆ 3.77 ಕೋಟಿ ರೂ. ಲಾಭ

ಶಿವ ಸಹಕಾರಿ ಬ್ಯಾಂಕಿಗೆ  3.77 ಕೋಟಿ ರೂ. ಲಾಭ

ದಾವಣಗೆರೆ, ಸೆ.19- ಸಹಕಾರಿ ಬ್ಯಾಂಕುಗಳಲ್ಲೊಂದಾದ ನಗರದ ಶಿವ ಸಹಕಾರಿ ಬ್ಯಾಂಕ್ 2020-21ನೇ ಸಾಲಿನಲ್ಲಿ 3.77 ಕೋಟಿ ರೂ. ಲಾಭ ಗಳಿಸಿದೆ ಎಂದು ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷ ಎಂ.ಬಿ. ಸಂಗಮೇಶ್ವರ ಗೌಡರು ತಿಳಿಸಿದರು. 

ನಗರದ ಹಳೇ ಹೆರಿಗೆ ಆಸ್ಪತ್ರೆ ಎದುರಿನಲ್ಲಿರುವ ಬ್ಯಾಂಕಿನ ಆಡಳಿತ ಕಚೇರಿಯ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮುಖಾಂತರ ಇಂದು ನಡೆದ ಶಿವ ಸಹಕಾರಿ ಬ್ಯಾಂಕ್‌ನ 47ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ಅವರು ವಹಿಸಿ ಮಾತನಾಡಿದರು. 

25 ಕೋಟಿ 13 ಲಕ್ಷದ 27 ಸಾವಿರದಷ್ಟು ಆದಾಯ ಹೊಂದಿದ್ದು, ಇದರಲ್ಲಿ 3.77 ಕೋಟಿ ರೂ. ಲಾಭ ಗಳಿಸಿದೆ. ಅದರಲ್ಲಿ 1.12 ಲಕ್ಷ ಆದಾಯ ತೆರಿಗೆ ವಜಾ ಜಾತ 2.65 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಹೇಳಿದರು.

ಬ್ಯಾಂಕಿನ 2020-21ನೇ ಸಾಲಿನಲ್ಲಿ 6,23,2,700 ರೂ. ಷೇರು ಬಂಡವಾಳ ಹೊಂದಿದೆ. ಬ್ಯಾಂಕಿನ ಆರ್ಥಿಕ ಸ್ಥಿರತೆಗೆ ಕಾರಣವಾಗುವ ಆಪದ್ಧನ ಮತ್ತಿತರೆ ನಿಧಿಗಳ ಮೊತ್ತವು ಕಳೆದ ಸಾಲಿಗಿಂತ 3,37,45,352 ರೂ. ಅಧಿಕಗೊಂಡು ಪ್ರಸ್ತುತ 25 ಕೋಟಿ  9 ಲಕ್ಷದ 97 ಸಾವಿರದ 934 ರೂ. ಆಗಿದೆ ಎಂದು ವಿವರಿಸಿದರು. 

ಈ ಸಾಲಿನಲ್ಲಿಯೂ `ಎ’ ಶ್ರೇಣಿಯಲ್ಲಿರುವ ಬ್ಯಾಂಕ್ ಮುಂದಿನ ಆರ್ಥಿಕ ವರ್ಷಕ್ಕೂ ನಿರ್ದಿಷ್ಟ ಗುರಿಗಳನ್ನು ಹೊಂದಿದೆ. ಹೆಚ್ಚಿನ ಪ್ರಮಾಣದಲ್ಲಿ ಠೇವಣಿ ಸಂಗ್ರಹಣೆ, ಸಾಲ ಮುಂಗಡಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುವುದು. ಹಾಗೆಯೇ ಸುಸ್ತಿ ಸಾಲ ವಸೂಲಾತಿ ಹೆಚ್ಚಳ, ಅನುತ್ಪಾದಕ ಆಸ್ತಿ ಪ್ರಮಾಣದ ಇಳಿಕೆ, ಅಗತ್ಯವಿದ್ದಲ್ಲಿ ಬ್ಯಾಂಕಿನ ಶಾಖೆಗಳ ಆರಂಭ ಇವು ಮುಂದಿನ ವರ್ಷದ ಗುರಿಗಳಾಗಿವೆ. ಗ್ರಾಹಕರಿಗೆ ಎಟಿಎಂ ಕಾರ್ಡ್ ನೀಡುವ ವ್ಯವಸ್ಥೆ ಜಾರಿಯಲ್ಲಿದೆ ಎಂದರು. 

ಬ್ಯಾಂಕಿನ ಸದಸ್ಯರ ಮತ್ತು ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕಿನ ವ್ಯವಹಾರವನ್ನು ಡಿಜಿಟಲ್‌ಗೊಳಿಸುವ ಉದ್ದೇಶದಿಂದ ಎಟಿಎಂ ಕಾರ್ಡ್, ಐಎಂಪಿಎಸ್ ಮತ್ತು ಈ-ಕಾಮರ್ಸ್ ಅನುಷ್ಠಾನಗೊಳಿಸುವುದರ ಮುಖಾಂತರ ಡಿಜಿಟಲ್ ವ್ಯವಹಾರದ ಕಾರ್ಯ ಚಾಲ್ತಿಯಲ್ಲಿದೆ. ಶೀಘ್ರದಲ್ಲಿ ಮೊಬೈಲ್ ಆಪ್ ಅನ್ನು ಅಳಡಿಸಿಕೊಳ್ಳಲು ಸಾಫ್ಟ್‌ವೇರ್‌ ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದರು. 

ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎ.ಆರ್. ಸಿದ್ದರಾಮಪ್ಪ, ಶಾಖಾ ವ್ಯವಸ್ಥಾಪಕ ಜಿ.ಎಂ. ನಾಗಪ್ಪ ಮಹಾಸಭೆಯ ನಡಾವಳಿ ವಾಚಿಸಿದರು. 

ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷ ಐಗೂರು ಸಿ. ಚಂದ್ರಶೇಖರ್, ನಿರ್ದೇಶಕ ಜೆ.ಎಸ್. ಸಿದ್ದಪ್ಪ, ಬಿ.ಎಸ್. ಪ್ರಕಾಶ್‌ ಬಸ್ತಿಹಳ್ಳಿ, ಗೌಡ್ರ ಜಿ. ಸಿದ್ದಪ್ಪ, ಜಿ.ಪಿ. ವಾಗೀಶ್ ಬಾಬು, ಜೆ.ಎಸ್. ಸಿದ್ದಪ್ಪ, ಎನ್. ವಸಂತ, ಡಿ. ನಿರ್ಮಲ, ವೃತ್ತಿಪರ ನಿರ್ದೇಶಕರಾದ ಈ. ಚಂದ್ರಣ್ಣ, ಎಸ್. ರಾಜಶೇಖರ್ ಮತ್ತು ವ್ಯವಸ್ಥಾಪನಾ ಮಂಡಳಿಯ ಸದಸ್ಯರುಗಳಾದ ಬಿ.ಎಸ್. ಪ್ರಕಾಶ್, ಎಂ.ಜಿ. ರಾಜಶೇಖರಯ್ಯ, ಎನ್.ಟಿ. ಮಂಜುನಾಥ, ಬಿ. ಕುಬೇರಪ್ಪ ಸೇರಿದಂತೆ ಇತರರು ಇದ್ದರು. ಸುಮಾರು 2 ಸಾವಿರ ಜನ ಬ್ಯಾಂಕಿನ ಸದಸ್ಯರುಗಳು ವಿಡಿಯೋ ಕಾನ್ಸರೆನ್ಸ್ ಸಭೆಯಲ್ಲಿ ಭಾಗವಹಿಸಿದ್ದರು. 

ಕಿರಿಯ ಸಹಾಯಕರಾದ ಎ.ಜೆ. ಕವಿತ ಮತ್ತು ಬಿ.ಹೆಚ್. ರೋಷಿನಿ ಪ್ರಾರ್ಥಿಸಿದರು. ನಿರ್ದೇಶಕ ಕೆ.ಪಿ. ಪ್ರದೀಪ್ ಸ್ವಾಗತಿಸಿದರು. ನಿರ್ದೇಶಕ ಡಿ.ಹೆಚ್. ಪ್ರಭು ನಿರೂಪಿಸಿದರು. ನಿರ್ದೇಶಕ ದೊಗ್ಗಳ್ಳಿ ಎಂ. ಬಸವರಾಜ್ ವಂದಿಸಿದರು.