ರಾಜ್ಯದಲ್ಲಿ ಒಂದೇ ಒಂದು ಕನ್ನಡ ಶಾಲೆಯನ್ನು ಮುಚ್ಚದಂತೆ ನೋಡಿಕೊಳ್ಳುವೆ

ರಾಜ್ಯದಲ್ಲಿ ಒಂದೇ ಒಂದು ಕನ್ನಡ ಶಾಲೆಯನ್ನು ಮುಚ್ಚದಂತೆ ನೋಡಿಕೊಳ್ಳುವೆ

ಹರಿಹರದ ಸಭೆಯಲ್ಲಿ ರಾಜ್ಯ ಕಸಾಪ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ನಾಡೋಜ ಡಾ. ಮಹೇಶ್ ಜೋಶಿ

ಹರಿಹರ, ಸೆ.19- ನಾನು ಎಡ, ಬಲ ಪಂಥೀಯವನಲ್ಲ, ನಾನು ಸಂಪೂರ್ಣವಾಗಿ ಕನ್ನಡ ಪಂಥದವನಾಗಿ ಕೆಲಸ ಮಾಡುತ್ತೇನೆಂದು ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿ ನಾಡೋಜ ಡಾ. ಮಹೇಶ್ ಜೋಶಿ ಸ್ಪಷ್ಟಪಡಿಸಿದರು.

 ನಗರದ ರಚನಾ ಕ್ರೀಡಾ ಭವನದಲ್ಲಿ ಇಂದು ಕಸಾಪ ಆಜೀವ ಸದಸ್ಯರನ್ನು ಭೇಟಿ ಮಾಡಿದ ಅವರು, ಮತ ನೀಡುವಂತೆ ಮನವಿ ಮಾಡಿ ಮಾತನಾಡಿದರು.

ನನಗೆ ಪಕ್ಷ, ಜಾತಿ, ಧರ್ಮ ಬೇಕಾಗಿಲ್ಲ. ನನಗೆ ನನ್ನ ನಾಡು, ನುಡಿಯೇ ಮುಖ್ಯ. ಈ ನಿಟ್ಟಿನಲ್ಲಿ ಹತ್ತು ಹಲವು ಯೋಜನೆಗಳನ್ನು ಹಾಕಿಕೊಂಡು ಕಸಾಪವನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡುವ ಗುರಿ ಹೊಂದಿದ್ದೇನೆ. ದೂರದರ್ಶನವನ್ನು ಜನರ ಹತ್ತಿರಗೊಳಿಸಿದ ರೀತಿಯಲ್ಲೇ ಕಸಾಪವನ್ನು ಪಾರದರ್ಶಕವಾಗಿ ಮತ್ತು ಚುರುಕಾಗಿಸುತ್ತೇನೆ.

ರಾಜ್ಯದಲ್ಲಿ ಒಂದೇ ಒಂದು ಕನ್ನಡ ಶಾಲೆಯನ್ನು ಮುಚ್ಚದಂತೆ ನೋಡಿಕೊಳ್ಳುವೆ. ಸರ್ಕಾರದ ಜೊತೆ ಸಂಘರ್ಷಕ್ಕೆ ಇಳಿಯದೇ, ಸೌಹಾರ್ದ ಸಂಬಂಧ ಇಟ್ಟುಕೊಂಡು ಕನ್ನಡ ನಾಡಿನ ಜನರ ಭಾವನೆಗಳಿಗೆ ದಕ್ಕೆಯಾಗದಂತೆ ನೋಡಿಕೊಳ್ಳುವ ಸಂಕಲ್ಪ ನನ್ನದು ಎಂದು ಜೋಶಿ ಹೇಳಿದರು.

ಹಳ್ಳಿ ಹಳ್ಳಿಗಳಲ್ಲಿ ಕಸಾಪ ಅಭಿಯಾನ ಮಾಡಿ ಸುಮಾರು 10 ಲಕ್ಷ ಸದಸ್ಯತ್ವ ಮಾಡುವ ಗುರಿ ಹೊಂದಿದ್ದೇನೆ. ಸದಸ್ಯತ್ವ ಶುಲ್ಕವನ್ನು ಈ ಹಿಂದೆ ಇದ್ದ ಹಾಗೆ 250 ರೂ.ಗಳಿಗೆ ಇಳಿಕೆ, ಸೈನಿಕ ಸೇವೆ ಸಲ್ಲಿಸುವವರಿಗೆ ಉಚಿತ ಸದಸ್ಯತ್ವ ಮತ್ತು ಮೊಬೈಲ್ ಆಪ್ ಮುಖಾಂತರ ಸದಸ್ಯತ್ವ ಪಡೆಯುವ ವ್ಯವಸ್ಥೆಯನ್ನು ಜಾರಿಗೊಳಿಸುವ ಯೋಜನೆ ರೂಪಿಸಿದ್ದೇನೆಂದರು.

3ನೇ ವಿಶ್ವ ಕನ್ನಡ ಸಮ್ಮೇಳನವನ್ನು ದಾವಣಗೆರೆಯಲ್ಲೇ ಆಚರಿಸಲು ಮೊದಲ ಆದ್ಯತೆ ನೀಡುತ್ತೇನೆ. ಅಲ್ಲದೇ ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಒತ್ತು ನೀಡುತ್ತೇನೆ. ಕಸಾಪದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಮತ್ತು ಒಬ್ಬರಿಗೆ ಒಂದೇ ಬಾರಿ ಸೇವೆ ಮಾಡಲು ಮಾತ್ರ ಅವಕಾಶ ಮಾಡುವ ಕಾನೂನು ರೂಪಿಸುತ್ತೇನೆಂದು ಮಹೇಶ್ ಜೋಶಿ ಭರವಸೆ ನೀಡಿದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಸ್.ಹೆಚ್.ಹೂಗಾರ್ ಮಾತನಾಡಿ, ಕನ್ನಡ ತಾಯಿ ಬಂಜೆ ಅಲ್ಲ. 5 ವರ್ಷದ ಅವಧಿ ಸರಿ ಅಲ್ಲ, 3 ವರ್ಷದ ಅವಧಿ ಸೂಕ್ತ ಮತ್ತು ಒಬ್ಬರಿಗೆ ಒಂದೇ ಬಾರಿ ಅವಕಾಶ ಆಗಬೇಕೆಂದು ಆಗ್ರಹಿಸಿದರು.

ಸಾಹಿತಿ ಕಲೀಂ ಬಾಷಾ ಮಾತನಾಡಿ, ಕಸಾಪದಲ್ಲಿ ಅಲ್ಪ ಸಂಖ್ಯಾತರಿಗೂ ಆದ್ಯತೆ ನೀಡಬೇಕು. ಸರ್ಕಾರಿ ನೌಕರರು ಕಡ್ಡಾಯವಾಗಿ ಸದಸ್ಯತ್ವ  ಪಡೆಯುವಂತಾಗ ಬೇಕೆಂದು ಕಲೀಂ ಭಾಷಾ ಒತ್ತಾಯಿಸಿದರು.

ನಿವೃತ್ತ ಹಿಂದಿ ಶಿಕ್ಷಕ ರಾಮಕೃಷ್ಣಮೂರ್ತಿ, ಹೋರಾಟಗಾರ ಹೆಚ್.ಕೆ.ಕೊಟ್ರಪ್ಪ, ಪ್ರೊ. ಸಿ.ವಿ.ಪಾಟೀಲ್, ಪ್ರೊ. ಭಿಕ್ಷಾವರ್ತಿಮಠ, ಚುಟುಕು ಸಾಹಿತಿ ಕಮಲಾಪುರದ ಕೊಟ್ರೇಶ್, ಭಾನುವಳ್ಳಿಯ ಮಲ್ಲಿಕಾರ್ಜುನ್ ಮಾತನಾಡಿದರು.

ಹರಿಹರ ನಗರಸಭೆ ಮಾಜಿ ಅಧ್ಯಕ್ಷ ಬಿ.ರೇವಣಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು.

ನಿವೃತ್ತ ಶಿಕ್ಷಕರಾದ ಟಿ.ಪುಟ್ಟಪ್ಪ, ಎ.ಡಿ.ಕೊಟ್ರಬಸಪ್ಪ, ಶಿಕ್ಷಕರಾದ ರಿಯಾಜ್, ರೇವಣ ನಾಯ್ಕ, ರುದ್ರಾಕ್ಷಿ ಬಾಯಿ, ಗೀತಾ ಕದರಮಂಡಲಗಿ, ಆಶಾ, ನೇತ್ರಾ, ಲಕ್ಷ್ಮಿ, ಸೀತಾ, ನಳಿನ, ಜಗಳೂರಿನ ಸುಭಾಷ್‌ ಚಂದ್ರ, ಕೆ.ಎಸ್.ಸ್ವಾಮಿ, ಸಿ.ಎನ್.ಹುಲಿ ಗೇಶ್, ಪತ್ರಕರ್ತರಾದ ಜಿಗಳಿ ಪ್ರಕಾಶ್, ಕುಂಬಳೂರು ಸದಾನಂದ, ಚಿದಾನಂದ ಕಂಚಿಕೇರಿ ಮತ್ತಿತರರು ಸಭೆಯಲ್ಲಿದ್ದರು.