ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಶಾಸಕ ಎಸ್. ರಾಮಪ್ಪ ಹಿತ ನುಡಿ
ಮಲೇಬೆನ್ನೂರು, ಸೆ.19- ಅಲ್ಪಸಂಖ್ಯಾತರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಲು ಒತ್ತು ನೀಡಬೇಕೆಂದು ಶಾಸಕ ಎಸ್. ರಾಮಪ್ಪ ಕರೆ ನೀಡಿದರು.
ಪಟ್ಟಣದ ಶಾದಿಮಹಲ್ನಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಮತ್ತು ಜುಮ್ಮಾ ಮಸೀದಿ ಸುನ್ನಿ ಹಾಗೂ ಹೆಚ್ಚುವರಿ ಆಸ್ತಿಗಳು (ಮಲೇಬೆನ್ನೂರು) ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪಟ್ಟಣದ ಎಲ್ಲಾ ಸರ್ಕಾರಿ ಉರ್ದು ಶಾಲೆಗಳ 1 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ, ಪೆನ್ನು ವಿತರಣೆ ಹಾಗೂ ಕಿಡ್ನಿ ವೈಫಲ್ಯದಿಂದ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಧನ ಸಹಾಯ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿಕ್ಷಣದಿಂದ ಮಾತ್ರ ಪ್ರಗತಿ ಸಾಧ್ಯ ಎಂಬ ವಾತಾವರಣ ನಿರ್ಮಾಣವಾಗಿದ್ದು, ಮುಸ್ಲಿಂ ಬಾಂಧವರೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಶ್ರಮವಹಿಸಬೇಕು. ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡುತ್ತಿದ್ದು, ಪ್ರತಿಯೊಬ್ಬರೂ ಸರ್ಕಾರಿ ಶಾಲೆಗಳಿಗೆ ಹೋಗುವ ಮೂಲಕ ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ರಾಮಪ್ಪ ಕಿವಿ ಮಾತು ಹೇಳಿದರು.
ವಿದ್ಯಾರ್ಥಿಗಳು ಚೆನ್ನಾಗಿ ಒದಿ ಉನ್ನತ ಸ್ಥಾನಕ್ಕೆ ಹೋದರೆ ನಿಮ್ಮ ಪೋಷಕರು ಹಾಗೂ ಶಿಕ್ಷಕರ, ಸರ್ಕಾರದ ಶ್ರಮ ಸಾರ್ಥಕವಾಗುತ್ತದೆ ಎಂದು ಬಿಇಒ ಸಿದ್ದಪ್ಪ ತಿಳಿಸಿದರು.
ಜಿಲ್ಲಾ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಸಿರಾಜ್, ಎಪಿಎಂಸಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಬೀದ್ ಅಲಿ, ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಸಮಾಜ ಸೇವಕ ನಂದಿಗಾವಿ ಶ್ರೀನಿವಾಸ್, ಪಿಎಸಿಎಸ್ ಅಧ್ಯಕ್ಷ ಪಿ.ಆರ್. ಕುಮಾರ್, ಮುಖಂಡರಾದ ಸೈಯದ್ ಜಾಕೀರ್, ಮೊಹಮ್ಮದ್ ಶೇರ್ ಅಲಿ, ಜಮೀರ್ ಅಹಮದ್ , ಸಿ. ಅಬ್ದುಲ್ ಹಮೀದ್, ರುಸ್ತಂ, ಕೆ.ಪಿ. ಗಂಗಾಧರ್, ಎ. ಆರೀಫ್ ಅಲಿ, ಯೂಸುಫ್, ದಾದಾವಲಿ, ಪುರಸಭೆ ಮುಖ್ಯಾಧಿಕಾರಿ ಡೊಂಬರ್, ಕ್ಷೇತ್ರ ಸಮನ್ವಯಾಧಿಕಾರಿ ಜಗದೀಶ್ ಉಜ್ಜಮ್ಮನವರ್, ಮುಖ್ಯ ಶಿಕ್ಷಕರಾದ ಡಿ.ಹೆಚ್. ರಾಜೇಶ್ವರಿ, ಅಮೀನ್ ಉಲ್ಲಾ, ಮೊಹಮ್ಮದ್ ಖಲೀಲ್ ಉಲ್ಲಾ, ರೇವಣಸಿದ್ದಪ್ಪ ಅಂಗಡಿ, ಮೀರ್ ಆಜಾಂ ಇನ್ನಿತರರು ಹಾಜರಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸರ್ಕಾರಿ ಉರ್ದು ಪ್ರೌಢಶಾಲೆಗಳ ಶಿಕ್ಷಕಿ ಫರೀದಾ ಬಾನು ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು. 9 ಶಾಲೆಯ 788 ವಿದ್ಯಾರ್ಥಿಗಳಿಗೆ ತಲಾ 4 ನೋಟ್ಬುಕ್, 3 ಪೆನ್ನುಗಳನ್ನು ನೀಡಲಾಯಿತು. ಇಬ್ಬರು ರೋಗಿಗಳಿಗೆ ತಲಾ 15 ಸಾವಿರ ರೂ. ಧನ ಸಹಾಯ ಮಾಡಲಾಯಿತು.
ಜಿಲ್ಲಾ ವಕ್ಫ್ ಅಧಿಕಾರಿ ಸೈಯದ್ ಮುಅಜಮ್ ಅಧ್ಯಕ್ಷತೆ ವಹಿಸಿದ್ದರು. ಜುಮ್ಮಾ ಮಸೀದಿಯ ಮುಖ್ಯ ಗುರುಗಳಾದ ಅಬ್ದುಲ್ ರೆಹಮಾನ್ ಸಾನ್ನಿಧ್ಯ ವಹಿಸಿದ್ದರು. ಜುಮ್ಮಾ ಮಸೀದಿ ಆಡಳಿತಾಧಿಕಾರಿ ಅಬ್ದುಲ್ ಲತೀಫ್ ಸ್ವಾಗತಿಸಿದರು. ಶಿಕ್ಷಕ ಮೊಹಮ್ಮದ್ ಷರೀಫ್ ನಿರೂಪಿಸಿದರು. ಮುಖ್ಯಶಿಕ್ಷಕ ಮೊಹಮ್ಮದ್ ರಫೀ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ದಾದಾಪೀರ್ ವಂದಿಸಿದರು.