ಪಂಚಮಸಾಲಿಗೆ 2ಎ ಮೀಸಲಾತಿಗೆ ಒತ್ತಾಯ

ಪಂಚಮಸಾಲಿಗೆ 2ಎ ಮೀಸಲಾತಿಗೆ ಒತ್ತಾಯ

ರಾಣೇಬೆನ್ನೂರು, ಸೆ. 16- ರೈತರು, ಬಡವರೇ ಹೆಚ್ಚಾಗಿರುವ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡುವಂತೆ ಒತ್ತಾಯಿಸಿ, ಇಲ್ಲಿನ ಪಂಚಮಸಾಲಿ ಸಮಾಜದ ಸಂಘಟನೆಗಳು ತಹಶೀಲ್ದಾರರಿಗೆ ಮನವಿ ಅರ್ಪಿಸಿ, ಸರ್ಕಾರಕ್ಕೆ ಒತ್ತಾಯಿಸಿದರು. 

ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಹರಿಹರದ ಶ್ರೀ ವಚನಾನಂದ ಸ್ವಾಮೀಜಿ ಒಟ್ಟಾಗಿ ರಾಜ್ಯಾದ್ಯಂತ ಪಾದಯಾತ್ರೆ ಮಾಡಿದ್ದು, ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಅವರು ಸದನದ ಒಳಗೆ ಒತ್ತಡ ತಂದಿದ್ದರ ಫಲವಾಗಿ ಸರ್ಕಾರ ಹಾಗೂ ಅಂದಿನ ಮುಖ್ಯಮಂತ್ರಿಗಳು ಕಾಲಾವಕಾಶ ಕೇಳಿದ್ದು ಅವಧಿ ನಿನ್ನೆಗೆ ಮುಗಿದ ಬಗ್ಗೆ ಮನವಿಯಲ್ಲಿ ನೆನಪಿಸಲಾಗಿದೆ. ಈಗಿನ ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಆದಷ್ಟು ಶೀಘ್ರದಲ್ಲಿ ಕ್ರಮ ಜರುಗಿಸಿ ಸಮಾಜಕ್ಕೆ ಒಳಿತು ಮಾಡುವಂತೆ ತಪ್ಪಿದಲ್ಲಿ ಅಕ್ಟೋಬರ್ 1ರಿಂದ ಬೆಂಗಳೂರಿನಲ್ಲಿ ಧರಣಿ ನಡೆಸುವುದಾಗಿ ಮನವಿಯಲ್ಲಿ ಹೇಳಲಾಗಿದೆ.

ತಾಲ್ಲೂಕು ಪಂಚಮಸಾಲಿ ಘಟಕ, ಯುವ ಹಾಗೂ ಮಹಿಳಾ ಘಟಕಗಳ ಸಂಯುಕ್ತವಾಗಿ ಮನವಿ ಅರ್ಪಿಸಿದ ಕಾರ್ಯಕ್ರಮದಲ್ಲಿ ಮುಖಂಡರಾದ ಕೆ. ಶಿವಲಿಂಗಪ್ಪ, ಎಸ್.ಎಸ್. ರಾಮಲಿಂಗಣ್ಣನವರ, ಎ.ಬಿ. ಪಾಟೀಲ, ಪುಷ್ಪಾ ಬದಾಮಿ, ಕಸ್ತೂರಿ ಚಿಕ್ಕಬಿದರಿ, ಉಮೇಶ ಪಟ್ಟಣಶೆಟ್ಟಿ, ಅಮೋಘ ಬದಾಮಿ, ಶಿವಪ್ಪ ಗುರಿಕಾರ, ಕೊಟ್ರೇಶ ಎಮ್ಮಿ, ಪ್ರಭಾವತಿ ತಿಳವಳ್ಳಿ, ಸಂತೋಷ, ಬಸವರಾಜ, ಸಿದ್ದು ಚಿಕ್ಕಬಿದರಿ ಮತ್ತಿತರರಿದ್ದರು.

ಚನ್ನಮ್ಮ ಪುತ್ಥಳಿ : ನಗರದ ಮಧ್ಯವರ್ತಿ ಜನನಿಬಿಡ ಸ್ಥಳ ಪೋಸ್ಟ್‌ ಸರ್ಕಲ್ ನಲ್ಲಿ ಸಮಾಜದ ಕಣ್ಮಣಿ ವೀರ ರಾಣಿ ಕಿತ್ತೂರ ಚೆನ್ನಮ್ಮ ಅವರ ಪುತ್ಥಳಿ  ಸ್ಥಾಪಿಸಲು ಪಂಚಮಸಾಲಿ ಸಮಾಜಕ್ಕೆ ಅವಕಾಶ ಕಲ್ಪಿಸುವಂತೆ ನಗರಾಧ್ಯಕ್ಷರಾದ ರೂಪಾ ಚಿನ್ನಕಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.