ಗುಂಡಿಸ್ವಾಮಿ ದೇವಸ್ಥಾನದಲ್ಲಿ ಮೂರ್ತಿ ಕಿತ್ತಿಟ್ಟ ಕಿಡಿಗೇಡಿಗಳು

ಹರಿಹರ, ಆ.26- ನಗರದ ಕೋಟೆ ಬಡಾವಣೆಯ ಓಂಕಾರ ಮಠದ ಪಕ್ಕದಲ್ಲಿ ಇರುವ ಗುಂಡಿಸ್ವಾಮಿ ದೇವಸ್ಥಾನದಲ್ಲಿ ಶಿವಲಿಂಗ ಮೂರ್ತಿಯನ್ನು ಕಿಡಿಗೇಡಿಗಳು ಮೂಲ ಸ್ಥಳದಿಂದ ತೆಗೆದು ಪಕ್ಕದಲ್ಲಿ ಇರಿಸಿರುವುದರಿಂದ ಸಾಕಷ್ಟು ಅನುಮಾನಗಳಿಗೆ ದಾರಿಯಾಗಿದೆ.

ಸ್ಥಳೀಯರಾದ ಅರ್ಚಕ ಶ್ರೀಧರ್ ಹೇಳುವ ಪ್ರಕಾರ ಈ ದೇವಸ್ಥಾನ  ಪುರಾತನ ಕಾಲದ್ದಾಗಿದ್ದು, ನಿಧಿ ಇರಬಹುದು ಎಂದು ಯಾರೋ ಕಿಡಿಗೇಡಿಗಳು ಶಿವಲಿಂಗವನ್ನು ತೆಗೆಯಲು ಪ್ರಯತ್ನ ಮಾಡಿರಬಹುದು. ಆ ಸಮಯದಲ್ಲಿ ಯಾವುದೋ ವ್ಯಕ್ತಿಗಳನ್ನು ನೋಡಿ ಸ್ಥಳದಿಂದ ಕಾಲು ಕಿತ್ತಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. 

ಘಟನಾ ಸ್ಥಳಕ್ಕೆ ನಗರ ಠಾಣೆಯ ಪಿಎಸ್ಐ ಸುನೀಲ್ ಬಸವರಾಜ್ ಭೇಟಿ ನೀಡಿ ಈ ಕೃತ್ಯವನ್ನು ಮದ್ಯಪಾನ ಮಾಡಿರುವ ವ್ಯಕ್ತಿಗಳು ಮಾಡಿರಬಹುದು ಎಂದು ಅನುಮಾನಿಸಲಾಗಿದೆ. ಹೆಚ್ಚಿನ ವಿಚಾರಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಾದ ದೇವರಾಜ್, ಮಂಜುನಾಥ್, ನಾಗರಾಜ್, ಸತೀಶ್ ಕುಮಾರ್ ಹಾಗು ಇತರರು ಹಾಜರಿದ್ದರು.