ಗಣೇಶೋತ್ಸವಕ್ಕೆ ಅನುಮತಿ ನೀಡದಿದ್ದರೆ ಧರಣಿ

ದಾವಣಗೆರೆ, ಆ. 26- ಇದೇ ದಿನಾಂಕ 29ರೊಳಗೆ ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಅನುಮತಿ ನೀಡದಿದ್ದರೆ 30ರಂದು ಬಿಜೆಪಿ ಶಾಸಕರ ಮನೆ ಹಾಗೂ ಕಚೇರಿ ಬಳಿ ಧರಣಿ ನಡೆಸಲಾಗುವುದು ಎಂದು ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕೊರೊನಾ ಆತಂಕದ ನಡುವೆಯೂ ಕೇಂದ್ರ ಸಚಿವರು ಜನಾಶೀರ್ವಾದ ಯಾತ್ರೆ ಮಾಡಿದ್ದಾರೆ. ಚಿತ್ರಮಂದಿರ, ಬಾರ್, ಮಾಲ್‌ಗಳು, ಶಾಲೆಗಳಿಗೆ ಅನುಮತಿ ನೀಡಿರುವ ಸರ್ಕಾರ ಕೋವಿಡ್ ನೆಪ ಹೇಳಿ ಸಾರ್ವಜನಿತ ಗಣೇಶೋತ್ಸವಕ್ಕೆ ನಿಷೇಧ ಹೇರಿರುವುದು ಸರಿಯಲ್ಲ ಎಂದು ಹೇಳಿದರು.

ಧಾರ್ಮಿಕ ಆಚರಣೆಗೆ ಚ್ಯುತಿ ಬಾರದಂತೆ, ಕೋವಿಡ್ ನಿಯಮ ಉಲ್ಲಂಘನೆಯಾಗದಂತೆ ಈಗಿರುವ ನಿರ್ಬಂಧ ತೆಗೆದು ಹಬ್ಬಕ್ಕೆ ಅನುಕೂಲವಾಗುವಂತೆ ಹೊಸ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದ ಅವರು, ಇಲ್ಲದಿದ್ದರೆ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಬಿಜೆಪಿ ಶಾಸಕರು ಹಾಗೂ ಸಚಿವರುಗಳ ಮನೆ ಹಾಗೂ ಕಚೇರಿ ಬಳಿ ಧರಣಿ ನಡೆಸಲಾಗುವುದು ಎಂದರು.

ರಾಜಕೀಯ ನಾಯಕರ ಕೈಗೊಂಬೆಗಳಾಗಿರುವ ಸ್ವಾಮೀಜಿಗಳು, ಮಠಾಧೀಶರು ಧಾರ್ಮಿಕ ಆಚರಣೆಗೆ ಅಡಚಣೆಯಾದಾಗ ಏಕೆ ಮಾತನಾಡುತ್ತಿಲ್ಲ ? ಹಿಂದೂ ಸಂಘಟನೆಗಳು ಮಾತ್ರ ಹಿಂದುತ್ವ ಕಾಪಾಡುವ ಕೆಲಸ ಮಾಡಬೇಕೇ? ಎಂದು ಪ್ರಶ್ನಿಸಿದ ಹರೀಶ್, ಗಣೇಶೋತ್ಸವಕ್ಕೆ ನಿರ್ಬಂಧ ವಿಧಿಸಿರುವ ಬಗ್ಗೆ ಎಲ್ಲಾ ಸ್ವಾಮೀಜಿಗಳು ದನಿ ಎತ್ತಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮ ಸೇನಾ ರಾಜ್ಯ ಸಂಪರ್ಕ ಪ್ರಮುಖ್ ಪರಶುರಾಮ ನಡುಮನಿ, ಜಿಲ್ಲಾಧ್ಯಕ್ಷ ಮಣಿ ಸರ್ಕಾರ್, ಪ್ರಧಾನ ಕಾರ್ಯದರ್ಶಿ ಸಾಗರ್, ವಿನೋದ್ ರಾಜ್ ಡಿ.ಬಿ., ರಾಹುಲ್, ರಾಜು, ಅರುಣ್ ಕುಮಾರ್  ಇತರರು ಉಪಸ್ಥಿತರಿದ್ದರು.