ಶರಣರ ವಚನಗಳನ್ನು ಮಕ್ಕಳಿಗೆ ಕಲಿಸಬೇಕು

ಶರಣರ ವಚನಗಳನ್ನು ಮಕ್ಕಳಿಗೆ ಕಲಿಸಬೇಕು

ಹರಪನಹಳ್ಳಿ, ಆ.24- ನಿಜ ಶರಣ ಅಂಬಿಗರ ಚೌಡಯ್ಯನವರ ವಚನಗಳನ್ನು ಮಕ್ಕಳಿಗೆ ಕಲಿಸಿ ಎಂದು  ಹಾವೇರಿ ಜಿಲ್ಲೆ  ನರಸೀಪುರದ ಅಂಬಿಗರ ಚೌಡಯ್ಯನವರ ಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಸುಣಗಾರಗೇರಿಯ ಗಂಗಾಂಭಿಕಾ ದೇವಸ್ಥಾನದಲ್ಲಿ ಕಳಸಾರೋಹಣ ಕಾರ್ಯಕ್ರಮ ನೆರವೇರಿಸಿ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

12ನೇ ಶತಮಾನದಲ್ಲಿ ಗಟ್ಟಿಯಾಗಿ ಸತ್ಯವನ್ನು ಹೇಳಿದವರು ಅಂಬಿಗರ ಚೌಡಯ್ಯ ನವರು ಎಂದ ಅವರು, ಕಾಯಕಕ್ಕೆ ಪಟ್ಟ ಕಟ್ಟಿದರು, ಕಾಯಕದಿಂದ ಮುಕ್ತಿ ಎಂದು ಹೇಳಿದರು. ಪ್ರತಿಯೊಬ್ಬರೂ ಮೌಢ್ಯಾಚರಣೆ ತೊರೆದು ವೈಚಾರಿಕತೆ ಮೈಗೂಡಿಸಿಕೊಂಡು ಗಂಗಾಮತ ಸಮುದಾಯದ ಪರಂಪರೆ ಎತ್ತಿ ಹಿಡಿಯಿರಿ ಎಂದು ಹೇಳಿದರು.

ಗಂಗಾಮತ ಸಮಾಜದ ವಿಜಯ ನಗರ ಜಿಲ್ಲಾಧ್ಯಕ್ಷ ಅಂಬಾಡಿ ನಾಗರಾಜ ಮಾತನಾಡಿ, ಹರಪನಹಳ್ಳಿ ತಾಲ್ಲೂಕಿನ ಪ್ರತಿ ಹೋಬಳಿಯಲ್ಲೂ ಗಂಗಾಮತ ಸಮಾಜವನ್ನು ಸಂಘಟಿಸಿ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಮಾಜ ಬಾಂಧವರನ್ನು ಸದೃಢರನ್ನಾಗಿ ಮಾಡಬೇಕು ಎಂದರು.

ಪಟ್ಟಣದಲ್ಲಿ ಸಮಾಜದ ಸಮುದಾಯ ಭವನ ನಿರ್ಮಿಸಲು ಯೋಜನೆ ಹಾಕಿ ಕೊಳ್ಳಬೇಕು. ಅದಕ್ಕೆ ನನ್ನ ಸಹಕಾರ ಇರುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ  ಗಂಗಾಂಭಿಕ ದೇವಸ್ಥಾನ ಸೇವಾ ಸಮಿತಿ ವತಿಯಿಂದ  ಶಾಂತಭೀಷ್ಮ ಚೌಡಯ್ಯ ಶ್ರೀಗಳನ್ನು ಸನ್ಮಾನಿಸಲಾಯಿತು.

ಸೇವಾ ಸಮಿತಿ ಅಧ್ಯಕ್ಷ ಪಕ್ಕೀರಪ್ಪ, ಗಂಗಾಮತ ಸಮಾಜದ ತಾಲ್ಲೂಕು  ಅಧ್ಯಕ್ಷ  ಬಿ.ಬಿ. ಹೊಸೂರಪ್ಪ, ಮುಖಂಡರಾದ ಯಮನೂರಪ್ಪ, ಮೇಘರಾಜ, ಜಾಲಗಾರ ಮಂಜುನಾಥ, ಹೇಮಣ್ಣ ಮೋರಗೇರಿ, ಅಣಜಿಗೇರಿ ನಿಂಗಪ್ಪ, ಗಣೇಶಪ್ಪ, ಜಾಲಗಾರ ಕೊಟ್ರೇಶ, ದುರುಗೇಶ, ಚಿಗಟೇರಿ ಸುರೇಶ, ಕಾನಹಳ್ಳಿ ರುದ್ರಪ್ಪ, ಬಸವರಾಜಪ್ಪ, ಟಿಎಚ್ಎಂ ಮಂಜುನಾಥ್‌ ಇನ್ನಿತರರು ಹಾಜರಿದ್ದರು.