ದಾಗಿನಕಟ್ಟೆ ಬಳಿ ಚಿರತೆ ಪ್ರತ್ಯಕ್ಷ

ದಾವಣಗೆರೆ, ಆ.24- ಜಿಲ್ಲೆಯಲ್ಲಿ ಇತ್ತೀಚಿಗೆ ಚಿರತೆಗಳ ಪ್ರತ್ಯಕ್ಷ, ಹೆಜ್ಜೆ ಗುರುತು ಕಂಡು ಬರುತ್ತಿದ್ದು, ಜನರಲ್ಲಿ ಚಿರತೆ ಭೀತಿ ಕಾಡ ತೊಡಗಿದೆ.

ಚನ್ನಗಿರಿ ತಾಲ್ಲೂಕಿನ ದಾಗಿನಕಟ್ಟೆ – ಯಲೋದಹಳ್ಳಿ ಗ್ರಾಮಗಳ ನಡುವಿನಲ್ಲಿ ಊರ ಬಳಿಯೇ ಇರುವ ಪಂಪ್‌ಹೌಸ್ ಹತ್ತಿರ ಇಂದು ರಾತ್ರಿ 8.45ರ ಸುಮಾರಿಗೆ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ, ಭಯ ಹುಟ್ಟಿಸಿದೆ.

ನೀರಗಂಟಿಯೋರ್ವ ಪಂಪ್‌ಹೌಸ್ ಬಳಿ ರಾತ್ರಿ ಪಾಳೆಯದ ಕೆಲಸ ಮಾಡುವ ವೇಳೆ ಚಿರತೆ ಘರ್ಜಿಸಿದ ಸದ್ದು ಕೇಳಿದೆ. ಕತ್ತಲಿನಲ್ಲಿ ಕೇಳಿ ಬಂದ ಈ ಸದ್ದಿಗೆ ಒಂದು ಕ್ಷಣ ತಬ್ಬಿಬ್ಬಾದ ನೀರುಗಂಟಿ ತಕ್ಷಣವೇ ದೂರದಲ್ಲಿ ನಿಂತು ಟಾರ್ಚ್‌ನ ಬೆಳಕು ಬಿಟ್ಟು ಅದು ಚಿರತೆಯೇ ಎಂಬುದನ್ನು ಖಚಿತಪಡಿಸಿಕೊ ಳ್ಳುವ ಸಮಯದಲ್ಲಿ ಚಿರತೆಯು ಗಿಡಗಳ ಮರೆಯಿಂದೀಚೆ ಬಂದು ಪಂಪ್‌ ಹೌಸ್‌ನ ಬಳಿ ಜಿಗಿದು ಸಾಗುವುದು ಪ್ರತ್ಯಕ್ಷವಾಗಿ ಕಣ್ಣಿಗೆ ಕಂಡುಬಂದಿದೆ. 

ತಕ್ಷಣವೇ ಆತ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕಳೆದ 3 ದಿನಗಳ ಹಿಂದಷ್ಟೇ ನೀರು, ಆಹಾರ ಅರಸಿ ಹೊಲ-ಗದ್ದೆ, ತೋಟಗಳ ಬಳಿ ರಾತ್ರಿ ಹೊತ್ತು ಚಿರತೆ ಪ್ರತ್ಯಕ್ಷವಾಗಿರುವ ಬಗ್ಗೆ ಗ್ರಾಮಸ್ಥರಲ್ಲಿ ಆತಂಕ ವ್ಯಕ್ತವಾಗಿದೆ. ಚಿರತೆ ಪ್ರತ್ಯಕ್ಷದಿಂದ ಗ್ರಾಮಗಳಲ್ಲಿ ಹೊಲ, ಗದ್ದೆಗಳಿಗೆ ಬೆಳೆಗಳಿಗೆ ನೀರು ಹಾಯಿಸಲು ರಾತ್ರಿ ಹೊತ್ತು ತೆರಳುವವರ ನಿದ್ದೆಗೆಡಿಸಿದೆ. ಇತ್ತೀಚೆಗೆ ನಗರದ ಕುಂದುವಾಡ ಕೆರೆ ಬಳಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿರುವ ಬಗ್ಗೆ ಫೋಟೋ, ವಿಡಿಯೋ ವೈರಲ್ ಆದ ಘಟನೆ ಸಹ ನಡೆದಿತ್ತು.