ಭಾವನಾತ್ಮಕವಾಗಿ ಜನರ ಗಮನ ಸೆಳೆದು ಅಧಿಕಾರ ನಡೆಸುತ್ತಿರುವ ಬಿಜೆಪಿ

ಭಾವನಾತ್ಮಕವಾಗಿ ಜನರ ಗಮನ ಸೆಳೆದು ಅಧಿಕಾರ ನಡೆಸುತ್ತಿರುವ ಬಿಜೆಪಿ

ಸ್ವಾತಂತ್ರ್ಯ ದಿನಾಚರಣೆ : ಜಗಳೂರಿನಲ್ಲಿ ಕಾಂಗ್ರೆಸ್‌ನಿಂದ ನಡೆದ ಪಥಸಂಚಲನ ಕಾರ್ಯಕ್ರಮದಲ್ಲಿ ಕಿಡಿಕಾರಿದ ಮಾಜಿ ಶಾಸಕ ಎಚ್.ಪಿ.ರಾಜೇಶ್

ಜಗಳೂರು, ಆ.18- ಪಟ್ಟಣದ ಕಾಂಗ್ರೆಸ್ ಭವನದಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ  ರಾಷ್ಟ್ರ ಧ್ವಜ ಹಿಡಿದು ಪಥಸಂಚಲನ ನಡೆಸಿದರು.

ನಂತರ ಮಾತನಾಡಿದ ಮಾಜಿ ಶಾಸಕ ಎಚ್.ಪಿ.ರಾಜೇಶ್, ಅಂದು ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಪಡೆದಂತೆ ಇಂದು ಮೋದಿ ಮತ್ತು ಅವರ ಸರ್ವಾಧಿಕಾರತ್ವ ಕಂಪನಿ ವಿರುದ್ಧ ಹೋರಾಟ
ಮಾಡಿ ದೇಶದಲ್ಲಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವಂತಹ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು  ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು.

ನೂರು ವರ್ಷ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಜಾತ್ಯತೀತ ಹಾಗೂ ಪ್ರಜಾಪ್ರಭುತ್ವ ಮಾದರಿಯಲ್ಲಿ ದೇಶದ ಅಭಿವೃದ್ಧಿ ಹಾಗು ಬಡತನ, ನಿರುದ್ಯೋಗ ಮುಕ್ತ ದೇಶ ಮಾಡಲು ಕಾಂಗ್ರೆಸ್‌ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಶ್ರಮಿಸಿದೆ. ಹಿಂದುಳಿದ, ದಲಿತ, ಅಲ್ಪಸಂಖ್ಯಾತರಿಗೆ ಹಲವು  ಯೋಜನೆಗಳನ್ನು ಕೊಟ್ಟಿರುವ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದು ಬಣ್ಣಿಸಿದರು.

ಕಳೆದ ಏಳು ವರ್ಷಗಳಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ  ಬರೀ ಪೊಳ್ಳು ಭರವಸೆ ನೀಡಿ ಧರ್ಮ, ಸೈನಿಕರು, ಕೋಮುವಾದ, ಹೆಸರಿನಲ್ಲಿ ಭಾವನಾತ್ಮಕವಾಗಿ ಜನರ ಗಮನ ಸೆಳೆದು ಅಧಿಕಾರ ನಡೆಸುತಿದ್ದಾರೆ. 

ದೇಶದಲ್ಲಿ  ಬಡತನ, ಹಸಿವು, ನಿರುದ್ಯೋಗ, ಬೆಲೆ ಏರಿಕೆ ತಾಂಡವವಾಡುತ್ತಿವೆ. ಬಡವರು, ಕಾರ್ಮಿಕರು, ಮಧ್ಯಮ ವರ್ಗದ ಕುಟುಂಬಗಳು ಬೀದಿಗೆ ಬಂದಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಕೆಪಿಸಿಸಿ ಎಸ್ಟಿ ಘಟಕ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ದೇಶದ ಅಭಿವೃದ್ಧಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯವಿದೆ. ದೇಶದಲ್ಲಿ ಹಾಗು ರಾಜ್ಯದಲ್ಲಿ ಇರುವಂತಹ ಸುಳ್ಳಿನ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು. ಅದಕ್ಕಾಗಿ ಕಾರ್ಯಕರ್ತರು ನಮ್ಮ ಪಕ್ಷದ ತತ್ವ, ಸಿದ್ಧಾಂತ ಹಾಗು ಸಾಧನೆಗಳನ್ನು  ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.

ಈ ಸಂದರ್ಭದಲ್ಲಿ   ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್,   ತಾಲ್ಲೂಕು ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್,  ಮಾಜಿ ಅಧ್ಯಕ್ಷ ತಿಪ್ಪೇ ಸ್ವಾಮಿ ಗೌಡ್ರು, ಮುಖಂಡರಾದ  ಸಿ.ತಿಪ್ಪೇಸ್ವಾಮಿ, ಪಲ್ಲಾಗಟ್ಟೆ ಶೇಖರಪ್ಪ, ಪಟ್ಟಣ ಪಂಚಾಯಿತಿ ಸದಸ್ಯರಾದ ರವಿಕುಮಾರ್, ಮಂಜುನಾಥ್, ಶಕೀಲ್ ಅಹಮದ್, ಕೆಂಚಮ್ಮ,  ಸಾವಿತ್ರಮ್ಮ, ಲಕ್ಷ್ಮಿಬಾಯಿ, ಎಸ್.ಬಿ.ಕುಬೇಂದ್ರಪ್ಪ, ಬಿ.ಲೋಕೇಶ್. ವೆಂಕಟೇಶ್, ತಿಪ್ಪೇಸ್ವಾಮಿ,  ಅಹಮದ್ ಅಲಿ, ಪಿ.ರೇವಣ್ಣ, ಮುಂತಾದವರು ಇದ್ದರು.