ಸೌಲಭ್ಯಗಳ ದುರುಪಯೋಗ ಬೇಡ : ಜಿಲ್ಲಾಧಿಕಾರಿ ಬೀಳಗಿ ಸೂಚನೆ

ಸೌಲಭ್ಯಗಳ ದುರುಪಯೋಗ ಬೇಡ : ಜಿಲ್ಲಾಧಿಕಾರಿ ಬೀಳಗಿ ಸೂಚನೆ

ದಾವಣಗೆರೆ, ಆ.17- ಮಹಾನಗರ ಪಾಲಿಕೆ ವತಿಯಿಂದ ಮ್ಯಾನುಯಲ್ ಸ್ಕ್ಯಾವೆಂಜರ್ಸ್ ಗಳಿಗೆ ನೀಡಿರುವ ಬೀದಿಬದಿ ತಳ್ಳುವ ಗಾಡಿ, ಜೆರಾಕ್ಸ್ ಯಂತ್ರ, ಹೊಲಿಗೆ ಯಂತ್ರಗಳನ್ನು ಪಡೆದ ಫಲಾನುಭವಿಗಳ ಮನೆಗೆ ಖುದ್ದಾಗಿ ತೆರಳಿ ಅವರು ಇವುಗಳ ಸದುಪಯೋಗ ಪಡೆದುಕೊಳ್ಳುತ್ತಿರುವುದರ ಕುರಿತು ಪರೀಕ್ಷೆ ನಡೆಸಿ ಮಾಹಿತಿ ಕಲೆಹಾಕಬೇಕು. ದುರುಪಯೋಗ ಪಡಿಸಿಕೊಂಡಿದ್ದಲ್ಲಿ ಅಂತಹವರ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಗುರುತಿನ ಚೀಟಿಯನ್ನು ರದ್ದುಮಾಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಧಿಕಾರಿಗಳಿಗೆ ಸೂಚಿಸಿದರು.

ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮೇಲ್ವಿಚಾರಣಾ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪಾಲಿಕೆ ವತಿಯಿಂದ 20 ಜನರಿಗೆ ಬೀದಿಬದಿ ತಳ್ಳುವ ಗಾಡಿ, 46 ಜನರಿಗೆ ಜೆರಾಕ್ಸ್ ಯಂತ್ರ, 55 ಜನರಿಗೆ ಹೊಲಿಗೆ ಯಂತ್ರಗಳನ್ನು ನೀಡಲಾಗಿದ್ದು, ಇವರೆಲ್ಲರೂ ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ಪರೀಕ್ಷೆ ನಡೆಸಿ, ಫೋಟೋ ತೆಗೆದುಕೊಳ್ಳಬೇಕು ಎಂದರು. 

ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ನಜ್ಮಾ ಮಾತನಾಡಿ, ಜಿಲ್ಲೆಯಲ್ಲಿ 700:1 ಅನುಪಾತದಲ್ಲಿ ಒಟ್ಟು 943 ಪೌರಕಾರ್ಮಿಕರ ಹುದ್ದೆ ಮಂಜೂರಾಗಿದ್ದು, ಅದರಲ್ಲಿ 395 ಖಾಯಂ ಪೌರಕಾರ್ಮಿಕರು, 325 ನೇರ ಪಾವತಿ ಪೌರ ಕಾರ್ಮಿಕರು ಸೇರಿ ಒಟ್ಟು 720 ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೂ 223 ಹುದ್ದೆಗಳು ಖಾಲಿ ಉಳಿದಿವೆ. ಹಾಗೂ ವಿಶೇಷ ಮರುಸಮೀಕ್ಷೆಯಲ್ಲಿ ಗುರುತಿಸಿದ 380 ಜನ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‍ಗಳಿಗೆ ಗುರುತಿನ ಚೀಟಿ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಉಚ್ಚಿಂಗಪ್ಪ, ಫಲಾನುಭವಿಗಳಿಗೆ ದೊರಕಬೇಕಾದ ಸವಲತ್ತುಗಳು ಸಿಗುತ್ತಿಲ್ಲ. ಸಾಲ ಸೌಲಭ್ಯಕ್ಕಾಗಿ ಸಲ್ಲಿಸಿದ ಅರ್ಜಿಗಳಿಗೆ ಬ್ಯಾಂಕ್‍ಗಳಲ್ಲಿ ಲೋನ್ ನೀಡುತ್ತಿಲ್ಲ. ಇನ್ನೂ ಸಾಕಷ್ಟು ಜನರು ವಸತಿ ಸೌಲಭ್ಯವಿಲ್ಲದೇ ಹೆಣಗಾಡುತ್ತಿದ್ದಾರೆ. ಗುರುತಿನ ಚೀಟಿ ಸಮರ್ಪಕವಾಗಿ ವಿತರಣೆಯಾಗಿಲ್ಲ ಹಾಗೂ ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಸಮೀಕ್ಷೆಯಾಗಿಲ್ಲ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಮಾತನಾಡಿ, ಕೋವಿಡ್ ಮುಗಿದ ಬಳಿಕ ಸಮೀಕ್ಷೆ ನಡೆಸಲಾಗುವುದು ಹಾಗೂ ಯಾವ ಬ್ಯಾಂಕ್‍ಗಳಲ್ಲಿ ಲೋನ್ ನೀಡಲು ತಕರಾರು ಮಾಡುತ್ತಾರೆ ಎಂಬುದರ ಕುರಿತು ಪಟ್ಟಿ ಕೊಡಿ, ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‍ಗಳಿಗೆ ಗುರುತಿನ ಚೀಟಿ ನೀಡಿ. ಇದರಿಂದ ಅವರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ತಲುಪಿಸಲು ಅನುಕೂಲವಾಗುತ್ತದೆ ಎಂದರು. 

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ವಿಜಯ ಮಹಾಂತೇಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಕೌಸರ್ ರೇಷ್ಮಾ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.