ರೈತ, ಸೈನಿಕನ ಋಣ ತೀರಿಸಲು ಸಾಧ್ಯವಿಲ್ಲ

ರೈತ, ಸೈನಿಕನ ಋಣ ತೀರಿಸಲು ಸಾಧ್ಯವಿಲ್ಲ

ರಾಣೇಬೆನ್ನೂರು, ಆ.17- ದೇಶಕ್ಕೆ ಅನ್ನ ಕೊಡುವ ರೈತ, ದೇಶ ಕಾಯುವ ಸೈನಿಕ ಇವರುಗಳ ಋಣವನ್ನು ತೀರಿಸಲು ಯಾರಿಂದಲೂ ಸಾಧ್ಯ ವಿಲ್ಲ. ಇಂತಹ ಮಹಾತ್ಮರನ್ನು ಪೂಜಿಸಿ, ಗೌರವಿ ಸುವ ಪ್ರವೃತ್ತಿಯನ್ನು ಸರ್ವರೂ ಅಳವಡಿಸಿಕೊ ಳ್ಳಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕೋಳಿವಾಡ ಕರೆ ನೀಡಿದರು.

ಭಾರತೀಯ ಭೂ ಸೇನೆಯಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿರುವ ಗುತ್ತೆಪ್ಪ ಕರೆತಿಮ್ಮಣ್ಣನವರ
ಮತ್ತು ಅಡಿವೆಪ್ಪ ಗಿಂಡಿ ಹಾಗೂ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಗೆ ಹೊಸದಾಗಿ ನೇಮಕವಾಗಿರುವ ಗುತ್ತೆಪ್ಪ ಹುಲ್ಮನಿ ಇವರುಗಳಿಗೆ ಹೊಸ ಚಂದಾಪುರ ಗ್ರಾಮಸ್ಥರು ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು
ಅವರು ಮಾತನಾಡಿದರು. 

ಮಕ್ಕಳಿಗೆ ದೇಶಾಭಿಮಾನ, ಉತ್ತಮ ಸಂಸ್ಕೃತಿ, ಸಂಸ್ಕಾರ, ಧಾರ್ಮಿಕತೆಯ ಮನೋಭಾವನೆ ಬೆಳೆಸಿದಾಗ ಅಂತಹ ಮಕ್ಕಳು ಸಮಾಜದಲ್ಲಿ ಆದರ್ಶರಾಗಿರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ದೇಶಕ್ಕಾಗಿ ಹೋರಾಡಿದ ಮಹಾತ್ಮರ, ಶರಣರ, ದಾರ್ಶನಿಕರ ಜೀವನದ ಆದರ್ಶಗಳನ್ನು ಸರ್ವರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ನಾವು ಸಮಾಜದಲ್ಲಿ ಉತ್ತಮರಾಗಿರಲು ಸಾಧ್ಯವಾಗುತ್ತದೆ ಎಂದರು.

ಗ್ರಾಮಾಂತರ ವಿಭಾಗದ ಸಿಪಿಐ ಶ್ರೀಶೈಲ ಚೌಗಲಾ ಮಾತನಾಡಿ, ಸಿನಿಮಾದಲ್ಲಿ ಬರುವ ನಾಯಕರು ಹೀರೋಗಳಲ್ಲ. ದೇಶಕ್ಕೆ ಅನ್ನ ಕೊಡುವ ರೈತರು ಮತ್ತು ದೇಶ ಕಾಯುವ ಯೋಧರು ನಿಜವಾದ ಹೀರೋಗಳು. ಅಂತವರ ಭಾವಚಿತ್ರವನ್ನು ಮನೆಗಳಲ್ಲಿ, ಗ್ರಾಮಗಳಲ್ಲಿ ಹಾಕಿ ಪೂಜೆ ಮಾಡಿ ಆಗ  ನಿಜಕ್ಕೂ ದೇಶ ಪ್ರೇಮವನ್ನು ಮೆರೆದಂತಾಗುತ್ತದೆ ಎಂದರು.

ಗ್ರಾ.ಪಂ. ಮಾಜಿ ಅಧ್ಯಕ್ಷ ಏಕನಾಥ ಭಾನುವಳ್ಳಿ ಕಾರ್ಯಕ್ರಮ ಕುರಿತು ಮಾತನಾಡಿದರು. ಗ್ರಾ.ಪಂ. ಅಧ್ಯಕ್ಷೆ ರತ್ನವ್ವ ಬನ್ನಿಮಟ್ಟಿ, ಸದಸ್ಯರುಗಳಾದ ರಾಜಪ್ಪ ಚನ್ನಗೌಡ್ರ, ಮಾಲತೇಶ ನಾಣಾಪುರ, ರೇಣುಕಾ ಮೇವುಂಡಿ, ಗುಡ್ಡಪ್ಪ ಗಂಟಿ, ದೇವರಾಜ ಆನಿಶೆಟ್ರು, ಪುಟ್ಟಪ್ಪ ಗಂಟಿ, ಕವಿತಾ ಹರಿಜನ, ಗ್ರಾಮದ ಮುಖಂಡರಾದ ವಿರುಪಾಕ್ಷಪ್ಪ ಭಂಗಿ, ಪುಲಿಕೇಶಪ್ಪ ಬಣಕಾರ, ಅಡಿವೆಪ್ಪ ಗಿಂಡಿ, ರಾಜಶೇಖರ ಅಂಬಿಗೇರ, ಪುಟ್ಟಪ್ಪ ತಂಗೋಡ, ಸಿದ್ದಪ್ಪ ದುಂಡಿಯವರ, ಸೋಮಪ್ಪ ಗರ್ಭಗುಡಿ, ಸಚಿನ್ ಕುದರಿಹಾಳ, ಬಸವರಾಜ ಹುರಳಿ, ಅವಿನಾಶ ಮಾಳಗಿ, ವೀರಣ್ಣ ಕಂಚಾರಗಟ್ಟಿ, ವೀರಣ್ಣ ಕಂಬಳಿ, ರುದ್ರಪ್ಪ ಹುಲ್ಮನಿ, ವೀರಣ್ಣ ಕಂಬಳಿ, ರವಿ ಜಾಧವ, ಗಂಗಪ್ಪ ಗಂಟಿ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.