ಗಣೇಶ-ಮೊಹರಂ ಹಬ್ಬ ಸಾರ್ವಜನಿಕ ಆಚರಣೆ ಇಲ್ಲ

ಗಣೇಶ-ಮೊಹರಂ ಹಬ್ಬ ಸಾರ್ವಜನಿಕ ಆಚರಣೆ ಇಲ್ಲ

ದಾವಣಗೆರೆ, ಆ.17- ಇಲ್ಲಿಯವರೆಗೂ ಬಂದ ಎಲ್ಲಾ ಹಬ್ಬ-ಮಹೋತ್ಸವಗಳನ್ನು ಕೋವಿಡ್ ಮಾರ್ಗಸೂಚಿಯನ್ವಯ ಆಚರಿಸಿದ್ದು, ಮುಂಬರುವ ಗಣೇಶ ಹಾಗೂ ಮೊಹರಂ ಹಬ್ಬಗಳನ್ನು ಕೂಡ ಸಾರ್ವಜನಿಕವಾಗಿ ಆಚರಿಸದೆ ಕೋವಿಡ್ ನಿಯಮಾವಳಿಗಳನ್ವಯ ಸರಳವಾಗಿ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬದ ಪ್ರಯುಕ್ತ ಮಂಗಳವಾರ ಏರ್ಪಡಿಸಿದ್ದ ನಾಗರಿಕ ಸೌಹಾರ್ದ ಸಮನ್ವಯ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. 

ಕೋವಿಡ್-19 ಮಾರ್ಗಸೂಚಿಯನ್ವಯ ದೇವಸ್ಥಾನ, ಮಸೀದಿ, ಚರ್ಚ್‍ಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಯಾವುದೇ ಜಾತ್ರೆ, ವಿಶೇಷ ಪೂಜೆ, ಸಭೆ, ಸಮಾರಂಭ, ಮೆರವಣಿಗೆಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದರು.

ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮಾತನಾಡಿ, ಗಡಿ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಗೆ ಕೋವಿಡ್ ಸೋಂಕು ಒಂದೆರಡು ತಿಂಗಳು ತಡವಾಗಿ ಬರುತ್ತದೆ. ಇದರಿಂದ ಕೋವಿಡ್ ವಿರುದ್ಧ ಹೋರಾಡಲು ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಳ್ಳಲು ಹೆಚ್ಚಿನ ಸಮಯ ದೊರಕುತ್ತದೆ.  ಜನರು ಮಾರ್ಗಸೂಚಿ ಗಳನ್ನು ಕಡ್ಡಾಯವಾಗಿ ಪಾಲಿಸಿದರೆ ಕೊರೊನಾ ಸೋಂಕಿನಿಂದ ಆಗುವ ಸಾವು-ನೋವು ತಡೆಗಟ್ಟಬಹುದು ಎಂದರು.

ಪಾಲಿಕೆ ಮೇಯರ್ ಎಸ್.ಟಿ.ವೀರೇಶ್ ಮಾತನಾಡಿ, ಕೋವಿಡ್ ಸೋಂಕನ್ನು ಸಮರ್ಥವಾಗಿ ಎದುರಿಸಬೇಕಾದರೆ ಹಬ್ಬ-ಹರಿದಿನಗಳನ್ನು ಸಾಮಾಜಿಕವಾಗಿ ಆಚರಿಸ ದಂತೆ ಸ್ವಯಂ ಕಡಿವಾಣ ಹಾಕಿಕೊಳ್ಳಬೇಕು. ಯಾವುದೇ ದೇವರು, ಭಕ್ತಿ ಮತ್ತು ಸೇವೆಯನ್ನು ಆಪೇಕ್ಷಿಸುತ್ತಾರೆಯೇ ಹೊರತು ಆಡಂಬರವನ್ನಲ್ಲ ಎಂದರು.

ಆಯುಕ್ತ ವಿಶ್ವನಾಥ ಮುದಜ್ಜಿ ಮಾತನಾಡಿ, ಧಾರ್ಮಿಕ ಮುಖಂಡರು ತಮ್ಮ ಸಮುದಾಯದ ಜನರಿಗೆ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಲು ತಿಳುವಳಿಕೆ ನೀಡಬೇಕು. ಮೊಹರಂ ಹಬ್ಬದ ಪ್ರಯುಕ್ತ ಸ್ವಚ್ಚತೆ ಕುರಿತು ಹೆಚ್ಚಿನ ಗಮನ ಹರಿಸಲಾಗುವುದು. ನಗರದಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ಈಗಾಗಲೇ 30 ಕಡೆ ಸ್ಥಳ ನಿಗದಿಪಡಿಸಲಾಗಿದೆ. ಹೊರವಲಯ ದಲ್ಲಿ ಬಾತಿ ಕೆರೆ ಹಾಗೂ ಶಿರಮಗೊಂಡನ ಹಳ್ಳಿ ಬಳಿ ಅವಕಾಶ ಕಲ್ಪಿಸಲಾಗಿದ್ದು, ಅಲ್ಲಿಯೇ ವಿಸರ್ಜನೆ ಮಾಡಬೇಕು ಎಂದರು.

ಡಿಹೆಚ್‍ಓ ಡಾ.ನಾಗರಾಜ್ ಮಾತನಾಡಿ, ನಗರದ ಹಳೆ ಭಾಗದಿಂದ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ. ಎರಡು ಡೋಸ್ ವ್ಯಾಕ್ಸಿನೇಷನ್ ಮಾಡಿಸಿಕೊಂಡವರಿಗೆ ಕೋವಿಡ್ ಸೋಂಕು ಬರುವ ಸಾಧ್ಯತೆ ಕಡಿಮೆ ಇರುವುದರಿಂದ ಕಡ್ಡಾಯವಾಗಿ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಬೇಕು ಎಂದರು. ಪರಿಸರ ಇಲಾಖೆ ಅಧಿಕಾರಿ ಸಂತೋಷ್ ಮಾತನಾಡಿ,  ಸಾರ್ವಜನಿಕರು ಒಂದು ಅಡಿಗಿಂತ ಎತ್ತರದ ಗಣಪತಿ ಮೂರ್ತಿಗಳನ್ನು ಕೂರಿಸಬಾರದು. ಪಿಒಪಿ, ಪ್ಲಾಸ್ಟಿಕ್ ಗಣಪತಿ ಮೂರ್ತಿ ಬಳಕೆಯನ್ನು ನಿಷೇಧಿಸಲಾಗಿದೆ ಎಂದರು.

ಮೊಹರಂ ಆಚರಣೆಗೆ ಸರ್ಕಾರದ ಮಾರ್ಗಸೂಚಿ: ಸಾರ್ವಜನಿಕ ಸ್ಥಳಗಳಲ್ಲಿ ಆಲಂಗಳನ್ನು ಅಥವಾ ಪಂಜಾ ಸ್ಥಾಪಿಸುವುದನ್ನು ಹಾಗೂ ತಾಜಿಯಾವನ್ನು ನಿರ್ಬಂಧಿಸಲಾಗಿದೆ. ಆ.12 ರಿಂದ 20 ರವರೆಗೆ ಮೊಹರಂ ಪ್ರಾರ್ಥನಾ ಸಭೆ ಮತ್ತು ಮೆರವಣಿಗೆ ನಿಷೇಧಿಸಲಾಗಿದೆ.  ಸೂಕ್ತ ದೈಹಿಕ ಅಂತರ ಪಾಲಿಸಿ ಕನಿಷ್ಠ ಸಂಖ್ಯೆಯಲ್ಲಿ ಭಾಗಿಯಾಗಬಹುದು. ಪಂಜಾ, ಆಲಂ ಮತ್ತು ತಾಜಿಯತ್‍ಗಳನ್ನು ಜನರು ಮುಟ್ಟಬಾರದು. ಖಬರಸ್ಥಾನ್ ಒಳಗೊಂಡಂತೆ ಯಾವುದೇ ಖಾಲಿ ಜಾಗಗಳಲ್ಲಿ ಸಭೆ ಏರ್ಪಡಿಸುವುದನ್ನು ನಿರ್ಬಂಧಿಸಲಾಗಿದ್ದು, ದಫನ ಮಾಡಲು ಅನುಮತಿ ನೀಡಲಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಪ್ರಾರ್ಥನೆ ಮಾಡಬೇಕು.

ಹಿಂದೂ ಸಮಾಜದ ಮುಖಂಡ ಕೆ.ಬಿ.ಶಂಕರ ನಾರಾಯಣ್, ಮುಸ್ಲಿಂ ಸಮಾಜದ ಮುಖಂಡ ಸಿರಾಜ್ ಅಹ್ಮದ್, ಪಾಲಿಕೆ ಸದಸ್ಯ ಸ್ವಾಗಿ ಶಾಂತಕುಮಾರ್ ಮಾತನಾಡಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ. ರಾಜೀವ್, ಜಿಲ್ಲಾ ಸರ್ಜನ್ ಡಾ. ಜಯಪ್ರಕಾಶ್, ಉಪವಿಭಾಗಾಧಿಕಾರಿ ಶ್ರೀಮತಿ ಮಮತಾ ಹೊಸಗೌಡರ್ ಇತರರು ಸಭೆಯಲ್ಲಿದ್ದರು.