ಅನಧಿಕೃತ ಬಡಾವಣೆ ತೆರವಿಗೆ ನಿವೇಶನದಾರರ ವಿರೋಧ

ಅನಧಿಕೃತ ಬಡಾವಣೆ ತೆರವಿಗೆ ನಿವೇಶನದಾರರ ವಿರೋಧ

ಸಕ್ರಮಕ್ಕೆ ಗಡುವು ನೀಡಿದ ದೂಡಾ ಅಧ್ಯಕ್ಷ ಶಿವಕುಮಾರ್

ದಾವಣಗೆರೆ, ಆ.17- ದೂಡಾ ವ್ಯಾಪ್ತಿಯಲ್ಲಿನ ಕೃಷಿ ಜಮೀನಿನಲ್ಲಿ ಭೂ  ಪರಿವರ್ತಿಸದೇ, ನಿಯಮಾನುಸಾರವಾಗಿ ಉದ್ಯಾನವನ, ರಸ್ತೆ, ಚರಂಡಿಗೆ ಜಾಗ ಬಿಡದೇ ಅನಧಿಕೃತವಾಗಿ ಖಾಸಗಿ ಬಡಾವಣೆ ನಿರ್ಮಿಸಿದ್ದರ ಹಿನ್ನೆಲೆಯಲ್ಲಿ ನಗರದಲ್ಲಿ ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ನೇತೃತ್ವದಲ್ಲಿ ಆ ಬಡಾವಣೆಯನ್ನು ಇಂದು ತೆರವು ಗೊಳಿಸುವ ಕಾರ್ಯಾಚರಣೆ ಗಿಳಿಯಲಾಯಿತು.

ಈ ವೇಳೆ ಸ್ಥಳೀಯ ನಿವೇಶನದಾರರು ವಿರೋಧ ವ್ಯಕ್ತಪಡಿಸಿ ಸಮಯಾವಕಾಶ ನೀಡುವಂತೆ ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಅವರಲ್ಲಿ ಮನವಿ ಮಾಡಿದರು. ಇವರೊಂದಿಗೆ ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್, ಸದಸ್ಯರಾದ ಚಮನ್‍ಸಾಬ್, ಕಬೀರ್, ಜೆಡಿಎಸ್ ಮುಖಂಡ ಜೆ.ಅಮಾನುಲ್ಲಾ ಖಾನ್ ಮನವಿ ಮಾಡಿದರು. ಮನವಿ ಮೇರೆಗೆ ಅನಧಿಕೃತ ಬಡಾವಣೆಯನ್ನು ಸಕ್ರಮಗೊಳಿಸಲು ಸೋಮವಾರದವರೆಗೆ ಗಡುವು ನೀಡಿ, ತೆರವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಯಿತು.

ಬೂದಾಳು ರಸ್ತೆಯ ಕೃಷಿ ಜಮೀನನ್ನು ಯಾವುದೇ ರೀತಿಯಲ್ಲಿ ಭೂ ಪರಿವರ್ತನೆ ಮಾಡದೆ, ದೂಡಾಕ್ಕೆ ಶುಲ್ಕ ಪಾವತಿಸದೆ, ನಿಯಮಾನುಸಾರವಾಗಿ ರಸ್ತೆ, ಪಾರ್ಕ್ ಮತ್ತು ಚರಂಡಿಗೆ ಜಾಗ ಬಿಡದೆ ಅಂದಾಜು 150 ಎಕರೆಯಲ್ಲಿ ಅನಧಿಕೃತ ಬಡಾವಣೆ ನಿರ್ಮಿಸಿದ್ದಾರೆ. ಈ ಬಡಾವಣೆಗಳ ಮಾಲೀಕರಿಗೆ ಕಳೆದ 6 ತಿಂಗಳಿನಿಂದ ನೋಟಿಸ್ ನೀಡಿ, ಅನಧಿಕೃತ ಬಡಾವಣೆಯನ್ನು ಸಕ್ರಮ ಗೊಳಿಸಿಕೊಳ್ಳುವಂತೆ ಸೂಚಿಸಿದ್ದರೂ ಸಹ ಯಾರೂ ಸಕ್ರಮ ಮಾಡಿಕೊಳ್ಳಲು ಮುಂದಾಗಿರಲಿಲ್ಲ. ಅನಧಿಕೃತ ಬಡಾವಣೆ ತೆರವು ಕಾರ್ಯಾಚರಣೆ ನಡೆಸಲು ಮುಂದಾಗಿದ್ದೆವು. ಆದರೆ, ಇಲ್ಲಿನ ನಿವೇಶನ ದಾರರು, ಪಾಲಿಕೆ ಸದಸ್ಯರು ಮತ್ತು ಸ್ಥಳೀಯ ಮುಖಂಡರ ಮನವಿಯ ಮೇರೆಗೆ ಸಕ್ರಮಗೊಳಿಸಿ ಕೊಳ್ಳಲು ಸೋಮವಾರದವರೆಗೆ ಗಡುವು ನೀಡಿ, ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ ಎಂದು ಪತ್ರಕರ್ತರಿಗೆ ತಿಳಿಸಿದರು.

ಸೋಮವಾರದೊಳಗೆ ಎಲ್ಲಾ ದಾಖಲಾತಿಗಳನ್ನು ದೂಡಾಕ್ಕೆ ನೀಡಿ, ಶುಲ್ಕ ಪಾವತಿಸಿ ಅಕ್ರಮ ಬಡಾವಣೆಗಳನ್ನು ಸಕ್ರಮಗೊಳಿಸಿಕೊಳ್ಳಬೇಕು. ಕಾನೂನು ಚೌಕಟ್ಟಿನಲ್ಲಿ ಬಡಾವಣೆ ಅಭಿವೃದ್ಧಿ ಪಡಿಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಅನಧಿಕೃತ ಬಡಾವಣೆ ನಿರ್ಮಾಣಕ್ಕೆ ಇನ್ನು ಮುಂದೆ ಯಾವುದೇ ಕಾರಣಕ್ಕೂ ಆಸ್ಪದ ನೀಡುವುದಿಲ್ಲ ಎಂದು ಮುನ್ನೆಚ್ಚರಿಸಿದರು.

ಈ ಸಂದರ್ಭದಲ್ಲಿ ದೂಡಾ ಅಧಿಕಾರಿ ಶ್ರೀಕರ್ ಸೇರಿದಂತೆ ಇತರರು ಇದ್ದರು.