ಸಿಜಿ ಆಸ್ಪತ್ರೆಯಲ್ಲಿ ಇಲ್ಲದ ಎಂಆರ್ಐ ಸ್ಕ್ಯಾನ್ : ಬಡ ರೋಗಿಗಳು ಪರದಾಟ

ಮಾನ್ಯರೇ, 

ಜಿಲ್ಲಾ ಉಸ್ತುವಾರಿ ಸಚಿವರುಗಳೇ ಹಾಗೂ ಸಂಸದರೇ, ರಾಜ್ಯದ ಮಧ್ಯ ಕರ್ನಾಟಕದ ಜಿಲ್ಲೆ ಎಂದೇ ಖ್ಯಾತಿ ಹೊಂದಿರುವ ಜಿಲ್ಲೆಯ ನಾಗರಿಕರಿಗೆ ತಾವುಗಳು ಸರ್ಕಾರದ ಸೌಲಭ್ಯಗಳನ್ನು ತರುವಲ್ಲಿ ಎಷ್ಟರ ಮಟ್ಟಿಗೆ ಹಿಂದೆ ಇದ್ದೀರಾ ಎಂಬುದಕ್ಕೆ ಮತ್ತೊಂದು ಉದಾಹರಣೆಯೆಂದರೆ ಎಂಆರ್ಐ ಸ್ಕ್ಯಾನ್ ಸೆಂಟರ್.

20 ಲಕ್ಷ ಜನಸಂಖ್ಯೆಯಿರುವ ದಾವಣಗೆರೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಒಂದೂ ಎಂಆರ್ಐ ಸ್ಕ್ಯಾನ್ ಸೆಂಟರ್ ಇಲ್ಲದಿರುವುದು ತುಂಬಾ ಬೇಸರದ ಸಂಗತಿಯಾಗಿದೆ. ವೈದ್ಯರು ರೋಗಿಗಳಿಗೆ ಸ್ಕ್ಯಾನಿಂಗ್ ಮಾಡಿಸಲು ತಿಳಿಸಿದರೆ, ರೋಗಿಗಳು ಸಾವಿರಾರು ರೂ.ಗಳನ್ನು ಕೊಟ್ಟು ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಸ್ಕ್ಯಾನಿಂಗ್ ಮಾಡಿಸಬೇಕಾಗಿದೆ.

ನಗರದ ಸಿ.ಜೆ ಆಸ್ಪತ್ರೆಯಲ್ಲಿ ಕೇವಲ ಸಿಟಿ ಸ್ಕ್ಯಾನ್ ಇದ್ದು, ಅಲ್ಲಿ ಎಂಆರ್ಐ ಸ್ಕ್ಯಾನಿಂಗ್ ಬಗ್ಗೆ ವಿಚಾರಿಸಿದರೆ, ಪಕ್ಕದ ಜಿಲ್ಲೆ ಚಿತ್ರದುರ್ಗಕ್ಕೆ ಹೋಗಲು ಅಥವಾ ಖಾಸಗಿ ಸ್ಕ್ಯಾನಿಂಗ್ ಸೆಂಟರ್ ಹೋಗಲು ತಿಳಿಸುತ್ತಾರೆ.

ಜಿಲ್ಲಾ ಉಸ್ತುವಾರಿ ಸಚಿವರುಗಳು, ಸಂಸದರು ಹಾಗೂ ಜನಪ್ರತಿನಿಧಿಗಳು ಇದರ ಬಗ್ಗೆ ಸರ್ಕಾರದ ಗಮನಕ್ಕೇ ತಂದು ಆದಷ್ಟು ಬೇಗ ಜಿಲ್ಲೆಯ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ಕಾರ್ಯ ಮಾಡಬೇಕಾಗಿದೆ.


– ಕೆ.ಎಲ್.ಹರೀಶ್, ಬಸಾಪುರ