ರೈತರ ಮಕ್ಕಳಿಗೆ ಶಿಷ್ಯ ವೇತನ ವಿದ್ಯಾರ್ಥಿಗಳ ನಡುವೆ ತಾರತಮ್ಯ

ಮಾನ್ಯರೇ,

ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಒತ್ತು ಕೊಡಲು ಮತ್ತು ಪ್ರೋತ್ಸಾಹಿಸಲು ಶಿಷ್ಯವೇತನದ ಹೊಸ  ಯೋಜನೆಯನ್ನು ಜಾರಿಗೆ ತಂದಿದ್ದಾರೆ ಸ್ವಾಗತಾರ್ಹ. ಆದರೆ ಈ ಯೋಜನೆಯನ್ನು ಕೇವಲ ರೈತರ ಮಕ್ಕಳಿಗೆ ಮಾತ್ರ ಸೀಮಿತವಾಗಿಸಿರುವುದೇ ಬೇಸರದ ಸಂಗತಿ. ಹಾಗಾದರೆ ಮುಖ್ಯಮಂತ್ರಿಗಳ ಪ್ರಕಾರ ರೈತರಲ್ಲದ ಮಕ್ಕಳಿಗೆ  ಶಿಷ್ಯವೇತನದ ಅವಶ್ಯಕತೆ ಇಲ್ಲವೇ? ಇವರಲ್ಲೂ ಪ್ರತಿಭಾವಂತ ವಿದ್ಯಾರ್ಥಿಗಳಿಲ್ಲವೇ? ರೈತರಲ್ಲದ ಮಕ್ಕಳು ಉನ್ನತ ಶಿಕ್ಷಣ  ಪಡೆಯಬಾರದೇ? ಸರ್ಕಾರದ ಮಟ್ಟದಲ್ಲಿಯೇ ಯಾಕೀ ನಿರ್ಲಕ್ಷ್ಯ? ಮಲತಾಯಿ ಧೋರಣೆ ಏಕೆ? ಮುಖ್ಯಮಂತ್ರಿ ಗಳಿಂದಲೇ ವಿದ್ಯಾರ್ಥಿಗಳ ನಡುವೆ ತಾರತಮ್ಯ ಭಾವನೆ ಮೂಡಿಸುತ್ತಿರುವುದೇಕೆ? 

ಮುಖ್ಯಮಂತ್ರಿಗಳೇ, ರಾಜ್ಯದಲ್ಲಿ ಇಂದಿಗೂ ಕೂಡ  ಕಿತ್ತು ತಿನ್ನುವ ಬಡತನದ ನಡುವೆಯೇ ಲಕ್ಷಾಂತರ ಸಂಖ್ಯೆಯ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿದ್ದಾರೆ, ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಕೂಡ ಒಂದು ಇಂಚು ತುಂಡು ಭೂಮಿ ಹೊಂದಿರದ ಲಕ್ಷಾಂತರ ಕುಟುಂಬಗಳಿವೆ, ಅಂತಹವರನ್ನು ಗುರುತಿಸಿ, ಪ್ರೋತ್ಸಾಹಿಸಿ, ಎತ್ತರದ ಮಟ್ಟಕ್ಕೆ ಬೆಳೆಸುವ  ಔದಾರ್ಯತೆ ಮೆರೆಯಿರಿ. 

 ಕೇವಲ ರೈತರ ಮಕ್ಕಳಿಗಷ್ಟೇ ಗಮನ ನೀಡುವ ಬದಲು, ರೈತರಲ್ಲದ ಮಕ್ಕಳಿಗೂ ಶಿಷ್ಯವೇತನವನ್ನು ವಿಸ್ತರಿಸಿ ಲಕ್ಷಾಂತರ ಸಂಖ್ಯೆಯ ವಿದ್ಯಾರ್ಥಿಗಳಿಗೆ ದಾರಿದೀಪವಾಗಬೇಕಾಗಿದೆ.


– ಡಿ. ಮುರುಗೇಶ, ದಾವಣಗೆರೆ.