ಜವಳಿ ನಗರ ಮ್ಯಾಂಚೆಸ್ಟರ್ ಖ್ಯಾತಿಯೋ… ಬೆಣ್ಣೆ ಘಮಘಮವೋ…

ಜವಳಿ ನಗರ ಮ್ಯಾಂಚೆಸ್ಟರ್ ಖ್ಯಾತಿಯೋ… ಬೆಣ್ಣೆ ಘಮಘಮವೋ…

ಹತ್ತಿ ಗಿರಣಿಗಳ ಸಾಧನೆಯ ಫಲವಾಗಿ `ಕರ್ನಾಟಕದ ಮ್ಯಾಂಚೆಸ್ಟರ್’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ, ಆನಂತರ ವಿದ್ಯಾಕೇಂದ್ರವಾಗಿ ಅಪಾರ ಹಿರಿಮೆ ಗಳಿಸಿ ಹಿಗ್ಗುತ್ತಿದ್ದ ದಾವಣಗೆರೆ ಈಗ  `ಬೆಣ್ಣೆ ದೋಸೆ’ ನಗರಿ ಎಂಬ ರುಚಿ ಖಾದ್ಯದ ವಿಶೇಷತೆ ಪಡೆದು ಘಮಘಮಿಸತೊಡಗಿದೆ.

ಬಡವರ ಬಂಧು, ಧರ್ಮಪ್ರಕಾಶ ರಾಜನಹಳ್ಳಿ ಹನುಮಂತಪ್ಪನವರ ಆಸಕ್ತಿ ಮತ್ತು  ಶ್ರಮದಿಂದ ದಾವಣಗೆರೆ ನಗರದಲ್ಲಿ ಪ್ರಪ್ರಥಮವಾಗಿ ಆರಂಭವಾದ,  ಡಿಸಿಎಂ ಎಂದೇ ಜಗದ್ವಿಖ್ಯಾತ ವಾಗಿದ್ದ ದಾವಣಗೆರೆ ಕಾಟನ್ ಮಿಲ್, ಅದೇ ಕಾಲಕ್ಕೆ ಚಿಗಟೇರಿ, ಗುಂಡಿ   ಮತ್ತಿತರೆ ಮನೆತನದ ಗಣ್ಯರು ಆರಂಭಿಸಿದ   ಹತ್ತಿ ಗಿರಣಿಗಳಿಂದಾಗಿ  ದುಡಿಯುವ ಬಡ ಕಾರ್ಮಿಕರ ಕೈಗೆ ಬಲ ಬಂದಿತ್ತು. ನೂಲು ಮತ್ತು ಬಟ್ಟೆ ಉತ್ಪಾದನೆಯಲ್ಲಿ ಅದ್ವಿತೀಯ ಸಾಧನೆ ಮಾಡಿದ ಫಲಶೃತಿಯೇ    ಹೆಗ್ಗಳಿಕೆಗೆ ಕಾರಣಿಭೂತವಾಗಿತ್ತು. 

ಆಗ ಊರೆಲ್ಲ ಕೆಂಪು-ಕೆಂಪಾಗಿ,  ಅರಳಿ-ನರಳಿದ ಕರಾಳ ದಿನಗಳ ನೆನಪು ಮಾತ್ರ ಮಾಸುವುದಿಲ್ಲ. ಆದರೆ ಮ್ಯಾಂಚೆಸ್ಟರ್ ಖ್ಯಾತಿಗೆ ಪಾತ್ರವಾಗಿದ್ದ ಹತ್ತಿಗಿರಣಿಗಳ ಅವನತಿ ಆದಂತೆ,  ಆ ಖ್ಯಾತಿ ಮಾಸಿ ಈಗಾಗಲೇ ದಶಕಗಳೇ ಕಳೆದಿವೆ. ಆದರೂ ಆ ನಂಟು ಯಾವತ್ತೂ ದಾವಣಗೆರೆ ಹೆಸರಿಗೆ, ಕೀರ್ತಿಗೆ ತಳಕು ಹಾಕಿಕೊಂಡೇ ಇರುತ್ತದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಆದರೆ, ಇತ್ತೀಚೆಗೆ ದಾವಣಗೆರೆ ಖ್ಯಾತಿಯನ್ನು ಕೆಲವರು ತಮಾಷೆ ಗಾಗಿಯೋ ಅಥವಾ ಇನ್ಯಾವ ಉದ್ದೇಶಕ್ಕೋ `ಬೆಣ್ಣೆ ದೋಸೆ ನಗರ’ ಮತ್ತು            `ಬೆಣ್ಣಿ ನಗರಿ’  ಎಂಬ ರುಚಿ ನಾಮದಿಂದ ವಿಶ್ವಪ್ರಖ್ಯಾತಿ ಗೊಳಿಸತೊಡಗಿದ್ದಾರೆ. ಇದನ್ನು ಕೆಲವರು ತಮಾಷೆ ಯಾಗಿಯೇ ತೆಗೆದುಕೊಂಡಿ ದ್ದರೆ, ಮತ್ತೆ ಕೆಲವರು ತುಸು ಕೋಪ, ಮುನಿಸು, ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ನವ ಪೀಳಿಗೆಗೆ ದಾವಣಗೆರೆ ಇತಿಹಾಸದ ಅರಿವಿನ ಕೊರತೆ ಇರುವುದು ಇಂತಹ ಕುಹಕದಿಂದ ಗೊತ್ತಾಗುತ್ತದೆ ಎನ್ನುತ್ತಾರೆ  ಎಸ್.ನಿಜಲಿಂಗಪ್ಪ ಬಡಾವಣೆ ವಾಸಿ ಗಣೇಶಪ್ಪ. 

ಮ್ಯಾಂಚೆಸ್ಟರ್  ಖ್ಯಾತಿ ನಶಿಸಿದ ನಂತರ ಶೈಕ್ಷಣಿಕವಾಗಿ ಉನ್ನತಿ ಸಾಧಿಸಿ `ಸರಸ್ವತಿ ದೇಗುಲ’ ಮತ್ತು `ಶಿಕ್ಷಣ ನಗರಿ’  ಎಂಬ ಅಭಿದಾನಕ್ಕೆ ಪಾತ್ರವಾಗಿ, ವಾಣಿಜ್ಯ ಕೇಂದ್ರವಾಗಿ ದೇಶದ ಆರ್ಥಿಕತೆಗೆ ದೊಡ್ಡ  ಕೊಡುಗೆಯನ್ನೇ ನೀಡಿರುವ ನಗರಕ್ಕೆ ಇದೀಗ ಸ್ಮಾರ್ಟ್ ಸಿಟಿಯ ಖ್ಯಾತಿ.!      

ಇಷ್ಟೆಲ್ಲಾ ಐತಿಹಾಸಿಕ ಹಿನ್ನೆಲೆಯ ದಾವಣಗೆರೆ ಕೆಲವರ ಬಾಯಲ್ಲಿ ಬಾಯಿರುಚಿಯ `ಬೆಣ್ಣೆ ದೋಸೆ’ ನಗರವಾಗಿಬಿಟ್ಟಿದೆ.! ಇನ್ನು ತಿಂಡಿ ವಿಚಾರವಾಗಿ ಬಂದರೆ ದಾವಣಗೆರೆಯಲ್ಲಿ ಈ ಹಿಂದಿನಿಂದಲೂ ಅನೇಕ ಬಗೆಯ ರುಚಿಯಾದ ತಿಂಡಿ-ತಿನಿಸುಗಳನ್ನು ಕಾಣಬಹುದಿತ್ತು. 

ಹೊಟ್ಟೆ ನಂಜಪ್ಪ  ಅಂಗಡಿ ಖಾರಾ-ಮಂಡಕ್ಕಿ ಮೆಣಸಿನಕಾಯಿ, ಅತ್ತಿ ಕಾಯಿ, ಚಿಪ್ಸ್, ಘಾಟಿ, ಮೈಸೂರು ಪಾಕ್, ಬೂಂದಿ ರುಚಿಯನ್ನು  ಏನಾದರೂ ಇವರುಗಳು ನೋಡಿದ್ದರೆ, ಈ  ಎಲ್ಲಾ ತಿಂಡಿಗಳ ಹೆಸರುಗಳನ್ನೂ ಸಹ ದಾವಣಗೆರೆ ಖ್ಯಾತಿಗೆ ಅಂಟಿಸಿ ಬಿಡುತ್ತಿದ್ದರೋ ಏನೋ ಗೊತ್ತಿಲ್ಲ. ಆಗಿನ ತಂಬಾಕು ಪೇಟೆ, ಈಗಿನ ವಿಜಯಲಕ್ಷ್ಮಿ ರಸ್ತೆಯಲ್ಲಿದ್ದ ನಂಜಪ್ಪನವರ ಅಂಗಡಿ ತಿಂಡಿಗಳು ನಗರ ಮಾತ್ರವಲ್ಲ, ದೇಶ-ವಿದೇಶಗಳಲ್ಲೂ ಸಹ ಪ್ರಖ್ಯಾತವಾಗಿ ದ್ದವು. ಅಲ್ಲದೆ ಇಂತಹ ಅನೇಕ ಖ್ಯಾತನಾಮರ ತಿಂಡಿ ಅಂಗಡಿಗಳು ಹೆಸರುವಾಸಿಯಾಗಿದ್ದವು. 

ಬಹಳಷ್ಟು ಹಿರಿಯರಿಗೆ  ಗೊತ್ತಿರಬಹುದು. ಸ್ವಾತಂತ್ರ್ಯ ಪೂರ್ವದಲ್ಲಿಯೇ ನಗರಕ್ಕೆ ಬಹುದೊಡ್ಡ ಹೆಸರು ತಂದುಕೊಟ್ಟಿದ್ದ ಶಾಂತಪ್ಪ, ಮಹಾದೇವಪ್ಪ ಅವರ ದೋಸೆ ಹೋಟೆಲ್‌ಗಳನ್ನು  ದಾವಣಗೆರೆಯ ದೋಸೆ ಪ್ರಿಯರು ಯಾವತ್ತೂ ಮರೆಯುವುದಿಲ್ಲ. ಈಗಲೂ ಅವರ ಮಕ್ಕಳು, ಮೊಮ್ಮಕ್ಕಳು, ಅವರಲ್ಲಿ ಕೆಲಸ ಮಾಡಿದ ಅನುಭವಿಗಳು ನಗರದ ಅನೇಕ ಕಡೆ, ಅಕ್ಕ-ಪಕ್ಕದ  ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ `ದಾವಣಗೆರೆ ಬೆಣ್ಣೆ ದೋಸೆ’ ಹೋಟೆಲ್‌ಗಳನ್ನು ಯಶಸ್ವಿಯಾಗಿ ಮುನ್ನಡೆಸುವ ಕಾಯಕದಲ್ಲಿ ತೊಡಗಿದ್ದಾರೆ. ಅಲ್ಲದೆ ರುಚಿ, ಸ್ವಾದವನ್ನು ಇನ್ನಷ್ಟು  ಹೆಚ್ಚಿಸಿದ್ದಾರೆ. ಜೊತೆಗೆ ದಾವಣಗೆರೆ ಹೆಸರನ್ನೂ ಕೂಡಾ. 

ಇನ್ನು  ಗಡಿಯಾರ ಕಂಬದ ಬಳಿ ಇದ್ದ ಸವಿತಾ ಹೋಟೆಲ್, ಗಾಂಧಿ ಸರ್ಕಲ್ ಹತ್ತಿರದ ಮೋತಿ ಹೋಟೆಲ್ ಮತ್ತು  ಚೌಕಿಪೇಟೆಯಲ್ಲಿದ್ದ ಮಂಜು ನಾಥ ಇನ್ನೂ ಅನೇಕ ಹೋಟೆಲ್‌ಗಳು  ಮಸಾಲೆ ದೋಸೆಗೆ ಹೆಸರುವಾಸಿಯಾಗಿದ್ದವು. ಅಶೋಕ ಥಿಯೇಟರ್ ಎದುರಿಗಿದ್ದ ಸಿಂಧೆ ಹೋಟೆಲ್ ಓಪನ್ ಬೆಣ್ಣೆ ದೋಸೆಯ ರುಚಿ, ಗಾತ್ರ ಹೊಟ್ಟೆ ತುಂಬಿಸುತ್ತಿತ್ತು. ಮತ್ತೆ ಸಂಜೆ ಬಾಣಲೆಯಲ್ಲಿ ಕುದಿಯುತ್ತಿದ್ದ ಘಮಘಮಿಸುವ ಬಾದಾಮಿ ಹಾಲಿನ ರುಚಿಯನ್ನು ಕುಡಿದವರೇ ಬಲ್ಲರು. ದೋಸೆ ಖ್ಯಾತಿ ಆಗಲೂ ಇತ್ತು. ಆದರೆ ಅದು ನಗರದ  ಖ್ಯಾತಿಗೆ ತಗಲಾಕಿಕೊಂಡಿರಲಿಲ್ಲ. ತಗಲಾಕುವ ಮನಸ್ಥಿತಿ ಉಳ್ಳವರೂ ಆಗ ಇರಲಿಲ್ಲ ಬಿಡಿ.

ಧಾರವಾಡ ಪೇಡ ಅಂದರೆ ಯಾರು ಇಷ್ಟಪಡುವುದಿಲ್ಲ ಹೇಳಿ, ಹಾಗೆಯೇ ಚೂಡಾಕ್ಕೆ ಸವಣೂರು, ಬೆಳಗಾವಿ ಕುಂದಾದಂತೆ, ದಾವಣಗೆರೆ `ಮಂಡಕ್ಕಿ-ಮೆಣಸಿನ್ಕಾಯಿ’ ತಿಂಡಿಗೂ ಹೆಸರುವಾಸಿ ಹಾಗಂತ ದಾವಣಗೆರೆಯನ್ನು `ಮಿರ್ಚಿ- ಮಂಡಕ್ಕಿ’ ನಗರ ಎಂದೂ ಕರೆಯಬಹುದಲ್ಲವೇ?


ಉತ್ತಂಗಿ ಕೊಟ್ರೇಶ್
uttangi.kotresh123@gmail.com