ಬೊಮ್ಮಾಯಿ ಆಯ್ಕೆ ರಾಜಕೀಯ ಅಸ್ಥಿರತೆ ಹೋಗಲಾಡಿಸಿದೆ

ಚಿತ್ರದುರ್ಗ, ಜು. 28 – ರಾಜಕಾರಣ ಸಾರ್ವಜನಿಕರ ಮತ್ತು ರಾಜಕಾರಣಿಗಳ ನಿದ್ದೆಯನ್ನು ಕೆಡಿಸುತ್ತದೆ. ಕಾರಣ ರಾಜಕೀಯ ಅಸ್ಥಿರತೆ. ಇದು ರಾಜಕಾರಣವನ್ನು ಅಸ್ತವ್ಯಸ್ತಗೊಳಿಸುತ್ತದೆ. ಇಲ್ಲಿ ಸ್ಥಿರತೆ ಬೇಕಿದೆ. ಅದು ಈಗ ಆಗುತ್ತಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ನುಡಿದರು.

ಇಂದಿಲ್ಲಿ ಶ್ರೀಮಠದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶರಣರು,
ಮೊನ್ನೆ ಅರಮನೆ ಮೈದಾನದಲ್ಲಿ ನೂರಾರು ಸ್ವಾಮಿಗಳು ಸೇರಿ ರಾಜಕೀಯ ಅಸ್ಥಿರತೆ ಸರಿಯಾಗಲೆಂದು ನಮ್ಮ ಅಭಿಪ್ರಾಯ ವ್ಯಕ್ತಪಡಿಸಿದೆವು. ಬಸವರಾಜ ಬೊಮ್ಮಾಯಿ ಯವರು ಈಗ ಮುಖ್ಯ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಇದು ರಾಜಕೀಯ ಅಸ್ಥಿರತೆಯನ್ನು ಹೋಗಲಾಡಿಸಿದೆ. ಸರ್ವ ಜನಾಂಗವನ್ನು ಅವರು ಸರಿದೂಗಿಸಿಕೊಂಡು ಹೋಗಲಿ. ಅವರು ಹೋರಾಟದ ಮುಖಾಂತರ ಬಂದವರು. ವೈಚಾರಿಕ ಚಿಂತನೆಯುಳ್ಳವರು. ಅವರ ತಂದೆಯ ರಾಜಕೀಯ ಜೀವನವನ್ನು ನಾವು ನೋಡಿದ್ದೇವೆ. ಅವರ ದಾರಿಯಲ್ಲಿ ಇವರು ಉತ್ತಮ ಸೇವೆ ನೀಡಲಿ ಎಂದು ಆಶಿಸುತ್ತೇವೆ. ರಾಜಕೀಯ ಅಸ್ಥಿರತೆಯನ್ನು ಶಾಶ್ವತವಾಗಿ ನಿವಾರಿಸಲಿ. ಬಿ.ಎಸ್. ಯಡಿಯೂರಪ್ಪ ಅವರ ಗರಡಿಯಲ್ಲಿ ಪಳಗಿದ್ದಾರೆ. ಹಾಗಾಗಿ ಅವರು ಉತ್ತಮ ಸರ್ಕಾರ ನೀಡುತ್ತಾರೆಂದು ಆಶಯ ವ್ಯಕ್ತಪಡಿಸಿದರು.

ಸಂತರ ಕರ್ತವ್ಯ ಸಂಕಟದಲ್ಲಿರುವವರಿಗೆ ಸಾಂತ್ವನ ಹೇಳುವುದು. ಮುಖ್ಯಮಂತ್ರಿ ಸ್ಥಾನ ಯಾವ ಮಠದ್ದೂ ಅಲ್ಲ. ರಾಜ್ಯದ ಪ್ರಜೆಗಳು ಆ ಸ್ಥಾನವನ್ನು ನಿರ್ಧರಿಸುತ್ತಾರೆ. ಯಡಿಯೂರಪ್ಪನವರ ನಿಕಟವರ್ತಿಗಳಾದ ಬೊಮ್ಮಾಯಿಯವರನ್ನು ಆಯ್ಕೆ ಮಾಡಿರುವುದು ಹೈಕಮಾಂಡ್‍ನ ಪ್ರಬುದ್ಧ ನಡೆಯಾಗಿದೆ ಎಂದರು.

ಯಡಿಯೂರಪ್ಪನವರು ಈ ಮೊದಲು ಅಭಿವೃದ್ಧಿ ಪರ ಆಡಳಿತ ನೀಡಿದ್ದರು. ಪ್ರಧಾನಮಂತ್ರಿಗಳೂ ಸಹ ಅವರ ಆಡಳಿತ ವೈಖರಿಯನ್ನು ಹೃದಯತುಂಬಿ ಹೊಗಳಿದ್ದಾರೆ. ದೊಡ್ಡಮಟ್ಟದಲ್ಲಿ ಮಠಾಧೀಶರು ಬೆಂಗಳೂರಿನಲ್ಲಿ ಸೇರಿದ್ದು ಸಹ ಹೈಕಮಾಂಡ್ ಗಮನಕ್ಕೆ ಬಂದಿರಬಹುದು. ಬೊಮ್ಮಾಯಿ ಅವರು ಉತ್ತಮ ಆಡಳಿತ ನೀಡುತ್ತಾರೆಂಬ ಭರವಸೆ ನಮಗೆ ಇದೆ. ಭದ್ರಾ ಮೇಲ್ದಂಡೆ ಯೋಜನೆ ತೀವ್ರಗತಿಯಲ್ಲಿ ಸಾಗಲಿ ಎಂಬುದರ ಬಗ್ಗೆ ಅವರೊಡನೆ ಚರ್ಚಿಸಲಾಗುವುದು. ನಾಳೆ ಗೋಕಾಕ್ ಸಮೀಪದ ಪ್ರವಾಹ ಸಂತ್ರಸ್ತರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಎಸ್.ಷಡಾಕ್ಷರಯ್ಯ ಮೊದಲಾದವರಿದ್ದರು.