7.5 ಲಕ್ಷಕ್ಕೂ ಅಧಿಕ ಮೌಲ್ಯದ ಪಡಿತರ ವಶ: ಇಬ್ಬರ ಬಂಧನ

ದಾವಣಗೆರೆ, ಜು.27- ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿರುವ ಇಲ್ಲಿನ ಪೊಲೀಸರು ಇಬ್ಬರನ್ನು ಬಂಧಿಸಿ, 7.56 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.

ನಗರದ ಜಿಲ್ಲಾ ಪಂಚಾಯತ್ ಕಛೇರಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿಹರದಿಂದ ಚಿತ್ರದುರ್ಗದ ಕಡೆಗೆ ಎರಡು ಲಾರಿಗಳಲ್ಲಿ ಪಡಿತರ ಅಕ್ಕಿಯನ್ನು ಗೋಣಿ ಚೀಲಗಳಿಂದ ತೆಗೆದು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ಭತ್ತ ಸಾಗಾಟ ಮಾಡುತ್ತಿರುವುದಾಗಿ ಬಿಲ್ಲಿನಲ್ಲಿ ನಮೂದಿಸಿಕೊಂಡು ಪಡಿತರ ಅಕ್ಕಿಯನ್ನು ಇಂದು ಬೆಳಿಗ್ಗೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಈ ವೇಳೆ ವಿದ್ಯಾನಗರ ಪೊಲೀಸ್ ಠಾಣೆಯ ಪಿಎಸ್ಐ ರೇಣುಕಾ ಜಿ. ಮುಗಳಿಹಾಳ್ ಅವರು ಆಹಾರ ನಿರೀಕ್ಷಕರಾದ ಶಬಾನ ಪರ್ವೀನ್ ಅವರ ಸಹಿತ ಸಿಬ್ಬಂದಿಗಳನ್ನೊಳಗೊಂಡ ತಂಡದೊಂದಿಗೆ ದಾಳಿ ನಡೆಸಿ, ಎರಡು ಲಾರಿಗಳನ್ನು ತಡೆದು ಪರಿಶೀಲಿಸಿದ್ದಾರೆ. 

ಲಾರಿಗಳಲ್ಲಿ ಯಾರಿಗೂ ಗೊತ್ತಾಗಬಾರದು ಎಂದು ಮೊದಲು ಸ್ವಲ್ಪ ಭತ್ತದ ಚೀಲಗಳನ್ನು ತುಂಬಿದ್ದು, ಒಳಗಡೆ ಪ್ಲಾಸ್ಟಿಕ್ ಚೀಲದಲ್ಲಿ ಪಡಿತರ ಅಕ್ಕಿ ಕಂಡುಬಂದ ಮೇರೆಗೆ ಲಾರಿಯನ್ನು ಮತ್ತು ಚಾಲಕರನ್ನು ವಶಕ್ಕೆ ಪಡೆಯಲಾಗಿದೆ.

ಒಂದು ಲಾರಿಯಲ್ಲಿ 18,600 ಕೆ.ಜಿ ಪಡಿತರ ಅಕ್ಕಿ ಮತ್ತು ಸ್ವಲ್ಪ ಭತ್ತದ ಚೀಲಗಳು ಮತ್ತು ಇನ್ನೊಂದು ಲಾರಿಯಲ್ಲಿ 19,240 ಕೆ.ಜಿ ಅಕ್ಕಿ ಮತ್ತು ಸ್ವಲ್ಪ ಭತ್ತ ಇದ್ದದ್ದು ಕಂಡು ಬಂದಿದೆ. ಒಟ್ಟು 7,56,800‌ ರೂ. ಮೌಲ್ಯದ 37,840 ಕೆ.ಜಿ ಪಡಿತರ ಅಕ್ಕಿ ಮತ್ತು ಎರಡು ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

 ಪಡಿತರ ಅಕ್ಕಿ ರಾಣೇಬೆನ್ನೂರಿನಿಂದ ತುಮಕೂರಿಗೆ ಸಾಗಾಟವಾಗುತ್ತಿರುವ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ತನಿಖೆ ಮುಂದುವರೆದಿದೆ.

ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರ ಡಿವೈಎಸ್ಪಿ ನಾಗೇಶ್ ಐತಾಳ್ ಮಾರ್ಗದರ್ಶನದಲ್ಲಿ ದಕ್ಷಿಣ ಸಿಪಿಐ ಗುರುಬಸವರಾಜ್, ವಿದ್ಯಾನಗರ ಠಾಣೆಯ ಪಿಎಸ್ಐಗಳಾದ ರೇಣುಕಾ ಜಿ. ಮುಗಳಿಹಾಳ್, ರೂಪ ತೆಂಬದ್ ಮತ್ತು ಸಿಬ್ಬಂದಿಗಳಾದ ಶಶಿಧರ್, ಚಮನ್ ಐರಣಿ, ನರೇಂದ್ರ ಸ್ವಾಮಿ, ಮಂಜುನಾಥ, ಗಿರಿಧರ್, ಆನಂದ್, ಕಣ್ಣಪ್ಪ, ಸಂತೋಷ್, ಯೋಗೀಶ್ ನಾಯ್ಕ, ಮಂಜುನಾಥ ಈ ಪ್ರಕರಣದ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.